ಸಂವಿಧಾನ ನನ್ನ ಧರ್ಮ; ಅದನ್ನು ಪ್ರಶ್ನೆ ಮಾಡೋದಕ್ಕೆ ನೀವ್ಯಾರು?: ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು, ಸೆ.7: ʼʼನಾನು ಇತರ ಧರ್ಮಗಳನ್ನು ಹೇಗೆ ಪ್ರಶ್ನೆ ಮಾಡೋದಕ್ಕೆ ಹಾಗಲ್ವೋ, ಹಾಗೆಯೇ ಸಂವಿಧಾನ ನನ್ನ ಧರ್ಮ; ಅದನ್ನು ಪ್ರಶ್ನೆ ಮಾಡೋದಕ್ಕೆ ನೀವ್ಯಾರು?ʼʼ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼʼಯಾರು ಏನು ಬೇಕಾದರೂ ಮಾಡಿಕೊಳ್ಳಲಿ. ನನ್ನ ಹೇಳಿಕೆ ಅತ್ಯಂತ ಸ್ಪಷ್ಟವಾಗಿದೆ. ನಾನು ಯಾವುದೇ ಒಂದು ಧರ್ಮದ ವಿರುದ್ಧ ಹೇಳಿಕೆ ನೀಡಿಲ್ಲ. ನಾನು ಅಂದು ಹೇಳಿದ್ದಕ್ಕೆ ಈಗಲೂ ಬದ್ಧವಾಗಿದ್ದೇನೆ. ಉದಯ ನಿಧಿ ಸ್ಟಾಲಿನ್ ಅವರ ಹೇಳಿಕೆಯನ್ನು ನಾನೇಕೆ ಸಮರ್ಥನೆ ಮಾಡಿಕೊಳ್ಳಬೇಕು. ನನಗೆ ಸಮಾನತೆ ಮೇಲೆ ನಂಬಿಕೆ ಇದೆ, ಸಂವಿಧಾನ ನನ್ನ ಧರ್ಮ ಎಂದು ಹೇಳಿಕೆ ನೀಡಿದ್ದೇನೆ ಅಷ್ಟೇʼʼ ಎಂದು ಸ್ಷಪ್ಟಪಡಿಸಿದರು.
ಉತ್ತರ ಪ್ರದೇಶದಲ್ಲಿ ಎಫ್‍ಐಆರ್ ದಾಖಲಾಗಿರುವ ಕುರಿತು ಪ್ರತಿಕ್ರಿಯಿಸಿದ ಅವರು, ʼʼಯಾರು ಏನೇ ಮಾಡಿದರೂ ನಾನು ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ. ಉತ್ತರ ಪ್ರದೇಶ, ಮಧ್ಯ ಪ್ರದೇಶ, ಗುಜರಾತ್ ನಲ್ಲಾಗಲಿ, ಅದಕ್ಕೆ ನಾನೇನು ಮಾಡಬೇಕು?, ಸಂವಿಧಾನ ನನ್ನ ಧರ್ಮ ಎಂದಿದ್ದಕ್ಕೆ ಎಫ್‍ಐಆರ್ ಮಾಡೋದಾದರೆ ಮಾಡಲಿ ಬಿಡಿʼʼ ಎಂದು ಹೇಳಿದರು.
ಕೆಲವರು ವಾಟ್ಸಪ್ ವಿಶ್ವವಿದ್ಯಾಲಯಗಳಿಂದ ತಿಳಿದುಕೊಂಡು ಬಂದಿದ್ದಾರೆ. ಅವರು ನಿಜವಾದ ಇತಿಹಾಸ ತಿಳಿದುಕೊಂಡಿಲ್ಲ. ಭಾರತ, ಇಂಡಿಯಾ ಹೆಸರು ಹೇಗೆ ಬಂದಿದೆ ಎಂದು ತಿಳಿದುಕೊಳ್ಳಲಿ ಎಂದ ಅವರು, ಸಂವಿಧಾನದಿಂದ ಸ್ವಾಭಿಮಾನದ ಬದುಕು ಸಿಗುತ್ತದೆ ಎಂದು ಹೇಳಿದರು.