ಕಾಂಗ್ರೆಸ್ ಸರಕಾರದಲ್ಲಿ ಶೇ.65ರಷ್ಟು ಕಮಿಷನ್ ಕೇಳುತ್ತಿದ್ದಾರೆಂದು ಗುತ್ತಿಗೆದಾರರ ಆರೋಪ: ಬಸವರಾಜ ಬೊಮ್ಮಾಯಿ

Update: 2023-08-10 18:10 GMT

ಬೆಂಗಳೂರು, ಆ. 10: ‘ಗುತ್ತಿಗೆದಾರರ ಸಂಘದವರು ಕಾಂಗ್ರೆಸ್ ಸರಕಾರದಲ್ಲಿ ಶೇ.65ರಷ್ಟು ಕಮಿಷನ್ ಕೇಳುತ್ತಿದ್ದಾರೆಂದು ರಾಹುಲ್ ಗಾಂಧಿ ಗಮನಕ್ಕೆ ತಂದಿದ್ದಾರೆ. ರಾಹುಲ್ ಭ್ರಷ್ಟಾಚಾರ ಸಹಿಸದಿದ್ದರೆ ತಕ್ಷಣ ಮಧ್ಯ ಪ್ರವೇಶ ಮಾಡಿ, ಗುತ್ತಿಗೆದಾರರ ಬಿಲ್ ಬಿಡುಗಡೆಗೆ ಸೂಚಿಸಬೇಕು. ಇಲ್ಲದಿದ್ದರೆ ಕರ್ನಾಟಕ ಕಾಂಗ್ರೆಸ್‍ನ ಎಟಿಎಂ ಎನ್ನುವುದು ಸಾಬೀತಾದಂತೆ’ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಗುರುವಾರ ಇಲ್ಲಿನ ಆರ್‍ಟಿ ನಗರದ ತಮ್ಮ ನಿವಾಸದಲ್ಲಿ ತಮ್ಮನ್ನು ಭೇಟಿ ಮಾಡಿದ ಬಿಬಿಎಂಪಿ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳ ಮನವಿ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ‘ಕಾಮಗಾರಿ ಮಾಡಿರುವ ಗುತ್ತಿಗೆದಾರರು ಭೇಟಿ ಮಾಡಿದ್ದು, ಅವರು ಮಾಡಿರುವ ಕೆಲಸಕ್ಕೆ ಹಣ ಬಿಡುಗಡೆ ಮಾಡಿಸಲು ಆಗ್ರಹಿಸಲು ಮನವಿ ಮಾಡಿದ್ದಾರೆ’ ಎಂದರು.

‘ನಾನು ಸಿಎಂ ಇದ್ದಾಗ ಬಿಲ್ ಪಾವತಿಗೆ ಆನ್‍ಲೈನ್ ಮಾಡಿ ಸ್ಟ್ರೀಮ್ ಲೈನ್ ಮಾಡಿದ್ದೆ. ಹಿರಿತನದ ಆಧಾರದ ಮೇಲೆ ಹಣ ಬಿಡುಗಡೆ ಮಾಡಲಾಗುತ್ತಿತ್ತು. ಇದರಿಂದ ಅವರ ಬಾಕಿ ಕಡಿಮೆ ಉಳಿದಿತ್ತು. ಗುತ್ತಿಗೆದಾರರು ಹಿಂದಿನ ಸರಕಾರದ ಅವಧಿಯಲ್ಲಿ ಮಾಡಿದ ಕೆಲಸಕ್ಕೆ ಈಗ ಲಂಚ ಕೇಳುತ್ತಿದ್ದಾರೆಂದು ಗುತ್ತಿಗೆದಾರರು ಆರೋಪಿಸಿದ್ದಾರೆ. ಎಲ್ಲ ಇಲಾಖೆಗಳಲ್ಲಿ ಹಿಂದಿನ ಸರಕಾರದ ಅವಧಿಯ ಕಾಮಗಾರಿಗಳಿಗೆ ಲಂಚ ಕೇಳುತ್ತಿರುವುದು ಸರ್ವವಿಧಿತವಾಗಿದೆ. ಮುಖ್ಯಮಂತ್ರಿ ಇದರ ಬಗ್ಗೆ ಮೌನ ವಹಿಸಿದ್ದಾರೆ. ಇದು ಅವರ ಸಮ್ಮತಿ ಎಂದು ಸೂಚಿಸುತ್ತದೆ ಎಂದು ಆರೋಪಿಸಿದರು.

