ಬ್ರಿಗೇಡ್ ಹೆಸರಲ್ಲಿ ದಲಿತ ಯುವಕನ ದಾರಿ ತಪ್ಪಿಸಿ ಬಿಜೆಪಿ ಕಾರ್ಯಕರ್ತರಿಂದಲೇ ಹತ್ಯೆ; ಕಾಂಗ್ರೆಸ್ ಗಂಭೀರ ಆರೋಪ
ಬೆಂಗಳೂರು: ಮೈಸೂರು ಜಿಲ್ಲೆಯ ಟಿ.ನರಸೀಪುರ ಪಟ್ಟಣದಲ್ಲಿ ರವಿವಾರ ನಡೆದಿದ್ದ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ನಾಯಕ್ ಕೊಲೆ ಪ್ರಕರಣದಲ್ಲಿ ಬಿಜೆಪಿ ಕಾರ್ಯಕರ್ತರ ಕೈವಾಡ ಇದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, 'ಮೈಸೂರಿನ ಬಿಜೆಪಿ ಕಾರ್ಪೋರೇಟರ್ ಸಹೋದರ ಶಂಕರ್ ಅಲಿಯಾಸ್ ತುಪ್ಪ ಎಂಬಾತನನ್ನು ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ. ಅದ್ಯಾವುದೋ ಬ್ರಿಗೇಡ್ ಹೆಸರಲ್ಲಿ ದಲಿತ ಯುವಕನನ್ನು ದಾರಿ ತಪ್ಪಿಸಿ ಬಿಜೆಪಿ ಕಾರ್ಯಕರ್ತರು ಕೊಂದು ಹಾಕಿದ್ದಾರೆ. ದಲಿತರೆಂದರೆ ಬಿಜೆಪಿಗೆ ಯಾಕಿಷ್ಟು ಅಸಹನೆ? ದಲಿತರಿಗೆ, ಹಿಂದುಳಿದ ವರ್ಗದ ಯುವಕರಿಗೆ ಬಿಜೆಪಿ ಕೇಸರಿ ಶಾಲು ಹೊದಿಸುವುದೇ ಕೊನೆಗೊಂದು ದಿನ ಬಿಳಿ ವಸ್ತ್ರ ಹೊದಿಸಲು' ಎಂದು ಕಿಡಿಕಾರಿದೆ.
''ಬಿಜೆಪಿಯ ಹತ್ಯಾ ರಾಜಕೀಯಕ್ಕೆ ದಲಿತ ಹಿಂದುಳಿದ ವರ್ಗದವರನ್ನೇ ಬಲಿ ಪಡೆಯುತ್ತಿರುವುದೇಕೆ? ಹೆಣ ಕಂಡೊಡನೆ ರಣ ಹದ್ದುಗಳಂತೆ ಹಾರಿಬರುವ ಬಿಜೆಪಿಗೆ ಈಗ ಆಘಾತ ಉಂಟಾಗಿದೆ. ಬಿಜೆಪಿ ಬೆಂಬಲಿಸುವ ಸಂಘಟನೆಯ ಕಾರ್ಯಕರ್ತನನ್ನು ಬಿಜೆಪಿಯ ಕಾರ್ಯಕರ್ತರೇ ಕೊಂದು ಹಾಕಿದ್ದಾರೆ. ಹೆಣ ರಾಜಕೀಯ ಮಾಡುವ ಬಿಜೆಪಿ ಈಗ ಉತ್ತರ ನೀಡಬೇಕು. ಕಾರ್ಯಕರ್ತರನ್ನು ಬೆಳೆಸುತ್ತಿದೆಯೇ, ಕೊಲೆಗಡುಕರನ್ನು ಬೆಳೆಸುತ್ತಿದೆಯೇ?, ಸರ್ಕಾರದ ಮೇಲೆ ಆರೋಪಿಸಲು ಸಜ್ಜಾಗಿದ್ದ ಬಿಜೆಪಿ ನಾಯಕರು ತಮ್ಮವರೇ ಕೊಲೆಗಾರರು ಎಂದು ತಿಳಿದ ನಂತರ ಬಿಲ ಸೇರಿರುವುದೇಕೆ?'' ಎಂದು ಬಿಜೆಪಿ ನಾಯಕರನ್ನು ಕಾಂಗ್ರೆಸ್ ಪ್ರಶ್ನೆ ಮಾಡಿದೆ.