ವ್ಯಂಗ್ಯಾತ್ಮಕ ಟ್ವೀಟ್‌ ಮಾಡಿದ ಕಾಂಗ್ರೆಸ್; ಕಾನೂನು ಕ್ರಮ ಕೈಗೊಳ್ಳುವುದಾಗಿ ಸಿ.ಟಿ ರವಿ ಎಚ್ಚರಿಕೆ

Update: 2024-01-05 10:02 GMT

Photo: facebook.com/CTRaviBJP

ಬೆಂಗಳೂರು: ನನ್ನ ಮಾನ ಹಾನಿ ಮಾಡುವ ಪೋಸ್ಟ್ ಅನ್ನು ಕೂಡಲೇ ಡಿಲೀಟ್ ಮಾಡಿ ಕ್ಷಮೆಯಾಚಿಸಿ, ಇಲ್ಲವಾದರೆ ನಿಮ್ಮ ಮೇಲೆ ನಾನು ಕಾನೂನು ಕ್ರಮ ಕೈಗೊಳ್ಳುವುದು ಖಚಿತ ಎಂದು ಮಾಜಿ ಶಾಸಕ ಸಿ ಟಿ ರವಿ ಅವರು ಕಾಂಗ್ರೆಸ್‌ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ʼನಾನು ಕರಸೇವಕ, ನನ್ನನ್ನೂ ಬಂಧಿಸಿʼ ಎಂಬ ಬಿಜೆಪಿಯ ಅಭಿಯಾನವನ್ನು ವ್ಯಂಗ್ಯಾತ್ಮಕವಾಗಿ ಟೀಕಿಸಿದ್ದ ಕಾಂ‌ಗ್ರೆಸ್, ಸಿ ಟಿ ರವಿ ಅವರನ್ನು ಉಲ್ಲೇಖಿಸಿ ʼ ನಾನು ಕಾರು ಚಲಾಯಿಸಿ ಇಬ್ಬರ ಹತ್ಯೆ ಮಾಡಿದ್ದೇನೆ. ನನ್ನನ್ನೂ ಬಂಧಿಸಿʼ ಎಂಬ ಪೋಸ್ಟರ್‌ ಟ್ವೀಟ್‌ ಮಾಡಿತ್ತು.

ಇದಕ್ಕೆ ಪ್ರತಿಕ್ರಿಯಿಸಿರುವ ಸಿ ಟಿ ರವಿ, ಕಾಂಗ್ರೆಸ್ಸಿಗರೇ ಇದು ನಿಮ್ಮ ಹತಾಶೆಯ ಪರಮಾವಧಿ. ನಾನು ಪ್ರಯಾಣಿಸುತಿದ್ದ ಕಾರು ಅಪಘಾತವಾಗಿದ್ದು ನಿಮ್ಮ ಸರಕಾರ ಅಧಿಕಾರದಲ್ಲಿ ಇದ್ದಾಗ. ಅಂದೇ ನಿಮ್ಮ ನಾಯಕರೆಲ್ಲ ಪೋಲೀಸರ ಮೇಲೆ ಒತ್ತಡ ಹೇರಿ ಚಿಕ್ಕಮಗಳೂರು - ಬೆಂಗಳೂರು ಹೆದ್ದಾರಿಯಲ್ಲಿನ ಎಲ್ಲಾ ಟೋಲ್ ಗಳಲ್ಲಿರುವ ಸಿಸಿಟಿವಿ ಫೂಟೇಜ್ ಪರಿಶೀಲಿಸಿ ಯಾರು ಕಾರು ಚಾಲನೆ ಮಾಡುತ್ತಿದ್ದರು ಎಂಬುದನ್ನು ಪರಿಶೀಲನೆ ನಡೆಸಿ ನನ್ನ ಚಾಲಕ ಕಾರನ್ನು ಚಲಾಯಿಸುತ್ತಿರುವುದನ್ನು ಖಚಿತಪಡಿಸಿಕೊಂಡಿದ್ದರು ಎಂದು ಹೇಳಿದ್ದಾರೆ.

ಈ ಕಾರಣಕ್ಕೇ ನಿಮ್ಮದೇ ಸರ್ಕಾರ ಇದ್ದರೂ ಅಂದು ನನ್ನ ಮೇಲೆ ಕೇಸು ದಾಖಲಾಗಲಿಲ್ಲ.ಆದರೆ ಈಗ ನನ್ನ ಮೇಲೆ ಸುಳ್ಳು ಆರೋಪ ಮಾಡುವ, ನನ್ನ ಮಾನ ಹಾನಿ ಮಾಡುವ ಈ ಪೋಸ್ಟ್ ಅನ್ನು ಕೂಡಲೇ ಡಿಲೀಟ್ ಮಾಡಿ ಕ್ಷಮೆಯಾಚಿಸಿ, ಇಲ್ಲವಾದರೆ ನಿಮ್ಮ ಮೇಲೆ ನಾನು ಕಾನೂನು ಕ್ರಮ ಕೈಗೊಳ್ಳುವುದು ಖಚಿತ ಎಂದು ಟ್ವೀಟ್‌ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News