ದಾವಣಗೆರೆ ಲೋಕಸಭಾ ಕ್ಷೇತ್ರ | ಪತ್ನಿ ಸ್ಪರ್ಧೆ ಬಗ್ಗೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹೇಳಿದ್ದೇನು?

Update: 2023-09-26 15:56 GMT

ದಾವಣಗೆರೆ: ʼʼಕಾಂಗ್ರೆಸ್ ಪಕ್ಷಕ್ಕಾಗಿ ಮೊದನಿಂದಲೂ ಹೋರಾಟ ಮಾಡಿಕೊಂಡು ಬಂದವರಿಗೆ ದಾವಣಗೆರೆ ಲೋಕಸಭಾ ಟಿಕೆಟ್ ಸಿಗುತ್ತದೆ. ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಸ್ಪರ್ಧೆ ಕುರಿತಂತೆ ಇನ್ನೂ ಯೋಚಿಸಲು ಸಮಯ ಇದೆʼʼ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹೇಳಿದ್ದಾರೆ. 

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼʼಚನ್ನಯ್ಯ ಒಡೆಯರ್ ಪುತ್ರ, ಮೊಮ್ಮಗ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಬಿ.ಮಂಜಪ್ಪ ಸೇರಿದಂತೆ ಹಲವರು ಟಿಕೆಟ್ ಕೇಳಿದ್ದಾರೆ. ಪಕ್ಷದ ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತದೆ. ಪಕ್ಷಕ್ಕಾಗಿ ಯಾರು ದುಡಿದಿದ್ದಾರೆ, ಒಳ್ಳೆಯ ಕೆಲಸ ಮಾಡಿದ್ದಾರೆ ಎಂಬುದೂ ಸೇರಿದಂತೆ ಎಲ್ಲಾ ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಿದ ಬಳಿಕ ನಿರ್ಧಾರ ತೆಗೆದುಕೊಳ್ಳಲಾಗುವುದು. ಪ್ರಭಾ ಮಲ್ಲಿಕಾರ್ಜುನ್ ಸ್ಪರ್ಧೆ ಕುರಿತಂತೆ ಈವರೆಗೂ ಯಾವುದೇ ಚರ್ಚೆ ನಡೆದಿಲ್ಲ. ಕಾರ್ಯಕರ್ತರು, ಮುಖಂಡರ ಅಭಿಪ್ರಾಯ ಸಂಗ್ರಹಿಸಿ ಸೂಕ್ತ ಅಭ್ಯರ್ಥಿ ಕಣಕ್ಕಿಳಿಸುತ್ತೇವೆʼʼ ಎಂದರು.

ʼʼಹಾವೇರಿ ಲೋಕಸಭಾ ಕ್ಷೇತ್ರದ ಉಸ್ತುವಾರಿಯಾಗಿ ನನ್ನನ್ನು ನೇಮಕ ಮಾಡಲಾಗಿದೆ. ಅಲ್ಲಿನ ಮುಖಂಡರು, ಕಾರ್ಯಕರ್ತರ ಸಭೆ ಕರೆದು, ಸೂಕ್ತವಾದ ಅಭ್ಯರ್ಥಿ ಆಯ್ಕೆ ಮಾಡುತ್ತೇವೆ. ಈ ಬಗ್ಗೆ ಹೈಕಮಾಂಡ್‌ಗೆ ವರದಿ ಕಳಿಸುತ್ತೇವೆ. ನಮ್ಮ ಅಭ್ಯರ್ಥಿ ಗೆಲ್ಲುವುದಷ್ಟೇ ಮುಖ್ಯ ಎಂದರಲ್ಲದೆ, ಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಿಂದ ನಮ್ಮ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಕಳೆದ ಚುನಾವಣೆಯಲ್ಲಿ ನಮ್ಮ ಜೊತೆ ಜೆಡಿಎಸ್ ಮೈತ್ರಿಯಾದರೂ ಪ್ರಯೋಜನವಾಗಿರಲಿಲ್ಲ ಎಂದು ಅವರು ನುಡಿದರು.

ʼʼಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜನವರಿ ತಿಂಗಳೊಳಗೆ ಲೋಕಸಭಾ ಅಭ್ಯರ್ಥಿಗಳನ್ನು ಪ್ರಕಟಿಸಲಿದ್ದಾರೆ ಎಂಬ ಮಾಹಿತಿ ಇದೆ. ಅವರ ನಿರ್ಧಾರಕ್ಕೆ ನಾವು ಸ್ವಾಗತಿಸುತ್ತೇವೆ ಎಂದ ಮಲ್ಲಿಕಾರ್ಜುನ್, ಆಸೆ ಎಲ್ಲರಿಗೂ ಇರುತ್ತದೆ. ಯಾರಿಗೆ ಇರುವುದಿಲ್ಲ ಹೇಳಿ? ಅದರಂತೆ ಡಿ.ಕೆ.ಶಿವಕುಮಾರರಿಗೂ ಮುಖ್ಯಮಂತ್ರಿ ಆಗಬೇಕೆಂಬ ಆಸೆ ಇದೆ. ಡಿ.ಕೆ.ಶಿವಕುಮಾರ್ ಸಿಎಂ ಆಗಬೇಕೆಂಬ ಚನ್ನಗಿರಿ ಶಾಸಕರ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲʼʼ ಎಂದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News