ಜನಹಿತ ಮರೆತ ಕಾಂಗ್ರೆಸ್ ಸರಕಾರ: ಬಿ.ಎಸ್. ಯಡಿಯೂರಪ್ಪ ವಾಗ್ದಾಳಿ
ಬೆಂಗಳೂರು: ಭೀಕರ ಬರಗಾಲ, ಕುಡಿಯುವ ನೀರಿನ ಹಾಹಾಕಾರ, ಕೆಆರ್ ಎಸ್ ಸೇರಿ ಜಲಾಶಯಗಳು ಖಾಲಿ ಆಗಿದ್ದರೂ ಪಕ್ಕದ ರಾಜ್ಯಕ್ಕೆ ನೀರು ಹರಿಸುತ್ತಿರುವುದು ಈ ಸರಕಾರ ಜನಹಿತವನ್ನು ಸಂಪೂರ್ಣ ಮರೆತಿರುವುದಕ್ಕೆ ಸ್ಪಷ್ಟ ಉದಾಹರಣೆ ಎಂದು ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಟೀಕಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬ ಆಚರಣೆ ಹಾಗೂ ಕಾಂಗ್ರೆಸ್ ಸರಕಾರದ ವೈಫಲ್ಯವನ್ನು ಖಂಡಿಸಿ ರೈತ ನಾಯಕ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ರಾಜ್ಯಾದ್ಯಂತ ಪ್ರವಾಸದ ಪ್ರಾರಂಭದ ಹಿನ್ನೆಲೆಯಲ್ಲಿ ಕೋಲಾರದ ಮುಳಬಾಗಿಲಿನ ಕುರುಡುಮಲೆ ಗಣಪತಿ ದೇವಸ್ಥಾನದಲ್ಲಿ ಪೂಜೆಯ ಬಳಿಕ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.
ʼʼನಾನು ಮುಖ್ಯಮಂತ್ರಿಯಾಗಿದ್ದಾಗ ಬರಗಾಲವಿದ್ದರೂ ಏಕಾಂಗಿಯಾಗಿ ರಾಜ್ಯದ ಉದ್ದಗಲಕ್ಕೆ ಪ್ರವಾಸ ಮಾಡಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೆ. ಮನೆ ಹಾನಿ ಸಂಬಂಧ 50 ಸಾವಿರದ ಬದಲಾಗಿ 5 ಲಕ್ಷ ಪರಿಹಾರ ಕೊಡಲಾಯಿತು. ಸಿದ್ದರಾಮಯ್ಯರ ಸರಕಾರದ ಯಾವೊಬ್ಬ ಸಚಿವರೂ ಬರಗಾಲದ ಕುರಿತು ತುಟಿ ಪಿಟಿಕ್ ಎನ್ನುತ್ತಿಲ್ಲʼʼ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ʼʼಬರಗಾಲದ ಮಾರ್ಗಸೂಚಿ ಬದಲಿಸಲು ಕೇಂದ್ರ ಸರಕಾರಕ್ಕೆ ಪತ್ರ ಬರೆದು ರಾಜಕೀಯ ದೊಂಬರಾಟ ಮಾಡುತ್ತಿದ್ದಾರೆ. ರಾಜ್ಯ ಸರಕಾರ ಮಳೆ ಕೊರತೆ ಸಾಧ್ಯತೆ ಗಮನಿಸಿ ಯಾವುದೇ ಮುನ್ನೆಚ್ಚರಿಕೆ ಕ್ರಮ ವಹಿಸಿಲ್ಲ. ಇದರಿಂದ ರೈತರಿಗೆ ಮಳೆಯೂ ಇಲ್ಲದೆ, ಪಂಪ್ ಸೆಟ್‍ಗಳಿಗೆ ವಿದ್ಯುತ್ ಇಲ್ಲದಂತಾಗಿದೆʼʼ ಎಂದು ವಿವರಿಸಿದರು.
ʼʼಕಾಂಗ್ರೆಸ್ ಸರಕಾರ ಕರ್ನಾಟಕದಲ್ಲಿ ಈಗಾಗಲೇ ಜನಮನ್ನಣೆಯನ್ನು ಕಳೆದುಕೊಂಡಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಎಲ್ಲ ಸ್ಥಾನಗಳನ್ನು ಗೆಲ್ಲಲು ಶ್ರಮಿಸಲಾಗುವುದುʼʼ ಎಂದು ತಿಳಿಸಿದರು.
ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಆಶೀರ್ವಾದ ಪಡೆಯುವ ದೃಷ್ಟಿಯಿಂದ ಕುರುಡುಮಲೆ ದೇವಸ್ಥಾನಕ್ಕೆ ಬಂದಿದ್ದೇವೆ. ನರೇಂದ್ರ ಮೋದಿಜಿ ಅವರ ಆರೋಗ್ಯ ವೃದ್ಧಿ, ಅವರು ಮತ್ತೊಮ್ಮೆ ಭಾರತ ದೇಶದ ಪ್ರಧಾನಿಯಾಗಲಿ ಪ್ರಾರ್ಥನೆ ಮಾಡಿದ್ದಾಗಿ ಅವರು ವಿವರಿಸಿದರು.
ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಮಾತನಾಡಿ, ಜನಜಾಗೃತಿ ಮತ್ತು ಕಾಂಗ್ರೆಸ್ಸಿಗರನ್ನು ಸರಿದಾರಿಗೆ ತರುವ ಪ್ರಯತ್ನದ ಅಂಗವಾಗಿ ಈ ಪ್ರವಾಸ ನಡೆಯಲಿದೆ. ಬಿಜೆಪಿಯ ಅನೇಕ ಜನಪರ ಯೋಜನೆಗಳನ್ನು ಕಾಂಗ್ರೆಸ್ ಸರಕಾರ ಕೈಬಿಟ್ಟಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಜನವಿರೋಧಿ ಆಡಳಿತದ ವಿರುದ್ಧ ಜನಾಂದೋಲನಕ್ಕೆ ಬಿಜೆಪಿ ಮುಂದಾಗಿದೆ. ಸಂಸತ್ ಅಧಿವೇಶನ, ಗಣೇಶ, ಗೌರಿ ಹಬ್ಬದ ಬಳಿಕ ಎಲ್ಲ 224 ಕ್ಷೇತ್ರಗಳಿಗೂ ಬಿಜೆಪಿ ನಾಯಕರು ತೆರಳಿ ಸಿದ್ದರಾಮಯ್ಯ ಸರಕಾರದ ಜನವಿರೋಧಿ ನೀತಿಯನ್ನು ತಿಳಿಸಲಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಹಿರಿಯ ಮುಖಂಡರಾದ ಕೆ.ಎಸ್.ಈಶ್ವರಪ್ಪ, ಗೋವಿಂದ ಕಾರಜೋಳ, ಸಂಸದ ಮುನಿಸ್ವಾಮಿ, ಸಚಿವರಾದ ಡಾ.ಅಶ್ವತ್ಥನಾರಾಯಣ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಮುಖಂಡ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಜಿಲ್ಲಾಧ್ಯಕ್ಷ ವೇಣುಗೋಪಾಲ್ ಮತ್ತಿತರ ಪ್ರಮುಖರು ಭಾಗವಹಿಸಿದ್ದರು