ನಿಮ್ಮ ರಕ್ತದಲ್ಲಿ ಸಂವಿಧಾನ ಇಲ್ಲ, ನಮ್ಮ ರಕ್ತದಲ್ಲಿ ಆರೆಸ್ಸೆಸ್ ಇಲ್ಲ : ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು : ‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೂ ಬಿಜೆಪಿಗೆ ಸೇರ್ಪಡೆಯಾಗುವ ಸಾಧ್ಯತೆ ಇದೆ’ ಎಂದು ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಕೆಲಕಾಲ ಚರ್ಚೆಗೆ ಗ್ರಾಸವಾಯಿತು.
ಗುರುವಾರ ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ್, ಗ್ರಾಮೀಣಾಭಿವೃದ್ಧಿ ಇಲಾಖೆಗೂ ಅನುದಾನ ಕೊಟ್ಟಿಲ್ಲ ಎಂದು ಹೇಳಿದಾಗ, ಮಧ್ಯೆಪ್ರವೇಶಿಸಿದ ಬಸನಗೌಡ ಪಾಟೀಲ್ ಯತ್ನಾಳ್, ‘ಕಾಂಗ್ರೆಸ್‍ನ ಹಲವರು ಬಿಜೆಪಿ ಸೇರುತ್ತಾರೆಂಬ ಸುದ್ದಿ ಇದ್ದು, ಮಧ್ಯಪ್ರದೇಶದ ಕಮಲನಾಥ್ ಬಿಜೆಪಿ ಸೇರುತ್ತಾರೆ. ಹಾಗೆಯೇ ಮಲ್ಲಿಕಾರ್ಜುನ ಖರ್ಗೆ ಬಿಜೆಪಿಗೆ ಬರುತ್ತಾರೆಂಬ ಮಾತುಗಳಿವೆ’ ಎಂದು ಹೇಳಿದರು.
ಇದಕ್ಕೆ ಸಿಟ್ಟಾಗಿ ಪ್ರತಿಕ್ರಿಯಿಸಿದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ‘ನಮ್ಮ ಹೆಣವೂ ಕೂಡಾ ಬಿಜೆಪಿ ಕಡೆ ಹೋಗಲು ಸಾಧ್ಯವೇ ಇಲ್ಲ. ನಮ್ಮ ರಕ್ತದಲ್ಲಿ ಅದು ಇಲ್ಲವೇ ಇಲ್ಲ. ಎಂದರು. ಈ ವೇಳೆ ಯತ್ನಾಳ್ ಹಾಗೂ ಪ್ರಿಯಾಂಕ್ ಖರ್ಗೆ ಪರಸ್ಪರ ಮಾತಿನ ಚಕಮಕಿ ನಡೆಸಿದರು.
ಬಳಿಕ ಮಾತು ಮುಂದುವರೆಸಿದ ಪ್ರಿಯಾಂಕ್ ಖರ್ಗೆ, ‘ನಿಮ್ಮ ರಕ್ತದಲ್ಲಿ ಸಂವಿಧಾನ ಇಲ್ಲ, ನಮ್ಮ ರಕ್ತದಲ್ಲಿ ಆರೆಸ್ಸೆಸ್ ಇಲ್ಲ’ ಎಂದು ತಿರುಗೇಟು ಕೊಟ್ಟರು. ಆಗ ಯತ್ನಾಳ್, ‘ಸಂವಿಧಾನವನ್ನು ಸಮರ್ಪಕವಾಗಿ ಜಾರಿ ಮಾಡುತ್ತಿರುವುದು ನಾವೇ’ ಎಂದಾಗ ‘ನೀವು ಹೇಗೆ ಸಂವಿಧಾನ ಸರಿಯಾಗಿ ಜಾರಿ ಮಾಡಿದ್ದೀರಾ. ಒಂದು ಧರ್ಮಕ್ಕೆ ಮಾತ್ರ ಆದ್ಯತೆ ನೀಡುವುದು ಸಂವಿಧಾನ ಬದ್ಧವೇ?’ ಎಂದು ಪ್ರಿಯಾಂಕ್ ಪ್ರಶ್ನಿಸಿದರು.
ಈ ಹಂತದಲ್ಲಿ ಸ್ಪೀಕರ್ ಯು.ಟಿ.ಖಾದರ್, ‘ಪದೇ ಪದೇ ಈ ರೀತಿ ಮಧ್ಯದಲ್ಲಿ ಎದ್ದುನಿಂತು ಚರ್ಚೆ ಮಾಡುವುದು ಬೇಡ. ಅರವಿಂದ ಬೆಲ್ಲದ್ ಚರ್ಚೆ ಮುಂದುವರೆಸಲಿ’ ಎಂದು ಹೇಳಿ ಈ ಕುರಿತ ಹೆಚ್ಚಿನ ಚರ್ಚೆಗೆ ಅವಕಾಶ ಕೊಡದೆ ಯತ್ನಾಳ್ ಮತ್ತು ಪ್ರಿಯಾಂಕ್ ಖರ್ಗೆ ಅವರ ಮಾತುಗಳಿಗೆ ತಡೆ ನೀಡಿದರು.