ಚನ್ನಪಟ್ಟಣದಲ್ಲಿ ಯಾರೇ ಅಭ್ಯರ್ಥಿಯಾದರೂ ನನಗೆ ಮತ : ಡಿಸಿಎಂ ಡಿ.ಕೆ.ಶಿವಕುಮಾರ್

Update: 2024-08-30 11:24 GMT

ಬೆಂಗಳೂರು : ಚನ್ನಪಟ್ಟಣದ ಅಭ್ಯರ್ಥಿ ನಾನೇ. ಕಾಂಗ್ರೆಸ್ ಪಕ್ಷದಿಂದ ಯಾರೇ ಅಭ್ಯರ್ಥಿ ಆದರೂ ನನಗೆ ಮತ ಹಾಕಿದಂತೆ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಪುನರುಚ್ಚರಿಸಿದರು.

ಚನ್ನಪಟ್ಟಣ ಉಪ ಚುನಾವಣೆ ಸಂಬಂಧ ಬಿಜೆಪಿ-ಜೆಡಿಎಸ್ ಪಕ್ಷಗಳು ಚರ್ಚೆ ನಡೆಸಿರುವ ಬಗ್ಗೆ ಸದಾಶಿವನಗರದ ನಿವಾಸದ ಬಳಿ ಮಾಧ್ಯಮದವರ ಜೊತೆ ಮಾತನಾಡಿದ ಅವರು,"ಚನ್ನಪಟ್ಟಣದಲ್ಲಿ ಪಕ್ಷದಿಂದ ಯಾರೇ ಅಭ್ಯರ್ಥಿಯಾದರೂ ನನಗೆ ಮತ ಹಾಕಿದಂತೆ. ಬಿ ಫಾರಂ ಬರೆವುದು, ಅದಕ್ಕೆ ಸಹಿ ಹಾಕುವುದು ನಾನು. ನಿಮ್ಮನ್ನು (ಮಾಧ್ಯಮದವರನ್ನು) ನಿಲ್ಲಿಸಿದರೂ ನನಗೆ ಓಟು" ಎಂದು ಹೇಳಿದರು.

ಉಪ ಚುನಾವಣೆ ತಯಾರಿಗಾಗಿ ಚನ್ನಪಟ್ಟಣದಲ್ಲಿ ಉದ್ಯೋಗಮೇಳ ಮಾಡಲಾಗುತ್ತಿದೆಯೇ ಎಂದು ಪ್ರಶ್ನಿಸಿದಾಗ "ಸೇವೆ ಮಾಡಲು ನಮಗೆ ಅಧಿಕಾರ, ಅವಕಾಶ ನೀಡಿದ್ದಾರೆ. ನಾವು ನಮ್ಮ ಅಧಿಕಾರ ಬಳಸಿಕೊಂಡು ಜನರಿಗಾಗಿ ಯಾವ ರೀತಿ ಒಳ್ಳೆಯದು ಮಾಡಬೇಕು ಎಂಬುದು ನಮ್ಮ ಸರ್ಕಾರದ ಚಿಂತನೆ. ಗುರುವಾರ ಎತ್ತಿನಹೊಳೆ ಯೋಜನೆ ಪರೀಕ್ಷಾರ್ಥ ಕಾರ್ಯಾಚರಣೆ ವೀಕ್ಷಣೆಗೆ ಹೋಗಿದ್ದೆ. ಕೆಲವರು ಮೂಗು, ಬಾಯಿ, ಕಿವಿ ಕತ್ತರಿಸಿಕೊಳ್ಳುತ್ತೇನೆ ಎಂದು ಹೇಳುತ್ತಿದ್ದರು. ಆದರೆ ನಾನು ಏತ ಕಾಮಗಾರಿ ಪರೀಕ್ಷಾರ್ಥ ಕಾರ್ಯಾಚರಣೆ ಚಾಲನೆ ನೀಡಿದ್ದು, ಸಧ್ಯದಲ್ಲೇ ಶುಭ ಮುಹೂರ್ತ ನೋಡಿ ಉದ್ಘಾಟನಾ ದಿನಾಂಕ ನಿಗದಿ ಮಾಡಲಿದ್ದೇವೆ. ಈ ಬಗ್ಗೆ ಸಿಎಂ ಜತೆ ಚರ್ಚೆ ಮಾಡಿದ್ದೇನೆ. ಇದು ನಮ್ಮ ಕೆಲಸದ ವೈಖರಿ" ಎಂದರು.

"ಅದೇ ರೀತಿ ಉದ್ಯೋಗ ಮೇಳ ಮೂಲಕ ನಮ್ಮ ಭಾಗದ ಯುವಕರಿಗೆ ಉದ್ಯೋಗ ಸಿಗುವಂತೆ ಮಾಡುತ್ತಿದ್ದೇವೆ. ನಾನು ಜಿಲ್ಲೆಗೆ ಹೋದಾಗಲೆಲ್ಲಾ ಕೆಲಸ ಕೊಡಿಸಿ ಎಂದು ಯುವಕರು ಅರ್ಜಿ ನೀಡುತ್ತಿದ್ದರು. ನಮಗೆ ಅರ್ಜಿ ಕೊಟ್ಟವರನ್ನು ಕರೆಸುತ್ತಿದ್ದೇವೆ. ಎಷ್ಟು ಜನರಿಗೆ ಉದ್ಯೋಗ ಸಿಗುತ್ತೋ ಸಿಗಲಿ. ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ" ಎಂದು ತಿಳಿಸಿದರು.

ರಾಜಭವನ ಚಲೋ ಬಗ್ಗೆ ಪ್ರತಿಕ್ರಿಯಿಸಿದ ಅವರು "ಶನಿವಾರ ರಾಜ್ಯಪಾಲರು ಭೇಟಿ ಮಾಡಲು ನಮಗೆ ಅವಕಾಶ ನೀಡಿದ್ದಾರೆ. ಇತ್ತೀಚೆಗೆ ನಡೆದ ನಿಶ್ಚಿತಾರ್ಥ ಕಾರ್ಯಕ್ರಮವೊಂದರಲ್ಲಿ ಅವರನ್ನು ಭೇಟಿ ಮಾಡಿದ್ದೆ. ಅವರು ಭೇಟಿಗೆ ಕಾಲಾವಕಾಶ ನೀಡಿದ್ದು, ನಾವು ನಮ್ಮ ಮನವಿ ಸಲ್ಲಿಸುತ್ತೇವೆ" ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News