‘ವರ್ಗಾವಣೆಗೆ ಹಣ ಪಡೆದಿಲ್ಲ ಎಂದು ಸಿಎಂ ಹೇಳಿದ್ದಾರೆ. ಆದರೆ, ಅವರ ಕಚೇರಿಯಿಂದ ವರ್ಗಾವಣೆ ಆಗಿರುವ ಆದೇಶಗಳು ಯಾಕೆ ಬದಲಾವಣೆ ಆಗುತ್ತಿವೆ? ನಮ್ಮ ಅವಧಿಯಲ್ಲಿ ಕಾಮಗಾರಿಗಳಲ್ಲಿ ಪಾರದರ್ಶಕತೆ ತರಲು 3 ಜನರ ಸಮಿತಿ ರಚನೆ ಮಾಡಿದ್ದೆವು. ಆ ಆದೇಶಗಳನ್ನು ಈಗ ಪಾಲನೆ ಮಾಡುತ್ತಿಲ್ಲ ಎಂದು ಹೇಳಿದರು.

ಮಧ್ಯಪ್ರವೇಶಿಸಲಿ: ‘ಕಾಂಗ್ರೆಸ್ ಹೈಕಮಾಂಡ್ ಭ್ರಷ್ಟಾಚಾರ ಸಹಿಸುವುದಿಲ್ಲ ಎಂದು ಹೇಳಿದೆ. ಆದರೆ, ಗುತ್ತಿಗೆದಾರರು ರಾಹುಲ್ ಗಾಂಧಿಗೆ ಟ್ವೀಟ್ ಮಾಡಿ, ನಿಮ್ಮ ಸರಕಾರ ಶೇ.65ರಷ್ಟು ಕಮಿಷನ್ ವಸೂಲಿ ಮಾಡುತ್ತಿದ್ದಾರೆಂದು ಹೇಳಿದ್ದಾರೆ. ರಾಹುಲ್ ಗಾಂಧಿಯವರು ಭ್ರಷ್ಟಾಚಾರದ ಬಗ್ಗೆ ಝಿರೋ ಟಾಲೆರೆನ್ಸ್ ಇದ್ದರೆ, ತಕ್ಷಣ ಮಧ್ಯಪ್ರವೇಶ ಮಾಡಿ, 24 ಗಂಟೆಯಲ್ಲಿ ಗುತ್ತಿಗೆದಾರರ ಬಾಕಿ ಹಣ ಕೊಡಿಸಲಿ ಎಂದು ಆಗ್ರಹಿಸಿದರು.

ಸೂಪರ್ ಸಿಎಂ: ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್ ಸೂಪರ್ ಸಿಎಂ ಆಗಿದ್ದಾರೆ. ಬಿಬಿಎಂಪಿ ಅಧಿಕಾರಿಗಳ ಟ್ರಾನ್ಸಫರ್ ತನ್ನ ಗಮನಕ್ಕೆ ತಂದು ಮಾಡಬೇಕು ಎಂದು ಶಿವಕುಮಾರ್ ಹೇಳಿದ್ದಾರೆ. ಹೀಗಾಗಿ ಡಿ.ಕೆ. ಶಿವಕುಮಾರ್ ಸೂಪರ್ ಸಿಎಂ. ರಾಜ್ಯದಲ್ಲಿ ಸಿಎಂ ಮತ್ತು ಸೂಪರ್ ಸಿಎಂ ಇಬ್ಬರು ಇದ್ದಾರೆ ಎಂದು ಹೇಳಿದರು.

ಫೇಕ್ ಸರಕಾರ: ಸರಕಾರದ ವಿರುದ್ದ ಬರುವ ಎಲ್ಲ ಪತ್ರಗಳೂ ಫೇಕ್ ಎಂದು ಸರಕಾರ ಅಲ್ಲಗಳೆಯುತ್ತಿದೆ. ಅವರದೇ ಪಕ್ಷದ ಶಾಸಕರು ಬರೆದ ಪತ್ರವನ್ನೂ ಫೇಕ್ ಎನ್ನುತ್ತಾರೆ. ಈ ಸರಕಾರವೇ ಫೇಕ್ ಎಂದು ಬಸವರಾಜ ಬೊಮ್ಮಾಯಿ ಆರೋಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News