ರೇಸ್ ಕೋರ್ಸ್ ಆಯೋಜನೆಗೆ ಅನುಮತಿ ಕೋರಿರುವ ಮನವಿ ಪರಿಗಣಿಸಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

Update: 2024-05-23 17:32 GMT

ಬೆಂಗಳೂರು: ಬೆಂಗಳೂರು ಟರ್ಫ್ ಕ್ಲಬ್(ರೇಸ್ ಕೋರ್ಸ್)ನಲ್ಲಿ ಕುದುರೆ ಪಂದ್ಯಾವಳಿಗಳ ಆಯೋಜನೆಗೆ ಅನುಮತಿ ಕೋರಿ ಸಲ್ಲಿಸಿರುವ ಮನವಿಯನ್ನು ಮುಂದಿನ 10 ದಿನಗಳಲ್ಲಿ ಕಾನೂನು ಬದ್ಧವಾಗಿ ಪರಿಗಣಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.

ಕುದುರೆ ಪಂದ್ಯಗಳ ಆಯೋಜನೆಗೆ ಪರವಾನಿಗೆ ನೀಡದ ಸರ್ಕಾರದ ಕ್ರಮ ಪ್ರಶ್ನಿಸಿ ಬೆಂಗಳೂರು ಟರ್ಫ್‌ಕ್ಲಬ್ ಲಿಮಿಟೆಡ್, ಕರ್ನಾಟಕ ರೇಸ್ ಹಾರ‍್ಸ್ ಓನರ್ಸ್ ಅಸೋಸಿಯೇಷನ್ ಮತ್ತು ಕರ್ನಾಟಕ ಟ್ರೈನರ್ಸ್ ಆಸೋಸಿಯೇಷನ್ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜೆ.ಎಸ್. ಕಮಲ್ ಅವರಿದ್ದ ಪೀಠ ಸೂಚನೆ ನೀಡಿದೆ.

ವಿಚಾರಣೆ ವೇಳೆ ಸರ್ಕಾರದ ಪರ ವಾದ ಮಂಡಿಸಿದ ಅಡ್ವೋಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ, ಕುದುರೆ ಪಂದ್ಯಾವಳಿಗಳ ಆಯೋಜನೆಗೆ ಪರವಾನಿಗೆ ಕುರಿತಂತೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸುಮಾರು 2 ತಾಸು ಚರ್ಚೆಯಾಗಿದೆ. ಈ ಕುರಿತ ಇತರೆ ಪಾಲುದಾರರೊಂದಿಗೆ ಚರ್ಚೆಗಳು ನಡೆಸಬೇಕಾಗಿದ್ದು, ಅಕ್ರಮಗಳ ತಡೆಗಾಗಿ ಕಾನೂನು ಬದ್ಧವಾಗಿ ಷರತ್ತುಗಳನ್ನು ವಿಧಿಸಿ ಅನುಮತಿ ನೀಡಬೇಕಾಗಿದೆ. ಕುದುರೆ ಪಂದ್ಯಾವಳಿಗಳಲ್ಲಿ ಕೆಲ ಆಕ್ಷೇಪಾರ್ಹ ಚಟುವಟಿಕೆಗಳನ್ನು ನಡೆಸುತ್ತಿರುವ ಸಂಬಂಧ ಸರ್ಕಾರದ ಗಮನಕ್ಕೆ ಬಂದಿದ್ದರಿಂದ ಪರವಾನಿಗೆ ವಿಳಂಬವಾಗಿದೆ. ಅಲ್ಲದೆ, 161 ವರ್ಷದಿಂದ ರೇಸ್ ಕೋರ್ಸ್‌ನಲ್ಲಿ ಕುದುರೆ ಪಂದ್ಯಾವಳಿಗಳು ನಡೆಯುತ್ತಿವೆ, ಕಳೆದ 72 ವರ್ಷಗಳಿಂದ ಪಂದ್ಯಗಳ ಆಯೋಜನೆಗೆ ಸರ್ಕಾರ ಪರವಾನಿಗೆ ನೀಡುತ್ತಿದೆ. ಆದರೆ, ಆಕ್ಷೇಪಾರ್ಹ ಚಟುವಟಿಕೆಗಳನ್ನು ಸರಿಪಡಿಸುವ ಉದ್ದೇಶದಿಂದ ವಿಳಂಬ ವಾಗಿದ್ದು, ಅಕ್ರಮಗಳಿಗೆ ಕಡಿವಾಣ ಹಾಕಿ ಕಾನೂನು ಬದ್ಧವಾಗಿ ಷರತ್ತುಗಳನ್ನು ವಿಧಿಸಿ ಪರವಾನಿಗೆ ನೀಡಬೇಕಾಗಿದ್ದು, ನಾಲ್ಕು ವಾರ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಈ ಅಂಶವನ್ನು ದಾಖಲಿಸಿಕೊಂಡ ನ್ಯಾಯಪೀಠ, ನಾಲ್ಕುವಾರ ವಿಳಂವಾಗಲಿದ್ದು ಮುಂದಿನ 10 ದಿನಗಳಲ್ಲಿ ಅರ್ಜಿದಾರರ ಮನವಿಯನ್ನು ಪರಿಗಣಿಸಬೇಕು ಎಂದು ಸೂಚನೆ ನೀಡಿ ವಿಚಾರಣೆಯನ್ನು ಜೂನ್ 6ಕ್ಕೆ ಮುಂದೂಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲರಾದ ಶ್ರೀರಂಗ, ರೇಸ್‌ಕೋರ್ಸ್ ಆಡಳಿತ ಮಂಡಳಿಯಲ್ಲಿ ಸರ್ಕಾರದ ಹಣಕಾಸು ಕಾರ್ಯದರ್ಶಿಗಳು, ಬೆಂಗಳೂರು ನಗರ ಪೊಲೀಸ್ ಆಯುಕ್ತರು ಸದಸ್ಯರಾಗಿದ್ದಾರೆ. ಕುದುರೆ ಪಂದ್ಯಗಳ ಆಯೋಜನೆಯ ಎಲ್ಲ ಚಟುವಟಿಕೆಗಳು ಸರ್ಕಾರಕ್ಕೆ ಗೊತ್ತಾಗುತ್ತಿರುತ್ತಿದ್ದು, ಅಕ್ರಮಗಳು ನಡೆಸುವ ಸಾಧ್ಯತೆಗಳು ಇಲ್ಲ ಎಂದು ವಿವರಿಸಿದರು.

ತೆರಿಗೆ ವಂಚನೆಗಾಗಿ ಅಕ್ರಮವಾಗಿ ಬೆಟ್ಟಿಂಗ್ ಮಾಡಿದ ಆರೋಪದಲ್ಲಿ ಆರೋಪ ಪಟ್ಟಿ ದಾಖಲಿಸಿರುವ ಬುಕ್ಕಿಗಳ ಪರವಾನಿಗೆಯನ್ನು ರದ್ದು ಪಡಿಸುವುದಕ್ಕಾಗಿ ಮಂಡಳಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೆ, ಕುದುರೆ ಪಂದ್ಯಗಳ ಆಯೋಜನೆಯಲ್ಲಿ ಬುಕ್ಕಿ ಕಂಪೆನಿಗಳಿಗೆ ಯಾವುದೇ ಸಂಬಂಧವಿರುವುದಿಲ್ಲ. ಹೀಗಾಗಿ ಕುದರೆ ಪಂದ್ಯಗಳ ಆಯೋಜನೆಗೆ ಅವಕಾಶ ಕಲ್ಪಿಸಬೇಕು ಎಂದು ಪೀಠಕ್ಕೆ ಮನವಿ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News