ಜನತಾ ದರ್ಶನ ಸರಕಾರದ ಕ್ರಾಂತಿಕಾರಿ ಹೆಜ್ಜೆ : ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್
ಮಂಗಳೂರು, ಸೆ.25: ಜನಸ್ನೇಹಿ ಆಡಳಿತ ಕೊಡುವ ನಿಟ್ಟಿನಲ್ಲಿ ಜನತಾ ದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾ ಗಿದ್ದು, ಸರಕಾರದ ಇದೊಂದು ಕ್ರಾಂತಿಕಾರಿ ಹೆಜ್ಜೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸೋಮವಾರ ನಡೆದ ಜನತಾದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಒಳ್ಳೆಯ ಆಡಳಿತ ಕೊಡಬೇಕು. ಸರಕಾರದ ಯೋಜನೆಗಳು ಅನುಷ್ಠಾನಗೊಳ್ಳಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು.
ಜನತಾ ದರ್ಶನದಲ್ಲಿ ಸ್ವೀಕರಿಸಿದ ಅರ್ಜಿಗಳನ್ನು ಅಧಿಕಾರಿಗಳು ಸರಿಯಾಗಿ ವಿಲೇವಾರಿ ಮಾಡಬೇಕು. ಒಂದು ವೇಳೆ ಅರ್ಜಿಗಳನ್ನು ವಿಲೇವಾರಿ ಮಾಡಲು ತಮ್ಮ ಅಧಿಕಾರ ವ್ಯಾಪ್ತಿಯೊಳಗೆ ಸಾಧ್ಯವಾಗದಿದ್ದರೆ ಅವುಗಳ ಬಗ್ಗೆ ಅರ್ಜಿದಾರರಿಗೆ ತಿಳಿಸಬೇಕು. ಅನತ್ಯವಾಗಿ ಜನರು ಅಲೆದಾಡುವಂತಾಗಬಾರದು, ಅವರಿಗೆ ತೊಂದರೆಯಾಗಬಾರದು. ಆದ ಕಾರಣ ಅಧಿಕಾರಿಗಳಲ್ಲಿ ಸ್ಪಷ್ಟತೆ ಇರಬೇಕು ಎಂದು ಹೇಳಿದರು.
ಅರ್ಜಿಗಳ ವಿಲೇವಾರಿ ವಿಚಾರದಲ್ಲಿ ಉದಾಸೀನ ಮಾಡಬಾರದು ಜನರಲ್ಲಿ ಈ ಕಾರ್ಯಕ್ರಮದ ಮೂಲಕ ವಿಶ್ವಾಸ ಮೂಡಬೇಕು. ಜನರ ಸಮಸ್ಯೆಗಳಿಗೆ ಪ್ರ್ರಾಮಾಣಿಕವಾಗಿ ಸ್ಪಂದಿಸಬೇಕು ಎಂದು ಅಧಿಕಾರಿಗಳಿಗೆ ಕಿವಿಮಾತು ನುಡಿದರು.
ಜಿಲ್ಲಾ ಕೇಂದ್ರದಲ್ಲಿ ಮೊದಲ ಜನತಾ ದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಮುಂದೆ ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಜನತಾ ದರ್ಶನ ಕಾರ್ಯಕ್ರಮವನ್ನು ಏರ್ಪಡಿಸಲಾಗುವುದು ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್,ಅಪರ ಜಿಲ್ಲಾಧಿಕಾರಿ ಡಾ. ಜಿ.ಸಂತೋಷ್ ಕುಮಾರ್, ಜಿಪಂ ಸಿಇಒ ಡಾ. ಆನಂದ್ ಕೆ, ಮಂಗಳೂರು ಸಹಾಯಕ ಆಯುಕ್ತ ಹರ್ಷವರ್ಧನ್ ಎಸ್‌ಜಿ, ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್, ಜಿಲ್ಲಾ ಎಸ್ಪಿ ಸಿಬಿ ರಿಷ್ಯಂತ್, ಪಾಲಿಕೆ ಸದಸ್ಯರಾದ ಶಶಿಧರ ಹೆಗ್ಡೆ , ನವೀನ್ ಡಿ ಸೋಜ , ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
ಜನತಾ ದರ್ಶನ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂ ರಾವ್ ಅವರು ತಾಳ್ಮೆಯಿಂದಲೇ ಜನರ ಅಹವಾಲುಗಳನ್ನು ಸ್ವೀಕರಿಸಿದರು. ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಸ್ಥಳದಲ್ಲೇ ವಿಲೇವಾರಿ ಮಾಡಲಾಯಿತು.
