ಬಿಜೆಪಿ-ಜೆಡಿಎಸ್ ನಾಯಕರಿಗೆ ಸಿ.ಪಿ.ಯೋಗೇಶ್ವರ್ ಸಡ್ಡು : ಗುರುವಾರ ನಾಮಪತ್ರ ಸಲ್ಲಿಕೆ ಮಾಡುವುದಾಗಿ ಘೋಷಣೆ

Update: 2024-10-22 15:12 GMT

ಬೆಂಗಳೂರು : ರಾಮನಗರ ಜಿಲ್ಲೆಯ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಗುರುವಾರ ನಾಮಪತ್ರ ಸಲ್ಲಿಕೆ ಮಾಡುವುದಾಗಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಘೋಷಿಸುವ ಮೂಲಕ, ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ಬಹಿರಂಗವಾಗಿ ಸಡ್ಡು ಹೊಡೆದಿದ್ದಾರೆ.

ಈ ಮಧ್ಯೆ ‘ಪಕ್ಷದ ಸಿದ್ಧಾಂತ ಮತ್ತು ಸಂವಿಧಾನದ ಮೌಲ್ಯ ಒಪ್ಪಿ ಬರುವವರಿಗೆ ಕಾಂಗ್ರೆಸ್ ಪಕ್ಷ ಸ್ವಾಗತಿಸಲಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸುವ ಮೂಲಕ ಯೋಗೇಶ್ವರ್‍ಗೆ ಆಹ್ವಾನ ನೀಡಿದ್ದಾರೆ. ಆದರೆ, ಅತ್ತ ಕಾರ್ಯಕರ್ತರ ಸಭೆ ನಡೆಸಿದ ಕೇಂದ್ರ ಸಚಿವ ಹಾಗೂ ಜೆಡಿಎಸ್‍ನ ಎಚ್.ಡಿ. ಕುಮಾರಸ್ವಾಮಿ, ‘ಚನ್ನಪಟ್ಟಣ ಟಿಕೆಟ್ ವಿಚಾರಕ್ಕೆ ನೆಲದವರೆಗೂ ಬಗ್ಗಿದ್ದೇನೆ, ಇನ್ನೂ ಬಗ್ಗಿ ಎಂದರೆ ಎಲ್ಲಿಗೆ ಬಗ್ಗಲಿ, ನನ್ನ ತಾಳ್ಮೆಗೂ ಮಿತಿ ಇದೆ’ ಎಂದು ಬಿಜೆಪಿಗೆ ಕ್ಷೇತ್ರ ಬಿಟ್ಟುಕೊಡದಿರುವ ಸಂದೇಶ ರವಾನಿಸಿದ್ದಾರೆ.

ಮಂಗಳವಾರ ಚನ್ನಪಟ್ಟಣದಲ್ಲಿ ತಮ್ಮ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ಅವರು, ‘ಯಾವುದೆ ರೀತಿಯ ದುಡುಕಿನ ತೀರ್ಮಾನ ಇಲ್ಲ. ನಮ್ಮ ಮುಖಂಡರು, ಕಾರ್ಯಕರ್ತರ ಅಭಿಪ್ರಾಯದಂತೆ ಮುಂದುವರೆಯುತ್ತೇನೆ. ಇಷ್ಟು ದಿನ ತಾಳ್ಮೆಯಿಂದ ಹೋರಾಟ ಮಾಡಿಕೊಂಡು, ನಿಮ್ಮ ಗೌರವವನ್ನು ಎತ್ತಿ ಹಿಡಿದುಕೊಂಡು ಬಂದಿದ್ದೇನೆ’ ಎಂದು ಹೇಳಿದರು.

ಇದೇ ವೇಳೆ ಕಾರ್ಯಕರ್ತರು ಯಾವ ಚಿಹ್ನೆ ಎಂದು ಹೇಳಿ. ನಿಮ್ಮನ್ನು ಗೆಲ್ಲಿಸಿಕೊಂಡು ಬರುವುದು ನಮ್ಮ ಜವಾಬ್ದಾರಿ ಎಂದು ಕೂಗಿದರು. ಅಲ್ಲದೇ, ಯೋಗೇಶ್ವರ್ ಪರವಾಗಿ ಘೋಷಣೆಗಳನ್ನು ಕೂಗಿದರು.

ಈ ವೇಳೆ ಮಾತನಾಡಿದ ಸ್ಥಳೀಯ ಮುಖಂಡರೊಬ್ಬರು, ‘ಎನ್‍ಡಿಎ ಅಭ್ಯರ್ಥಿಯಾಗಿಯೇ ಕಣಕ್ಕಿಳಿಯಬೇಕು ಎಂದು ನಾವು ಕಾಯುತ್ತಿದ್ದೇವೆ. ಅವರು ಸೂಕ್ತ ತೀರ್ಮಾನ ಕೈಗೊಳ್ಳಲಿದ್ದರೆ ನಾವು ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News