ತ್ಯಾಜ್ಯ ನೀರು ಸಂಸ್ಕರಿಸಿ ಮಾರಾಟ ಮಾಡಲು ಮಾನದಂಡ: ಸಚಿವ ಈಶ್ವರ್ ಖಂಡ್ರೆ

Update: 2024-03-06 11:45 GMT

ಬೆಂಗಳೂರು : ಬೃಹತ್ ಕಟ್ಟಡ ಸಮುಚ್ಚಯಗಳ ತ್ಯಾಜ್ಯ ನೀರನ್ನು ಸಂಸ್ಕರಿಸಿ, ಶುದ್ಧೀಕರಿಸಿ ಅದನ್ನು ಪುನರ್ಬಳಕೆಗಾಗಿ, ಮಾರಾಟ ಮಾಡಲು ಮಾನದಂಡಗಳನ್ನು ರೂಪಿಸಿ ಒಂದು ವಾರದೊಳಗೆ ಆದೇಶ ಹೊರಡಿಸಲಾಗುವುದು ಎಂದು ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಬುಧವಾರ ವಿಕಾಸಸೌಧದದಲ್ಲಿ ಕರ್ನಾಟಕ ಚೌಗುಭೂಮಿ ಪ್ರಾಧಿಕಾರದ ವೆಬ್‍ಸೈಟ್‍ಗೆ ಚಾಲನೆ ನೀಡಿ ಮಾತನಾಡಿದ ಅವರು, "ಬೆಂಗಳೂರಿನಲ್ಲಿ ಜನಸಂಖ್ಯೆ ಹೆಚ್ಚಳವಾಗುತ್ತಿದ್ದು, ಅದಕ್ಕೆ ಅನುಗುಣವಾಗಿ ನೀರು ಪೂರೈಕೆ ಕಷ್ಟಸಾಧ್ಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಲಮೂಲಗಳ ರಕ್ಷಣೆ ಮತ್ತು ನೀರಿನ ಮರುಬಳಕೆಗೆ ಆದ್ಯತೆ ನೀಡುವ ಅಗತ್ಯವಿದೆ" ಎಂದರು.

ಸೂಕ್ತ ರೀತಿಯಲ್ಲಿ ನೀರು ಸಂಸ್ಕರಿಸಿದರೆ ಬೆಂಗಳೂರು ನಗರದಲ್ಲಿ ನಿತ್ಯ 250ರಿಂದ 300 ಎಂಎಲ್‍ಡಿಯಷ್ಟು ನೀರು ಮರು ಬಳಕೆಗೆ ಲಭಿಸಲಿದೆ. ಆದರೆ ಈ ನೀರನ್ನು ಯಾವುದೇ ಕಾರಣಕ್ಕೂ ಕುಡಿಯಲು, ಔಷಧ ಮತ್ತು ಆಹಾರ ತಯಾರಿಕೆಗೆ ಬಳಸದಂತೆ ನಿರ್ಬಂಧಿಸಲಾಗುವುದು. ಮಾರಾಟ ಮಾಡಲಾಗುವ ಮರುಬಳಕೆ ನೀರಿನ ಶುದ್ಧತೆಯ ಜವಾಬ್ದಾರಿ ಕಟ್ಟಡ ಸಮುಚ್ಚಯಗಳ ಸಂಘಗಳು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಹಾಗೂ ಬಿಡಬ್ಲ್ಯುಎಸ್.ಎಸ್.ಬಿ ಮತ್ತಿತತರೆ ಪೂರಕ ಸಂಸ್ಥೆಗಳ ಮೇಲೂ ಇರುತ್ತದೆ ಎಂದು ಹೇಳಿದರು.

ಬಹುಮಹಡಿ ಕಟ್ಟಡಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ಜಲವನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಆ ನೀರನ್ನು ಹತ್ತಿರದ ಕೆರೆಗಳಿಗೆ ಕೊಳವೆಯ ಮೂಲಕ ಹರಿಸಿದರೆ ಕೆರೆಗಳಲ್ಲಿ ನೀರು ಇರುತ್ತದೆ ಜೊತೆಗೆ ಅಂತರ್ಜಲ ಮಟ್ಟವೂ ಹೆಚ್ಚುತ್ತದೆ. ಈ ಕುರಿತಂತೆ ಇಂದು ತಮ್ಮ ಕಚೇರಿಯಲ್ಲಿ ಬಿಬಿಎಂಪಿ, ಬಿಡಿಎ, ನಗರಾಭಿವೃದ್ಧಿ ಇಲಾಖೆ, ಪರಿಸರ ಇಲಾಖೆಯ ಅಧಿಕಾರಿಗಳು ಮತ್ತು ಕಟ್ಟಡ ಸಮುಚ್ಛಯಗಳ ನಿವಾಸಿಗಳ ಸಂಘದ ಪ್ರತಿನಿಧಿಗಳು ಹಾಗೂ ಬಾಧ್ಯಸ್ಥರೊಂದಿಗೆ ನಡೆದ ಸಭೆಯಲ್ಲಿ ಸೂಚಿಸಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಹಕ್ಕಿಪಕ್ಷಿಗಳು ಹೆಚ್ಚಾಗಿ ಇರುವ ಮತ್ತು 2.25 ಹೆಕ್ಟೇರ್ ಗಿಂತ ಹೆಚ್ಚು ವ್ಯಾಪ್ತಿಯ ಕೆರೆ, ಕುಂಟೆಗಳನ್ನು ಜೌಗು ಭೂಮಿಯೆಂದು ಗುರುತಿಸಲು ತೀರ್ಮಾನಿಸಲಾಗಿದೆ. ಇಂತಹ 16,700ಕ್ಕೂ ಅಧಿಕ ಜೌಗು ಭೂಮಿ ತಾಣಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಸಂಬಂಧಿತ ಪಂಚಾಯಿತಿ, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ವಿವಿಧ ಇಲಾಖೆಗಳ ಅನುಮತಿ ಪಡೆದು ಅದನ್ನು ಅಧಿಕೃತವಾಗಿ ಜೌಗು ಭೂಮಿ ಪ್ರದೇಶ ಎಂದು ಘೋಷಿಸಲಾಗುವುದು ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News