ಬಿಬಿಎಂಪಿ ವ್ಯಾಪ್ತಿಯಲ್ಲಿ ‘ನಂಬಿಕೆ ನಕ್ಷೆ’ ಯೋಜನೆ ಜಾರಿ : ಡಿಸಿಎಂ ಡಿ.ಕೆ.ಶಿವಕುಮಾರ್

Update: 2024-09-02 14:21 GMT

ಡಿ.ಕೆ.ಶಿವಕುಮಾರ್

ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯಲ್ಲಿ ಕಟ್ಟಡ ನಕ್ಷೆ ಮಂಜೂರಾತಿ ವಿಚಾರದಲ್ಲಿ ಬೆಂಗಳೂರು ನಗರದ ಜನರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ‘ನಂಬಿಕೆ ನಕ್ಷೆ’ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರವಾಸಿಗಳೇ ತಮ್ಮ ಕಟ್ಟಡ ನಕ್ಷೆಯನ್ನು ಅನುಮೋದಿತ ಕಟ್ಟಡ ವಿನ್ಯಾಸಕಾರರು ಅಥವಾ ಎಂಜಿನಿಯರ್‌ ಗಳ ಬಳಿ ಅನುಮೋದಿಸಿಕೊಂಡು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಮಂಜೂರಾತಿ ಪಡೆದುಕೊಳ್ಳುವ ಯೋಜನೆ ಇದಾಗಿದೆ. 50/80 ವಿಸ್ತೀರ್ಣದ ವರೆಗಿನ ನಿವೇಶನಗಳಿಗೆ ಈ ‘ನಂಬಿಕೆ ನಕ್ಷೆ’ ಯೋಜನೆ ಅನ್ವಯವಾಗಲಿದೆ ಎಂದರು.

ಬಿಡಿಎ, ಗೃಹನಿರ್ಮಾಣ ಸಂಘದವರು 50/80 ವಿಸ್ತೀರ್ಣದವರೆಗಿನ ನಿವೇಶನಗಳನ್ನೇ ಹೆಚ್ಚಾಗಿ ಅಭಿವೃದ್ಧಿಪಡಿಸಿರುತ್ತಾರೆ. ಇಷ್ಟು ವಿಸ್ತೀರ್ಣದ ನಿವೇಶನದಲ್ಲಿ ಮನೆ ನಿರ್ಮಾಣ ಹಾಗೂ ನವೀಕರಣಕ್ಕೆ ಜನರು ಯಾವುದೇ ತೊಂದರೆಯಿಲ್ಲದೇ ಮುಂದಾಗಬಹುದು. ಅನುಮೋದಿತ ಲೆಕ್ಕ ಪರಿಶೋಧಕರಂತೆ ಅನುಮೋದಿತ ಎಂಜಿನಿಯರ್‌ಗಳು ಹಾಗೂ ಕಟ್ಟಡ ವಿನ್ಯಾಸಕಾರರ ಮೂಲಕ ತಾತ್ಕಾಲಿಕ ಕಟ್ಟಡ ನಕ್ಷೆಗೆ ಅನುಮತಿ ನೀಡಲಾಗುವುದು. ನಂತರ ಪಾಲಿಕೆಯ ಎಂಜಿನಿಯರ್‌ ಗಳು ಪರಿಶೀಲನೆ ನಡೆಸುತ್ತಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಮೊದಲು ಬಿಬಿಎಂಪಿಯ 2 ವಲಯಗಳಲ್ಲಿ ಪ್ರಾಯೋಗಿಕವಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಯಶಸ್ವಿಯಾಗಿ ಜಾರಿಯಾದ ಈ ಯೋಜನೆಯ ಸಾಧಕ ಭಾದಕಗಳನ್ನು ಸರಿಪಡಿಸಿ ಪ್ರಸ್ತುತ ಬಿಬಿಎಂಪಿಯ ಎಲ್ಲಾ ವಲಯಗಳಿಗೆ ವಿಸ್ತರಿಸಲಾಗುತ್ತಿದೆ. ಇದರಿಂದ ಜನರು ಪಾಲಿಕೆಗೆ ಅಲೆಯುವುದು ತಪ್ಪುತ್ತದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ಬಿಬಿಎಂಪಿ ವಲಯದಲ್ಲಿ 2,795 ರಸ್ತೆಗುಂಡಿಗಳನ್ನು ಗುರುತಿಸಲಾಗಿದೆ. ಎಲ್ಲಾ ರಸ್ತೆ ಗುಂಡಿಗಳನ್ನು ಮುಂದಿನ 15 ದಿನಗಳಲ್ಲಿ ಸಂಪೂರ್ಣವಾಗಿ ಮುಚ್ಚಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. 660 ಕೋಟಿ ರೂ. ವೆಚ್ಚದಲ್ಲಿ ಪ್ರಮುಖ ರಸ್ತೆಗಳನ್ನು ದುರಸ್ತಿ ಕೆಲಸ ಕೈಗೆತ್ತಿಕೊಳ್ಳಲಾಗುವುದು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ರಾಜಕಾಲುವೆಯ 50 ಮೀ. ಸುತ್ತಳತೆಯಲ್ಲಿ ಯಾವುದೇ ನಿರ್ಮಾಣ ಕಾರ್ಯಗಳನ್ನು ಮಾಡುವಂತಿಲ್ಲ ಎಂದು ಎನ್‍ಜಿಟಿಯ ನಿಯಮಗಳು ಸೇರಿದಂತೆ ಒಂದಷ್ಟು ನಿಯಮಗಳಿಗೆ. ಪ್ರಸ್ತುತ 300 ಕಿ.ಮೀ. ಅನ್ನು ಗುರುತಿಸಿ 30 ಅಡಿ ರಸ್ತೆ ನಿರ್ಮಾಣ ಮಾಡಲಾಗುವುದು. ಭೂಮಿ ಬಿಟ್ಟುಕೊಡುವ ಖಾಸಗಿ ಜಮೀನುಗಳ ಮಾಲಕರಿಗೆ ಪರಿಹಾರವಾಗಿ ಟಿಡಿಆರ್ ನೀಡಲಾಗುವುದು. ಅದನ್ನು ಅವರು ಮಾರಾಟ ಮಾಡಿಕೊಳ್ಳಬಹುದು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಹೆಬ್ಬಾಳ, ನಾಗಾವರ, ಬೆಳ್ಳಂದೂರು ಅಕ್ಕಪಕ್ಕ, ಬೆಂಗಳೂರು ದಕ್ಷಿಣ ಭಾಗದಲ್ಲಿ ಒಂದಷ್ಟು ಕಡೆ ಭೂಮಿ ಗುರುತಿಸಲಾಗಿದೆ. ಮೊದಲ ಹಂತದಲ್ಲಿ 100 ಕಿ.ಮೀ. ದೂರ ಕೆಲಸ ಮಾಡಲಾಗುವುದು. ