ಶಾಸಕ ಸ್ಥಾನದಿಂದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ ವಜಾಗೊಳಿಸುವಂತೆ ಸ್ಪೀಕರ್‌ಗೆ ದೂರು

Update: 2024-02-18 13:12 GMT

ಬೆಂಗಳೂರು: ಮಂಗಳೂರಿನ ಜೆರೋಸಾ ಶಾಳೆಯ ಘಟನೆಗೆ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕರಾದ ಹಾಗೂ ಭರತ್ ಶೆಟ್ಟಿ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ವಿಧಾನಪರಿಷತ್ ಮಾಜಿ ಸದಸ್ಯ ಐವಾನ್ ಡಿಸೋಜಾ ನೇತೃತ್ವದ ಕಾಂಗ್ರೆಸ್ ಮುಖಂಡರ ನಿಯೋಗವು ಆಗ್ರಹಿಸಿದೆ.

ಈ ಸಂಬಂಧ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ದೂರು ಸಲ್ಲಿಸಿರುವ ಕಾಂಗ್ರೆಸ್ ಮುಖಂಡರ ನಿಯೋಗವು, ವೇದವ್ಯಾಸ ಕಾಮತ್ ಜೆರೋಸಾ ಶಾಲೆಯ ಮುಂದೆ ಅಕ್ರಮವಾಗಿ ತನ್ನ ಬೆಂಬಲಿಗರನ್ನು ಮತ್ತು ಪೋಷಕರನ್ನು ಸೇರಿಸಿ ಪ್ರತಿಭಟನೆ ನಡೆಸಿ, ಆ ಮೂಲಕ ಕೋಮು ಸಾಮರಸ್ಯ ಕದಡುವ ಯತ್ನ ಮಾಡಿದ್ದಾರೆ ಎಂದು ದೂರಿದೆ.

ಒಬ್ಬ ಜನಪ್ರತಿನಿಧಿಯಾಗಿ ಯಾವುದೆ ಅನಪೇಕ್ಷಿತ ಘಟನೆಯಾದರೂ ಅದರ ಬಗ್ಗೆ ಕೂಲಂಕಷ ತನಿಖೆ ಮಾಡಿಸುವುದು ಶಾಸಕನ ಕರ್ತವ್ಯ. ಅದು ಬಿಟ್ಟು ಶಾಲೆಯ ಶಿಕ್ಷಕಿ ಬಗ್ಗೆ ಆರೋಪ ಬಂದ ಕೂಡಲೆ ಶಾಲೆಯ ಹೊರಗಡೆ ನಿಂತು ಪ್ರತಿಭಟನೆ ನಡೆಸಿ, ಮಕ್ಕಳನ್ನು ಅದೇ ಶಾಲೆಯ ವಿರುದ್ಧ ಎತ್ತಿಕಟ್ಟಿದ್ದಾರೆ ಎಂದು ನಿಯೋಗವು ಅಸಮಾಧಾನ ವ್ಯಕ್ತಪಡಿಸಿದೆ.

ಆರೋಪದ ಬಗ್ಗೆ ಶಾಲೆಯ ಪಿಟಿಎ ಅಥವಾ ಮುಖ್ಯ ಶಿಕ್ಷಕಿಗೆ ಪೋಷಕರು ಲಿಖಿತ ದೂರನ್ನು ನೀಡಿಲ್ಲ. ಆಡಿಯೋ ವೈರಲ್ ಆಗಿದ್ದನ್ನೆ ಮುಂದಿಟ್ಟು ವೇದವ್ಯಾಸ ಕಾಮತ್ ಮತ್ತು ಭರತ್ ಶೆಟ್ಟಿ ಪ್ರತಿಭಟನೆ ನಡೆಸಿದ್ದಾರೆ. ಜನಪ್ರತಿನಿಧಿಯಾಗಿ ಆಯ್ಕೆಯಾದ ಬಳಿಕ ಎಲ್ಲರನ್ನೂ ಸಮಾನವಾಗಿ ಕಾಣುವುದಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಶಾಸಕರು, ಈ ವಿಚಾರದಲ್ಲಿ ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂದು ನಿಯೋಗ ದೂರಿದೆ.

ಭರತ್ ಶೆಟ್ಟಿ ಕ್ರೈಸ್ತರ ಶಾಲೆಗಳನ್ನು ಬಹಿಷ್ಕರಿಸುವಂತೆ ಹೇಳಿ ಪ್ರಚೋದಿಸಿದ್ದಾರೆ. ಹೀಗಾಗಿ ಅವರಿಬ್ಬರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ. ದೂರಿನ ಜೊತೆಗೆ ಆಡಿಯೋ, ವಿಡಿಯೋ ಕ್ಲಿಪ್ಪಿಂಗ್, ಪಾಂಡೇಶ್ವರ ಠಾಣೆಯಲ್ಲಿ ದಾಖಲಾದ ಎಫ್‍ಐಆರ್ ಪ್ರತಿ, ಮಹಿಳೆಯೊಬ್ಬರ ಆಡಿಯೋ ವೈರಲ್ ಬಗ್ಗೆ ನೀಡಿರುವ ದೂರಿನ ಪ್ರತಿಯನ್ನು ಸ್ಪೀಕರ್ ಗೆ ನೀಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News