ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 20 ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸವಿದೆ: ಡಿಸಿಎಂ ಡಿ.ಕೆ ಶಿವಕುಮಾರ್

Update: 2024-03-16 16:11 GMT

ಬೆಂಗಳೂರು: "ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ 20 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸ ನನಗಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಸದಾಶಿವನಗರ ನಿವಾಸದಲ್ಲಿ ಚುನಾವಣಾ ದಿನಾಂಕ ಪ್ರಕಟ ಸಂಬಂಧ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ  ಅವರು, "ಚುನಾವಣೆ ಪ್ರಜಾಪ್ರಭುತ್ವದ ಹಬ್ಬ. ಇಲ್ಲಿ ನಾವು ಹೋರಾಟ ಮಾಡಬೇಕು. ಅದನ್ನು ಸಂಭ್ರಮಿಸಿ, ಆನಂದಿಸಬೇಕು. ನಾವು ಮಾಡಿರುವ ಸಾಧನೆ ಬಗ್ಗೆ ಜನರಿಗೆ ಮನವರಿಕೆ ಮಾಡಬೇಕು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಾವು 20ಕ್ಕಿಂತ ಹೆಚ್ಚು ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸವಿದೆ. ನಾವು ನಮ್ಮ ಅಭ್ಯರ್ಥಿಗಳನ್ನು ಬಹುತೇಕ ಅಂತಿಮಗೊಳಿಸಿದ್ದೇವೆ" ಎಂದು ಹೇಳಿದರು.

"ಭಾರತ ಜೋಡೋ ಯಾತ್ರೆ ಸಮಾರೋಪ ಹಾಗೂ ಇಂಡಿಯಾ ಒಕ್ಕೂಟ ಸಭೆ ಹಿನ್ನೆಲೆಯಲ್ಲಿ ಸಿಇಸಿ ಸಭೆ ಮುಂದೂಡಲಾಗಿದೆ. 19ರಂದು ಈ ಸಭೆ ನಡೆಯುವ ಸಾಧ್ಯತೆ ಇದೆ. ನಂತರ ಉಳಿದ ಅಭ್ಯರ್ಥಿ ಅಂತಿಮ ಮಾಡಲಾಗುವುದು" ಎಂದರು.

ದೇವೇಗೌಡರ ಕುಟುಂಬದ ವಿರುದ್ಧದ ಮೊದಲ ಹೋರಾಟವಲ್ಲ:

 "ನಾವು ದೇವೇಗೌಡ ಕುಟುಂಬದ ವಿರುದ್ಧ ಅನೇಕ ಬಾರಿ ಹೋರಾಟ ಮಾಡಿದ್ದೇವೆ. ನಾನು ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಅವರನ್ನು ಎದುರಿಸಿ ಸೋಲಿಸಿದ್ದೇವೆ. ಈ ಹಿಂದೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯನ್ನು ಎದುರಿಸಿದ್ದೇವೆ" ಎಂದು ತಿಳಿಸಿದರು.

ತಮಗೆ ಅನುಕೂಲವಾಗುವಂತೆ ದಿನಾಂಕ ನಿಗದಿ ಮಾಡುತ್ತಾರೆ

ಪ್ರಧಾನಮಂತ್ರಿಗಳ ಅನುಕೂಲಕ್ಕೆ ಮಹಾರಾಷ್ಟ್ರದಲ್ಲಿ ಐದು ಹಂತಗಳ ಚುನಾವಣೆ ನಡೆಯಲಿದೆ ಎಂಬ ಆರೋಪದ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ "ಬಿಜೆಪಿ ಅಧಿಕಾರದಲ್ಲಿ ಇದ್ದಾಗ ತಮಗೆ ಅನುಕೂಲವಾಗುವಂತೆ ದಿನಾಂಕ ನಿಗದಿ ಮಾಡುತ್ತಾರೆ. ಈ ಬಗ್ಗೆ ಆರೋಪ ಮಾಡುತ್ತಾ ಸಮಯ ವ್ಯರ್ಥ ಮಾಡುವುದು ಬೇಡ. ನಾವು ನಮ್ಮ ತಯಾರಿ ಮಾಡೋಣ" ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News