ಕಾಂಗ್ರೆಸ್ ಸರಕಾರದ ಮೊದಲ ಜಿಲ್ಲಾ ಮಟ್ಟದ ಜನತಾದರ್ಶನ ಕಾರ್ಯಕ್ರಮದಲ್ಲಿ ಬಿಜೆಪಿಯಿಂದ ಆಯ್ಕೆಯಾಗಿರುವ ಶಾಸಕರು, ಮೇಯರ್, ಮಹಾನಗರ ಪಾಲಿಕೆ ಸದಸ್ಯರು ಗೈರು ಹಾಜರಾಗಿದ್ದರು.
ಬಿಜೆಪಿ ಸರಕಾರ ರಾಜ್ಯದಲ್ಲಿ ಆಡಳಿತದಲ್ಲಿದ್ದಾಗ ಪರಿಹಾರಗೊಳ್ಳದ ಸಮಸ್ಯೆಗಳು ಸೇರಿದಂತೆ ಜಿಲ್ಲೆಗಳ ವಿವಿಧ ತಾಲೂಕು ಗಳ ಜನರಿಂದ ಅರ್ಜಿಗಳ ಮಹಾಪೂರವೇ ಹರಿದು ಬಂತು.
ಅರ್ಜಿ ಸಲ್ಲಿಸಲು ವಿವಿಧ ಇಲಾಖೆಗಳ ಕೌಂಟರ್‌ಗಳು
ಮಿನಿ ಹಾಲ್‌ನಲ್ಲಿ ಕುಂದುಕೊರತೆಗಳನ್ನು ನೋಂದಾಯಿಸಲು ವಿವಿಧ ಇಲಾಖೆಗಳ ಕೌಂಟರ್‌ಗಳನ್ನು ತೆರೆಯಲಾಗಿತ್ತು.
ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಲು ಕಂದಾಯ, ಮೀನುಗಾರಿಕೆ, ಆಹಾರ, ಕೃಷಿ, ಕೈಗಾರಿಕೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್, ರೇಷ್ಮೆ , ತೋಟಗಾರಿಕೆ, ಪಶುಸಂಗೋಪನೆ, ಅರಣ್ಯ, ಕಾರ್ಮಿಕ, ಕಂದಾಯ, ವಿಕಲಚೇತನ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ ಹೀಗೆ ಪ್ರಮುಖ ಇಲಾಖೆಗಳ ಕೌಂಟರ್ ಗಳು ಇತ್ತು.
ಪುರಭವನದ ಮಿನಿ ಹಾಲ್ನಲ್ಲಿ 14 ಪ್ರತ್ಯೇಕ ಕೌಂಟರ್‌ಗಳಲ್ಲಿ ಆಯಾ ಇಲಾಖೆಗೆ ಸಂಬಂಧಿಸಿದ ಅರ್ಜಿ ಸಲ್ಲಿಸಿ, ಟೋಕನ್ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆ ವರೆಗೂ ಜನದಟ್ಟಣಿ ಮುಂದುವರಿದಿತ್ತು.
