ದಾವಣಗೆರೆ: 8 ಕಿ.ಮೀ. ಕ್ರಮಿಸಿ ಕೊಲೆ ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿದ ಶ್ವಾನ ʼತಾರಾʼ

Update: 2023-08-09 18:53 GMT

ಡಾಗ್ ಸ್ಕ್ವಾಡ್‌ನ ಕ್ರೈಂ ವಿಭಾಗದ ‘‘ತಾರಾ

ದಾವಣಗೆರೆ,ಆ.9: ಇತ್ತೀಚೆಗೆ ದ್ವೇಷದಿಂದ ನರಸಿಂಹ ಎಂಬ ಯುವಕನನ್ನು ಕೊಲೆ ಮಾಡಿದ್ದ ಆರೋಪಿ ಶಿವಯೋಗಿಯನ್ನು ಪತ್ತೆ ಹಚ್ಚುವಲ್ಲಿ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದು, ಈ ಪ್ರಕರಣ ಭೇದಿಸುವಲ್ಲಿ ದಾವಣಗೆರೆ ಜಿಲ್ಲಾ ಡಾಗ್ ಸ್ಕ್ವಾಡ್‌ನ ಕ್ರೈಂ ವಿಭಾಗದ ‘‘ತಾರಾ’’ ಎಂಬ ಶ್ವಾನ ಪ್ರಮುಖ ಪಾತ್ರ ವಹಿಸಿದೆ.

ಮಲ್ಲಶೆಟ್ಟಿ ಹಳ್ಳಿಯ ಎನ್‌ಎಚ್-48 ರಸ್ತೆಯಲ್ಲಿ ನರಸಿಂಹ ಎಂಬ ಯುವಕನನ್ನು ಆರೋಪಿ ಮಾರಕಾಸ್ತ್ರದಿಂದ ಕೊಲೆ ಮಾಡಿ ಪರಾರಿಯಾಗಿ ದ್ದ. ಈ ಸಂಬಂಧ ಆತನ ತಾಯಿ ಗ್ರಾಮಾಂತರ ಠಾಣೆಯಲ್ಲಿ ಕ್ರಮ ಕೈಗೊಳ್ಳುವಂತೆ ದೂರು ದಾಖಲಿಸಿದ್ದರು. ಈ ಪ್ರಕರಣದ ಆರೋಪಿಯ ಪತ್ತೆ ಕಾರ್ಯಕ್ಕೆ ಎಎಸ್ಪಿ ರಾಮಗೊಂಡ ಬಸರಗಿ, ಗ್ರಾಮಾಂತರ ಡಿವೈಎಸ್ಪಿ ಬಸವರಾಜ್ ಬಿ.ಎಸ್. ಅವರ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕ ಕಿರಣ್‌ಕುಮಾರ್ ಇ. ವೈ. ನೇತೃತ್ವದಲ್ಲಿ ಪಿಎಸ್‌ಐ ಹಾರೂನ್ ಅಖ್ತರ್ ಪೊಲೀಸ್ ತಂಡ ಹಾಗೂ ದಾವಣಗೆರೆ ಜಿಲ್ಲಾ ಡಾಗ್ ಸ್ಕ್ವಾಡ್‌ನ ಕ್ರೈಂ ವಿಭಾಗದ ‘‘ತಾರಾ’’ ಎಂಬ ಶ್ವಾನವು ಸುಮಾರು 8 ಕಿ.ಮೀ. ಕ್ರಮಿಸಿ ಆರೋಪಿಯ ಗುರುತು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.

ಶ್ರೀರಾಮನಗರದ ಶಿವಯೋಗಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಆ. 6ರಂದು ರಾತ್ರಿ 10:00 ಗಂಟೆಗೆ ಎನ್.ಎಚ್-48 ರಸ್ತೆ ಪಕ್ಕದ ಮಲ್ಲಶೆಟ್ಟಿಹಳ್ಳಿ ಬಾಪೂಜಿ ಬಡಾವಣೆ ಸರ್ವಿಸ್ ರಸ್ತೆ ಪಕ್ಕದಲ್ಲಿ ನರಸಿಂಹನ ಕಿವಿ, ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯ ಪತ್ತೆ ಕಾರ್ಯದಲ್ಲಿ ಶ್ರಮಿಸಿದ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿ ಪೊಲೀಸ್ ನಿರೀಕ್ಷಕ ಕಿರಣ್ ಕುಮಾರ್, ಪಿಎಸ್‌ಐ ಹಾರೂನ್ ಅಖ್ತರ್, ಎಎಸ್‌ಐ, ನಾರಪ್ಪ ಮತ್ತು ಸಿಬ್ಬಂದಿ ಜಗದೀಶ, ಮಂಜುನಾಥ, ಮಹೇಶ್, ವಿಶ್ವನಾಥ, ಅಣ್ಣಯ್ಯ, ಮಂಜುನಾಥ ನಾಯ್ಕ, ದೇವೇಂದ್ರನಾಯ್ಕ, ಪ್ರಕಾಶ ಕೆ.ಎಂ., ಪ್ರವೀಣ ಅಂತರವಳ್ಳಿ ಅವರನ್ನು ಎಸ್ಪಿ ಡಾ. ಅರುಣ್ ಕೆ. ಶ್ಲಾಘಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News