ಭಾರತದ ಜಿ.ಡಿ.ಪಿ ವಲಯಕ್ಕೆ ಸಣ್ಣ ಕೈಗಾರಿಕೆಗಳ ಕೊಡುಗೆ ಅಪಾರ: ಸಚಿವ ಸಂತೋಷ್ ಲಾಡ್

Update: 2023-09-09 18:18 GMT

ಹುಬ್ಬಳ್ಳಿ: ದೇಶದ ಜಿ.ಡಿ.ಪಿ ವಲಯಕ್ಕೆ ಸಣ್ಣ ಹಾಗೂ ಅತಿ ಸಣ್ಣ ಕೈಗಾರಿಕೆಗಳ ಕೊಡುಗೆ ಅಪಾರವಾಗಿದೆ. ಜಾಗತೀಕರಣದ ನೆಪದಲ್ಲಿ ಬೃಹತ್ ಕೈಗಾರಿಕೆಗಳ ವಾಣಿಜ್ಯೀಕರಣದಲ್ಲಿ ಆಗಿರುವ ಬದಲಾವಣೆಗಳು ಸಣ್ಣ ಕೈಗಾರಿಕ ವಲಯವನ್ನು ದೂರವಿಟ್ಟಿದ್ದರು ಕೂಡ ಅದರ ವಹಿವಾಟು ದೇಶದ ಆರ್ಥಿಕ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಮೇಲುಗೈ ಸಾಧಿಸಿದೆ ಎಂದು ನಾಡಿನ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ರವರು ಅಭಿಮತ ವ್ಯಕ್ತಪಡಿಸಿದರು.

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ವತಿಯಿಂದ ಹುಬ್ಬಳ್ಳಿಯ ಜೆ.ಸಿ.ನಗರದ ಕೆ.ಸಿ.ಸಿ ಅಂಡ್ ಐ ಸಭಾಂಗಣದಲ್ಲಿ ಆಯೋಜಿಸಿದ್ದ 'Export Excellence Award- 2023' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸಚಿವ ಸಂತೋಷ್ ಲಾಡ್ ಮಾತನಾಡಿದರು.

ಬೃಹತ್ ಉದ್ದಿಮೆ ಮತ್ತು ಕೈಗಾರಿಕ ವಲಯಗಳು ದೇಶದ ಆರ್ಥಿಕ ನೀತಿ ನಿಯಮಗಳ ರಚನೆಯಲ್ಲಿ ಭಾಗವಹಿಸಿದಂತೆ ಸಣ್ಣ ಕೈಗಾರಿಕ ವಲಯದ ಉದ್ದಿಮೆಗಳು ಭಾಗವಹಿಸುವ ಪ್ರಯತ್ನ ಮಾಡಿದರೆ, ಗ್ರಾಮೀಣ ಹಿನ್ನೆಲೆಯ ಸಣ್ಣ ಹಾಗೂ ಗುಡಿ ಕೈಗಾರಿಕಾ ವಲಯ ತನ್ನ ಹಕ್ಕನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ. ಅದರ ಸಾಕಾರಕ್ಕಾಗಿ ಕರ್ನಾಟಕ ಸರ್ಕಾರ ಪ್ರಾಮಾಣಿಕವಾಗಿ ಶ್ರಮಿಸಲಿದೆ ಎಂದು ಇದೇ ಸಂಧರ್ಭದಲ್ಲಿ ಸಚಿವ ಸಂತೋಷ ಲಾಡ್ ಸ್ಪಷ್ಟಪಡಿಸಿದರು.

ದೇಶದ ಉತ್ಪಾದನಾ ಹಾಗೂ ವಾಣಿಜ್ಯ ವಲಯಕ್ಕೆ ಸಣ್ಣ ಪ್ರಮಾಣದ ಕೈಗಾರಿಕೆಗಳು ಕೊಟ್ಟ ಕೊಡುಗೆಗಳು ಮರಿಚಿಕೆಯಾಗಿದ್ದರೂ ಕೂಡ ಅದರ ಪರಿಣಾಮ ಆರ್ಥಿಕ ಸೂಚ್ಯಂಕದಲ್ಲಿ ದಾಖಲಾಗಿರುವುದು ಗಮನಾರ್ಹ ಎಂದಿರುವ ಸಚಿವ ಸಂತೋಷ್ ಲಾಡ್, ಸಣ್ಣ ಕೈಗಾರಿಕೆಗಳು ಗ್ರಾಮೀಣ ಭಾರತವನ್ನು ಪ್ರತಿನಿಧಿಸುವ ಸಾಧನದಂತೆ ಎಂದು ಪ್ರಶಂಸಿದರು.

ಈ ಸಂಧರ್ಭದಲ್ಲಿ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಮುಖ್ಯಸ್ಥರು ಮತ್ತು ಪ್ರತಿನಿಧಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News