ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಗಿಫ್ಟ್ ಹಂಚಿ ಗೆಲ್ಲಲು ಹೊರಟಿದೆ : ಕುಮಾರಸ್ವಾಮಿ

Update: 2024-05-26 14:02 GMT

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹಣ, ಗಿಫ್ಟ್ ಗಳನ್ನು ಹಂಚಿ ಗೆಲುವು ಸಾಧಿಸಲು ಹೊರಟಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.

ರವಿವಾರ ಜೆಡಿಎಸ್ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ನಡೆದ ಬೆಂಗಳೂರು ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಕುರಿತ ಜೆಡಿಎಸ್-ಬಿಜೆಪಿ ಸಮನ್ವಯ ಸಭೆಯಲ್ಲಿ ಪಾಲ್ಗೊಂಡು ಅವರು ಮತನಾಡಿದರು.

ಶಿಕ್ಷಕರು, ಪದವೀಧರರು ಮತ ಹಾಕುವ ಈ ಚುನಾವಣೆಯನ್ನು ಕಾಂಗ್ರೆಸ್ ಕಲುಷಿತಗೊಳಿಸುತ್ತಿದೆ. ಹಣ, ಗಿಫ್ಟ್, ಕೂಪನ್ ಹಂಚುವ ಕೆಲಸವನ್ನು ಯಥೇಚ್ಛವಾಗಿ ಮಾಡುತ್ತಿದೆ. ಈಗಾಗಲೇ ಅಧಿಕಾರಿಗಳು ಅನೇಕ ಕಡೆ ದಾಳಿ ನಡೆಸಿ ಕಾಂಗ್ರೆಸ್ ಅಭ್ಯರ್ಥಿ ಹಂಚುತ್ತಿದ್ದ ಗಿಫ್ಟ್ ಬಾಕ್ಸ್‌ ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಹೇಳಿದರು.

ಹಣದ ಆಮಿಷ ಒಡ್ಡಿ ಮತ ಪಡೆಯುವ ಕೆಲಸ ಮಾಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ವಿದ್ಯಾವಂತರಾದ ಪದವೀಧರರು ತಕ್ಕ ಪಾಠ ಕಲಿಸಬೇಕು. ಎರಡೂ ಪಕ್ಷಗಳ ಕಾರ್ಯಕರ್ತರು ಈ ಷಡ್ಯಂತ್ರ್ಯವನ್ನು ಒಗ್ಗಟ್ಟಿನಿಂದ ಎದುರಿಸಬೇಕು ಎಂದು ಅವರು ತಿಳಿಸಿದರು.

ಜೆಡಿಎಸ್-ಬಿಜೆಪಿ ಮೈತ್ರಿ ಐತಿಹಾಸಿಕ. ಪ್ರಧಾನಿ ನರೇಂದ್ರ ಮೋದಿ ಹಾಗೂ ದೇವೆಗೌಡರ ನೇತೃತ್ವದಲ್ಲಿ ಆಗಿರುವ ಈ ಮೈತ್ರಿಯನ್ನು ಎರಡೂ ಪಕ್ಷಗಳ ಕಾರ್ಯಕರ್ತರು ಮುಕ್ತವಾಗಿ ಸ್ವಾಗತಿಸಿದ್ದಾರೆ. ಈ ಚುನಾವಣೆಯಲ್ಲಿ ಒಳ್ಳೆಯ ಫಲಿತಾಂಶ ಬರುತ್ತದೆ. ಇದನ್ನು ಸಹಿಸಿಕೊಳ್ಳಲು ಕಾಂಗ್ರೆಸ್‌ ಗೆ ಆಗುತ್ತಿಲ್ಲ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಬ್ರ್ಯಾಂಡ್ ಹೆಸರಿನಲ್ಲಿ ಬೆಂಗಳೂರು ಲೂಟಿ..!

ಈ ವರ್ಷ ಮಳೆಗೆ ಮನೆಗಳಿಗೆ ನೀರು ನುಗ್ಗಿದ್ದು, ಜನರು ಮನೆ ಖಾಲಿ ಮಾಡಿ ಹೋಟೆಲ್ ಗಳಲ್ಲಿ ವಾಸ ಮಾಡುತ್ತಿದ್ದಾರೆ. ಇದು ಬ್ರ್ಯಾಂಡ್ ಬೆಂಗಳೂರು ಅಲ್ಲ, ಲೂಟಿ ಬೆಂಗಳೂರು. ಅಲ್ಲದೆ, ನಗರದ ಅಭಿವೃದ್ಧಿ ಹಿಮ್ಮುಖವಾಗಿ ಚಲಿಸುತ್ತಿದೆ. ಕಳೆದ ಒಂದು ವರ್ಷದಿಂದ ಒಂದೇ ಒಂದು ಕಾಮಗಾರಿ ಬೆಂಗಳೂರಿನಲ್ಲಿ ಆಗಿಲ್ಲ. ಅಭಿವೃದ್ಧಿ ಕೆಲಸ ನಿಂತು ಹೋಗಿದೆ. ಗ್ಯಾರಂಟಿಗಳ ಮಾತ್ರ ಕಡೆ ಗಮನ ಕೊಟ್ಟು ಅಭಿವೃದ್ಧಿ ಕಡೆಗಣಿಸಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News