ಕಡಬ ತಾಲೂಕಿನಲ್ಲಿ ಬಗೆಹರಿಯದ ಸಮಸ್ಯೆ: 42 ಗ್ರಾಮಗಳನ್ನು ಒಳಗೊಂಡ ಕಡಬ ತಾಲೂಕು ಆರಂಭಗೊಂಡು ಐದು ಸಂದರೂ, ಇಲ್ಲಿನ ತಾಲೂಕಿನ ಆಡಳಿತ ಸೌಧದಲ್ಲಿ ತಹಶೀಲ್ದಾರ್ ಮಾತ್ರ ಇದ್ದಾರೆ. ಕೇವಲ ಒಬ್ಬರು ಆರ್‌ಐ ಇದ್ದಾರೆ, ಸಬ್ ರಿಜಿಸ್ಟ್ರಾರ್ ಕಚೇರಿ , ಕೃಷಿ, ತೋಟಗಾರಿಕೆ, ಕ್ಷೇತ್ರ ಶಿಕ್ಷಣಾಧಿಕಾರಿ, ಪಿಡಬ್ಲ್ಯುಡಿ, ಸಣ್ಣ ನೀರಾವರಿ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ, ಖಜಾನೆ ಇಲಾಖೆಗೆ ಕಚೇರಿಗಳು ಇದ್ದರೂ ಅಧಿಕಾರಿಗಲೇ ಇಲ್ಲ. ತಾಲೂಕಿನಲ್ಲಿ ಖಾಸಗಿ ಮತ್ತು ಸರಕಾರಿ ಪದವಿ ಕಾಲೇಜುಗಳು ಮತ್ತು ಐಟಿಐ ಇಲ್ಲ, ತಾಲೂಕಿನ ಸಮುದಾಯ ಆಸ್ಪತ್ರೆಯಲ್ಲಿ ಡಯಾಲಿಸ್ ಮತ್ತು ಎಕ್ಸ್‌ರೇ ಯಂತ್ರಗಳಿದ್ದರೂ ತಂತ್ರಜ್ಞರು ಇಲ್ಲ, 18 ಗ್ರಾಪಂಗಳ ಪೈಕಿ 7ಕ್ಕೆ ಪಿಡಿಒ ಇದ್ದಾರೆ ಹೀಗೆ ಕಡಬ ತಾಲೂಕು ಎದುರಿಸು ತ್ತಿರುವ ಹಲವು ಸಮಸ್ಯೆಗಳ ಪಟ್ಟಿಯನ್ನೇ ಜನತಾ ದರ್ಶನದಲ್ಲಿ ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸಯ್ಯದ್ ಮೀರಾ ಸಾಹೇಬ್ ಅವರು ಜಿಲ್ಲಾ ಉಸ್ತುವಾರಿ ಸಚಿವರ ಮುಂದಿಟ್ಟರು. ಸಚಿವರು ಸಮಸ್ಯೆಗಳ ಪರಿಹಾರ ನಿಟ್ಟಿನಲ್ಲಿ ಗಮನ ಹರಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.
ನೇತ್ರಾವತಿ ಜಲಾಭಿಮುಖ ಯೋಜನೆ ಅವೈಜ್ಞಾನಿಕ: ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ನೇತ್ರಾವತಿ ಜಲಾಭಿಮುಖಿ ಪ್ರದೇಶ ಅಭಿವೃದ್ಧಿ ಯೋಜನೆಯು ಅವೈಜ್ಞಾನಿಕವಾಗಿದೆ. ಈ ಯೋಜನೆ ಅನುಷ್ಠಾನಕ್ಕೆ ಪೂರ್ವ ದಲ್ಲಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿಲ್ಲ. ಈ ಯೋಜ ಪರಿಸರದ ಮೇಲೆ ತೀವ್ರ ದುಷ್ಪರಿಣಾಮ ಬೀರಲಿದೆ. ನದಿತಟದ ಕಾಂಡ್ಲಾವನಗಳು ನಾಶವಾಗುತ್ತಿವೆ. ಬೋಟ್ ಯಾರ್ಡ್‌ಗೆ ಕುತ್ತು ಉಂಟಾಗಲಿದೆ. ಇದನ್ನೇ ನಂಬಿರುವವ ಬದುಕು ಅತಂತ್ರರಾಗುವ ಅಪಾಯವಿದೆ. ಸೈಕಲ್ ಟ್ರ್ಯಾಕ್, ವಾಕಿಂಗ್ ಟ್ರ್ಯಾಕ್ ಯೋಜನೆಯನ್ನು ಅವೈೆಜ್ಞಾನಿಕವಾಗಿ ರೂಪಿಸಲಾಗಿದೆ. ಇದರ ಬಗ್ಗೆ ಸರಕಾರ ಗಮನಹರಿಸಬೇಕು ಎಂದು ನದಿ ತೀರದ ನಿವಾಸಿ ಶೆರಿಲ್ ಕೊಲಾಸೊ ಅವರು ಸಚಿವರ ಗಮನ ಸೆಳೆದರು. ಈ ಸಂಬಂಧ ಪ್ರತ್ಯೇಕ ಸಭೆ ನಡೆಸಿ ಚರ್ಚಿಸುವುದಾಗಿ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದರು.
