ಕೋವಿಡ್ ಅಕ್ರಮ | ಕುನ್ಹಾ ವರದಿ ಶಿಫಾರಸ್ಸಿನಂತೆ ಅಧಿಕಾರಿಗಳಿಂದ ವಿಚಾರಣೆ, ಹಣ ತಿಂದವರನ್ನು ಬಿಡುವುದಿಲ್ಲ : ಡಿ.ಕೆ.ಶಿವಕುಮಾರ್

Update: 2024-12-07 09:49 GMT

PC : x/@INCKarnataka

ಬೆಂಗಳೂರು :  “ಕೋವಿಡ್ ಅಕ್ರಮದಲ್ಲಿ ಕುನ್ಹಾ ಅವರ ಸಮಿತಿ ಶಿಫಾರಸ್ಸಿನಂತೆ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಕೋವಿಡ್ ಹಣ ತಿಂದವರನ್ನು ಬಿಡುವುದಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ನ್ಯಾಯಮೂರ್ತಿ ಮೈಕಲ್ ಕುನ್ಹ ವಿಚಾರಣೆ ಆಯೋಗದ ಶಿಫಾರಸ್ಸು ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳು ಮತ್ತು  ವರದಿ ಪರಾಮರ್ಶೆ ಕುರಿತು ವಿಧಾನಸೌಧದಲ್ಲಿ ಸಂಪುಟ ಉಪಸಮಿತಿಯು ಶನಿವಾರ ಸಭೆ ನಡೆಸಿತು.

ನಂತರ ಸಮಿತಿಯ ಮುಖ್ಯಸ್ಥರಾದ ಶಿವಕುಮಾರ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.

“ನಮ್ಮ ಸರಕಾರ ಕೋವಿಡ್ ಅವಧಿಯಲ್ಲಿನ ಅಕ್ರಮದ ಕುರಿತ ನ್ಯಾ.ಜಾನ್ ಮೈಕಲ್ ಕುನ್ಹಾ ಅವರ ವರದಿಯನ್ನು ಸ್ವೀಕರಿಸಿದ್ದೇವೆ. ಈ ವರದಿಯ ಪರಿಶೀಲನೆಯನ್ನು ಮಾತ್ರ ನಾವು ಮಾಡುತ್ತಿದ್ದೇವೆ. ಉಳಿದಂತೆ ಸಮಿತಿ ವರದಿಯ ಶಿಫಾರಸ್ಸಿನಂತೆ ಕಾನೂನು ಚೌಕಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ" ಎಂದು ತಿಳಿಸಿದರು.

ʼಮತ್ತೊಂದು ಕಡೆ ಇಲಾಖೆಯಲ್ಲಿ ಅಧಿಕಾರಿಗಳ ವಿರುದ್ಧವೂ ವಿಚಾರಣೆ ನಡೆಯಲಿದೆ. ಕೆಲವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ. ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ತಪ್ಪು ನಡೆದಿಲ್ಲ ಎಂದು ವರದಿ ನೀಡಿದ್ದನ್ನು ನಮ್ಮ ಸರಕಾರ ಒಪ್ಪುವುದಿಲ್ಲ. ಹೀಗಾಗಿ ಈ ಪ್ರಕರಣದ ಬಗ್ಗೆ ಮತ್ತೆ ತನಿಖೆಯಾಗಬೇಕು. ನಾನು ಹಾಗೂ ಸಿದ್ದರಾಮಯ್ಯ ಅವರೇ ಆ ಆಸ್ಪತ್ರೆಗೆ ಹೋಗಿ ಅಲ್ಲಿನ ಪರಿಸ್ಥಿತಿ ಅಲೋಕನ ಮಾಡಿದ್ದೆವು. 36 ಜನ ಸತ್ತರೆ, ಆಗಿನ ಸಚಿವರು ಕೇವಲ ಮೂರು ಮಂದಿ ಮೃತಪಟ್ಟಿದ್ದರು ಎಂದು ಹೇಳಿದ್ದರು. ನಾನು ಮೃತಪಟ್ಟ 36 ಮಂದಿಯ ಮನೆಗಳಿಗೆ ಭೇಟಿ ನೀಡಿದ್ದೇನೆʼ ಎಂದರು.

ಬೆಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಆರ್ ಟಿಪಿಸಿಆರ್ ಪರೀಕ್ಷೆ ಮಾಡಲಾಗಿದ್ದು, 84 ಲಕ್ಷ ಪರೀಕ್ಷೆ ಮಾಡಲಾಗಿದೆ ಎಂದು ಹೇಳಿ 502 ಕೋಟಿ ಬಿಲ್ ಮಾಡಿದ್ದಾರೆ. 400 ಕೋಟಿ ಪಾವತಿ ಮಾಡಲಾಗಿದೆ. 84 ಲಕ್ಷ ಎಂದರೆ ಬೆಂಗಳೂರಿನಲ್ಲಿರುವ ಪ್ರತಿ ಮನೆಗೆ ಇಬ್ಬರಿಗೆ ಪರೀಕ್ಷೆ ಮಾಡಿರಬೇಕು. ಕಿದ್ವಾಯಿ ಸಂಸ್ಥೆಯೊಂದರಲ್ಲೇ 24 ಲಕ್ಷ ಪರೀಕ್ಷೆ ಮಾಡಲಾಗಿದೆ ಎಂದು ಹೇಳಿದ್ದಾರೆ. ತಾಂತ್ರಿಕವಾಗಿ ಸಮರ್ಥವಿಲ್ಲದೆ, ಐಸಿಎಂಆರ್ ಅನುಮತಿ ಇಲ್ಲದೆ ಪರೀಕ್ಷೆ ನಡೆಸಲಾಗಿದೆ. 146 ಕೋಟಿ ಬಿಲ್ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 24 ಲಕ್ಷ ಜನರಿಗೆ ಒಂದೇ ಕಡೆ ಪರೀಕ್ಷೆ ಎಂದರೆ ಅಲ್ಲಿ ಎಷ್ಟು ಜನದಟ್ಟಣೆ, ಸರದಿ ಸಾಲು ಇರಬೇಕು ಎಂದು ಪ್ರಶ್ನಿಸಿದರು.

"ಹೀಗಾಗಿ ಈ ವಿಚಾರದಲ್ಲಿ ವಿಧಾನಸೌಧದಿಂದ ಕೆಳ ಹಂತದವರೆಗೂ ಯಾವ ರೀತಿ ಪ್ರಕ್ರಿಯೆ ಮಾಡಿದ್ದಾರೆ. ಕಾನೂನು ಚೌಕಟ್ಟು ಮೀರಿ ಏನೆಲ್ಲಾ ತೀರ್ಮಾನ ಮಾಡಿದ್ದಾರೆ ಎಂಬುದರ ಬಗ್ಗೆ ಅಧಿಕಾರಿಗಳು ವರದಿ ನೀಡಿದ್ದಾರೆ. ಈ ವರದಿಯನ್ನು ನಾವು ಪರಿಶೀಲನೆ ಮಾಡುತ್ತೇವೆ." ಎಂದು ತಿಳಿಸಿದರು.

ನಿವೃತ್ತ ಅಧಿಕಾರಿಗಳ ಸಮಿತಿಯಿಂದ ಮಾರ್ಗದರ್ಶನ :

ಈ ವರದಿಗಳನ್ನು ಪರಿಶೀಲಿಸಿ, ನಮಗೆ ಮಾರ್ಗದರ್ಶನ ನೀಡಲು ನಿವೃತ್ತ ಅಧಿಕಾರಿಗಳನ್ನೊಳಗೊಂಡ ಅಧಿಕಾರಿಗಳ ಮಟ್ಟದ ಸಮಿತಿ ರಚಿಸಲಾಗುವುದು. ಈ ಪ್ರಕರಣದಲ್ಲಿ ನಾವು ಯಾರಿಗೂ ಅನಗತ್ಯವಾಗಿ ತೊಂದರೆ ಮಾಡಬಾರದು ಎಂದು ಈ ನಿರ್ಧಾರ ಮಾಡಿದ್ದೇವೆ. ಈ ಸಮಿತಿಯು ರಚಿಸಿದ್ದೇವೆ ಎಂದು ತಿಳಿಸಿದರು.

ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಳ್ಳುವುದೇಕೆ :

ಇದು ರಾಜಕೀಯ ಪಿತೂರಿ ಎಂದು ಮಾಜಿ ಆರೋಗ್ಯ ಸಚಿವರ ಹೇಳಿಕೆ ಬಗ್ಗೆ ಕೇಳಿದಾಗ, “ನಮ್ಮ ಕಡೆ ಒಂದು ಮಾತಿದೆ. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡರಂತೆ. ನಾನು ಅವರ ಸುದ್ದಿಯನ್ನೇ ಮಾತನಾಡಿಲ್ಲ. ಅವರೇಕೆ ಮಾತನಾಡುತ್ತಿದ್ದಾರೆ. ನಾವು ವರದಿಯ ಪ್ರಮುಖ ಅಂಶಗಳನ್ನು ಮಾಧ್ಯಮಗಳ ಮುಂದೆ ಪ್ರಸ್ತಾಪ ಮಾಡಿದ್ದೇನೆ ಅಷ್ಟೇ. ಈ ವರದಿಯಲ್ಲಿ ಮೇಲಿಂದ ಕೆಳಗಿನವರೆಗೂ ಅಕ್ರಮದಲ್ಲಿ ಭಾಗಿಯಾಗಿರುವ ಆಯುಕ್ತರು, ಅಧಿಕಾರಿಗಳು, ರಾಜಕಾರಣಿಗಳು, ಖಾಸಗಿ ಆಸ್ಪತ್ರೆಗಳು, ಪ್ರಯೋಗಾಲಯಗಳ ವಿರುದ್ಧ ಸೆಕ್ಷನ್ 71 ಹಾಗೂ ಸೆಕ್ಷನ್ 11ರ ಅಡಿಯಲ್ಲಿ ಸಾರ್ವಜನಿಕ ಸೇವೆ ಅವಧಿಯಲ್ಲಿ ಭ್ರಷ್ಟಾಚಾರ ತಡೆಯುವ ಕಾಯ್ದೆ ಅನ್ವಯ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ವರದಿಯಲ್ಲಿ ತಿಳಿಸಲಾಗಿದೆ” ಎಂದರು.

ಒಪ್ಪಂದ ಸೂತ್ರದ ಬಗ್ಗೆ ಯಾರೂ ಚರ್ಚೆ ಮಾಡುವುದು ಬೇಡ :

ಸಿಎಂ ವಿಚಾರವಾಗಿ ಒಪ್ಪಂದ ಆಗಿರುವುದು ನಿಜ ಎಂಬ ಮುನಿಯಪ್ಪ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಒಪ್ಪಂದದ ವಿಚಾರವಾಗಿ ಯಾರೊಬ್ಬರು ಚರ್ಚೆ ಮಾಡಬಾರದು. ನಾವು ಮತ್ತು ಅವರು ರಾಜಕೀಯವಾಗಿ ಕೆಲವು ಸಹಕಾಕರದಲ್ಲಿ ಕೆಲಸ ಮಾಡುತ್ತಿದ್ದೇವೆ. ನಾನು ಯಾವುದೇ ಸೂತ್ರವೂ ಇಲ್ಲ. ಮುಖ್ಯಮಂತ್ರಿಗಳಿಗೆ ಕೆಲವು ಜವಾಬ್ದಾರಿ ವಹಿಸಿದ್ದು, ನನಗೆ ಕೆಲವು ಜವಾಬ್ದಾರಿ ವಹಿಸಿದ್ದಾರೆ. ನಾವು ನಮ್ಮ ಕೆಲಸ ಮಾಡುತ್ತಿದ್ದು, ಈ ಒಪ್ಪಂದ ಸೂತ್ರದ ಬಗ್ಗೆ ಯಾರೂ ಮಾತನಾಡುವ ಅವಶ್ಯಕತೆ ಹಾಗೂ ಸಂದರ್ಭವಿಲ್ಲ. ಸಿಎಂ ಹೇಳಿದ್ದೆ ಅಂತಿಮ ಎಂದು ನಾನು ಹೇಳಿದ್ದೇನೆ” ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News