ಮೈಸೂರು ದಸರಾ ಕೇಂದ್ರ ಬಿಂದುವಾಗಿದ್ದ ‘ಅರ್ಜುನ’ ನೆನಪಿನಲ್ಲಿ ಸ್ಮಾರಕ ನಿರ್ಮಾಣ: ಸಚಿವ ಬೋಸರಾಜು

Update: 2023-12-05 13:44 GMT

ಬೆಳಗಾವಿ: ಐತಿಹಾಸಿಕ ಮೈಸೂರು ದಸರಾ ಕೇಂದ್ರ ಬಿಂದುವಾಗಿದ್ದ ಗಜರಾಜ ವೀರ ‘ಅರ್ಜುನ’ ನೆನಪಿನಲ್ಲಿ ರಾಜ್ಯ ಸರಕಾರ ಸ್ಮಾರಕವೊಂದನ್ನು ನಿರ್ಮಾಣ ಮಾಡಲಾಗುವುದು ಎಂದು ವಿಧಾನ ಪರಿಷತ್ತಿನ ಸಭಾನಾಯಕ ಎನ್.ಎಸ್.ಬೋಸರಾಜು ಪ್ರಕಟಿಸಿದ್ದಾರೆ.

ಮಂಗಳವಾರ ವಿಧಾನ ಪರಿಷತ್ತಿನ ಕಲಾಪ ಆರಂಭದಲ್ಲಿ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಸೇರಿ ಹುತಾತ್ಮರಾದ ಯೋಧರು ಮತ್ತು ಐತಿಹಾಸಿಕ ಮೈಸೂರು ದಸರಾ ವೈಭವದ ಕೇಂದ್ರ ಬಿಂದುವಾಗಿದ್ದ ಗಜರಾಜ ‘ಅರ್ಜುನ’ ನಿಧನಕ್ಕೆ ಸಂತಾಪ ಸೂಚಿಸಲಾಯಿತು.

ಈ ವೇಳೆ ಸಭಾ ನಾಯಕ ಎನ್.ಎಸ್.ಬೋಸರಾಜು ಪ್ರಸ್ತಾಪಿಸಿ, ‘ಬಲಶಾಲಿ ಮಾಸ್ಟರ್ ಹಾಗೂ ಹಿರಿಯ ಎಂಬ ಹೆಸರುಗಳಿಂದ ಖ್ಯಾತನಾಗಿದ್ದ ಅರ್ಜುನನ್ನು 1968ರಲ್ಲಿ ಖೆಡ್ಡಾ ವಿಧಾನದಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿತ್ತು.ಅಲ್ಲಿಂದ 22 ವರ್ಷಗಳಿಂದ ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿತ್ತು ಎಂದರು.

2012ರಿಂದ 2019ರವರೆಗೆ ಎಂಟು ಬಾರಿ ನಾಡಹಬ್ಬದ ಪ್ರಮುಖ ಆಕರ್ಷಣೆಯಾದ ‘ಜಂಬೂ ಸವಾರಿ’ಯಲ್ಲಿ ಚಿನ್ನದ ಅಂಬಾರಿಯನ್ನು ಹೊತ್ತು ತನ್ನ ರಾಜಗಾಂಭೀರ್ಯದ ನಡಿಗೆಯ ಮೂಲಕ ದಸರಾ ಮೆರಗಿಗೆ ಕೇಂದ್ರ ಬಿಂದುವಾಗಿ ನಾಡಿನ ಜನತೆಯ ಪ್ರೀತಿಗೆ ಪಾತ್ರವಾಗಿತ್ತು. ಇದರ ನೆನಪು ಸದಾ ಉಳಿಸುವ ನಿಟ್ಟಿನಲ್ಲಿ ಸ್ಮಾರಕವೊಂದು ನಿರ್ಮಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ಸಭಾಪತಿ ಬಸವರಾಜ ಹೊರಟ್ಟಿ, 60 ವರ್ಷದ ನಂತರ ಚಿನ್ನದ ಅಂಬಾರಿ ಹೊರುವ ಕೆಲಸದಿಂದ ನಿವೃತ್ತಿ ಹೊಂದಿ ಈ ಬಾರಿ ದಸರಾ ಮೆರವಣಿಗೆಯಲ್ಲಿ ದಿಕ್ಕು ತೋರುವ ‘ನಿಶಾನೆ ಆನೆ’ಯಾಗಿ ಸಾಗಿದ್ದ ‘ಅರ್ಜುನ’ ನಾಡಿನ ಜನತೆಯ ಮನಸೂರೆಗೊಂಡಿತ್ತು. ಮೈಸೂರು ದಸರಾ ಅಂಬಾರಿ ಹೊರುವ ಕಾಯಕವನ್ನು ಅತ್ಯಂತ ಶಿಸ್ತಿನಿಂದ ನಿರ್ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದ ಹೆಮ್ಮೆಯ ಅರ್ಜುನನ ನಿಧನದಿಂದಾಗಿ ರಾಜ್ಯವು ರಾಜಗಾಂಭೀರ್ಯದ ಗಜರಾಜನನ್ನು ಕಳೆದುಕೊಂಡು ಶೋಕದ ಮಡುವಿನಲ್ಲಿ ಮುಳುಗಿದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News