ಷಟ್ಪಥ ರಸ್ತೆಗೆ ಆಗ್ರಹ: ‘ಪಂಪ್‌ವೆಲ್‌ಲ್‌ನಿಂದ ಕುಂಟಿಕಾನದವರೆಗಿನ ಫ್ಲೈ ಓವರ್ ನಿರ್ಮಾಣವನ್ನು ಪರಿಸರಕ್ಕೆ ಧಕ್ಕೆಯಾ ಗದಂತೆ ನಿರ್ಮಾಣ ಮಾಡಬೇಕು. ಷಟ್ಪಥ ಹೆದ್ದಾರಿ ಮಾಡಬೇಕು ಎಂದು ವನ ಚಾರಿಟಬಲ್ ಟ್ರಸ್ಟ್ ಸೇರಿದಂತೆ ಪರಿಸರ ಪರ ಸಂಘಟನೆಗಳ ಸದಸ್ಯರ ಸಿಟಿಝನ್ಸ್ ಫಾರ್ ಸಸ್ಟೇನಬಲ್ ಡೆವಲಪ್ಮೆಂಟ್ ಫೋರಮ್ ಮನವಿ ಸಲ್ಲಿಸಿದೆ.
‘ಸೆಂಟ್ರಲ್ ಮಾರುಕಟ್ಟೆಯ ಹೊಸ ಕಟ್ಟಡದಲ್ಲಿ ಕನಿಷ್ಠ 75 ರೈತ ಮಹಿಳೆಯರಿಗೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸಬೇಕು’ ಎಂದು ಸೆಂಟರ್ ಆಫ್ ಡೆವಲಪ್‌ಮೆಂಟ್ ಸ್ಟಡೀಸ್ ಆ್ಯಂಡ್ ಅಗ್ರಿಕಲ್ಚರ್‌ನ ನಿರ್ದೇಶಕಿ ರೀಟಾ ನೊರೋನ್ಹ ವಿನಂತಿಸಿದರು.
ಜನತಾ ದರ್ಶನದಲ್ಲಿ 366 ಅರ್ಜಿ ಸ್ವೀಕಾರ
ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಇದೇ ಮೊದಲ ಬಾರಿಗೆ ನಡೆದ ಜನತಾ ದರ್ಶನದಲ್ಲಿ ಒಟ್ಟು 366 ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ತಿಳಿಸಿದ್ದಾರೆ.
ಜನತಾ ದರ್ಶನದಲ್ಲಿ ಸ್ವೀಕರಿಸಲಾದ ಅರ್ಜಿಗಳನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು, ಆ ಅರ್ಜಿಗಳಿಗೆ ಸಕಾಲಕ್ಕೆ ಪರಿಹಾರ ನೀಡುವ ಮೂಲಕ ಜನರಿಗೆ ಸ್ಪಂದಿಸಬೇಕು. ಆದಾಗ ಮಾತ್ರ ಅವರ ಸಮಸ್ಯೆಗಳಿಗೆ ಸರಕಾರ ಸ್ಪಂದಿಸಿದೆಎನ್ನುವ ಭಾವನೆ ಬರುತ್ತದೆ.ಇದಕ್ಕೆ ಪ್ರಾಮಾಣಿಕ ಯತ್ನ ಮಾಡುವಂತೆ ಅವರು ಕಿವಿಮಾತು ಹೇಳಿದರು.
ಸ್ವೀಕರಿಸಲಾದ ಎಲ್ಲಾ 366 ಅರ್ಜಿಗಳಿಗೆ ಯಾವ ಕ್ರಮವಹಿಸಬೇಕೆಂಬುದನ್ನು ಅರ್ಜಿ ಮೇಲೆ ನಮೂದಿಸಿ, ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದ್ದಾರೆ.