ಕೆ.ಎಚ್.ಮುನಿಯಪ್ಪಗೆ ಸಿಎಂ ಹುದ್ದೆ ನೀಡಿ ಕಾಂಗ್ರೆಸ್ ಬದ್ಧತೆ ಮೆರೆಯಲಿ: ಮಾದಾರ ಚನ್ನಯ್ಯ ಸ್ವಾಮೀಜಿ

Update: 2024-11-17 14:35 GMT

ಬೆಂಗಳೂರು: ಎರಡು ತಿಂಗಳಲ್ಲಿ ಸಮಗ್ರ ಮಾಹಿತಿಗಳನ್ನು ಆಧರಿಸಿ ಮಾದಿಗ ಸಮುದಾಯದ ಹಕ್ಕಾಗಿರುವ ಒಳ ಮೀಸಲಾತಿ ಜಾರಿಗೊಳಿಸಬೇಕು. ಅಲ್ಲದೆ, ಕೆ.ಎಚ್.ಮುನಿಯಪ್ಪರಿಗೆ ಮುಖ್ಯಮಂತ್ರಿ ಹುದ್ದೆಯನ್ನು ನೀಡಿ ತಳ ಸಮುದಾಯದ ಪರ ಕಾಂಗ್ರೆಸ್ ಪಕ್ಷವು ತನ್ನ ಬದ್ಧತೆಯನ್ನು ಪ್ರದರ್ಶಿಸಬೇಕು ಎಂದು ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಆಗ್ರಹಿಸಿದ್ದಾರೆ.

ರವಿವಾರ ನಗರದ ಗಾಂಧಿಭವನದಲ್ಲಿ ಕರ್ನಾಟಕ ರಾಜ್ಯ ಮಾದಿಗ ಪ್ರಾಧ್ಯಾಪಕರ ವೇದಿಕೆ ವತಿಯಿಂದ ನಡೆದ ‘ಒಳಮೀಸಲಾತಿ: ಚಿಂತನ-ಮಂಥನ’ದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಚಿತ್ರದುರ್ಗದಲ್ಲಿ ನಡೆದ ಎಸ್‍ಸಿ/ಎಸ್‍ಟಿ ಐಕ್ಯತಾ ಸಮಾವೇಶದಲ್ಲಿ ಮತ್ತು ತನ್ನ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷವು ನ್ಯಾ. ಸದಾಶಿವ ಆಯೋಗದ ವರದಿಯನ್ನು ಮೊದಲ ಸಂಪುಟ ಸಭೆಯಲ್ಲಿಯೇ ಜಾರಿಗೆ ತರುವ ಭರವಸೆ ನೀಡಿತ್ತು. ಈ ಕುರಿತಂತೆ ಈಗ ಎಚ್ಚೆತ್ತಿರುವ ಸರಕಾರ ಅಂಕಿ-ಅಂಶಗಳ ವರದಿಗಾಗಿ ಹೊಸ ಆಯೋಗ ರಚಿಸಿದೆ. ಇದು ಕೂಡಲೇ ಮುಗಿದು ಎರಡು ತಿಂಗಳಲ್ಲಿ ಒಳಮೀಸಲಾತಿ ಜಾರಿಯಾಗಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಮಾದಿಗ ಸಮುದಾಯದ ಒಬ್ಬರಿಗೂ ಉನ್ನತ ಹುದ್ದೆಯನ್ನು ನೀಡಿಲ್ಲ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿರುವ ಮಾದಿಗ ಸಮುದಾಯದ ಅಧಿಕಾರಿಗಳ ಸಂಖ್ಯೆಯೂ ಕಡಿಮೆಯಿದೆ. ಸಾಮಾಜಿಕ ನ್ಯಾಯದ ಮೇಲೆ ನಂಬಿಕೆ ಇಟ್ಟಿರುವ ಸಿದ್ದರಾಮಯ್ಯ ಮಾದಿಗ ಸಮುದಾಯದ ಕಡೆಗೆ ಕಣ್ಣಾಯಿಸಬೇಕು ಎಂದು ಸ್ವಾಮೀಜಿ ಹೇಳಿದರು.

ಮಾದಿಗ ಸಮುದಾಯದ ಕೆ.ಎಚ್.ಮುನಿಯಪ್ಪ ಅವರು ನಾಲ್ಕು ದಶಕಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಬಲವಾಗಿ ನಿಂತಿದ್ದಾರೆ. ಏಳು ಬಾರಿ ಸಂಸದರಾಗಿದ್ದ ಅವರು 3 ಬಾರಿ ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿದ್ದು. ಪ್ರಸ್ತುತ ಆಹಾರ ಸಚಿವರಾಗಿ ತಮ್ಮ ನಿಷ್ಠೆಯ ಸೇವೆಯನ್ನು ಮುಂದುವರಿಸುತ್ತಿದ್ದಾರೆ. ಈ ದೀರ್ಘಕಾಲದ ತ್ಯಾಗವನ್ನು ಗೌರವಿಸಿ ಕಾಂಗ್ರೆಸ್ ಹೈಕಮಾಂಡ್ ಕೆ.ಎಚ್.ಮುನಿಯಪ್ಪರನ್ನು ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡಬೇಕು ಎಂದು ಸ್ವಾಮೀಜಿ ಮನವಿ ಮಾಡಿದರು.

ಸುಪ್ರೀಂ ಕೋರ್ಟ್ ತೀರ್ಪಿನಂತೆ ಹರಿಯಾಣ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಸರಕಾರಗಳು ತಮ್ಮ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಜಾರಿಗೊಳಿಸಲು ತೀರ್ಮಾನ ಮಾಡಿವೆ. ನಮ್ಮ ರಾಜ್ಯ ಸರಕಾರವು ಎರಡು ತಿಂಗಳಲ್ಲಿ ಸಮಗ್ರ ಮಾಹಿತಿಗಳನ್ನು ಆಧರಿಸಿ ಒಳ ಮೀಸಲಾತಿ ಜಾರಿಗೊಳಿಸಬೇಕು. ಸಾಮಾಜಿಕ ನ್ಯಾಯಕ್ಕಾಗಿ ಮಾದಿಗ ಸಮುದಾಯ ಕಾಯುವ ನಿರೀಕ್ಷೆಯ ಮಿತಿಯನ್ನು ದಾಟುತ್ತಿದೆ. ಸರಕಾರ ತಕ್ಷಣ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಸ್ವಾಮೀಜಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಹೊಸಪೇಟೆ ಮಠದ ಪೂರ್ಣಾನಂದ ಭಾರತಿ ಸ್ವಾಮೀಜಿ, ಮಾಜಿ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ, ಮಾಜಿ ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಹಾಗೂ ಇತರರು ಉಪಸ್ಥಿತರಿದ್ದರು.

‘ಮಾದಿಗ ಸಮುದಾಯವು ತಾಳ್ಮೆಯ ಗಡಿ ದಾಟುತ್ತಿದೆ. ದಶಕಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಸಮರ್ಥವಾಗಿ ಮತ ಚಲಾಯಿಸುತ್ತಿರುವ ಸಮುದಾಯ, ತಮಗೆ ಸೇರಿದ ನ್ಯಾಯ ಹಾಗೂ ಪ್ರೋತ್ಸಾಹಕ್ಕಾಗಿ ನಿರಂತರ ನಿರೀಕ್ಷೆಯಲ್ಲಿದೆ. ಈವರೆಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಥವಾ ಉಪಮುಖ್ಯಮಂತ್ರಿ ಸ್ಥಾನ ಸಮುದಾಯದವರಿಗೆ ನೀಡಲಿಲ್ಲ. ಪ್ರಸ್ತುತ ಸಂಪುಟದಲ್ಲಿಯೂ ಸಮುದಾಯದ ಪ್ರತಿನಿಧಿಗಳಿಗೆ ಸೂಕ್ತ ಖಾತೆ ಅಥವಾ ಪ್ರಭಾವಿ ಸ್ಥಾನಮಾನ ನೀಡಲಿಲ್ಲ’

-ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಮಾದಾರ ಚನ್ನಯ್ಯ ಗುರುಪೀಠ

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News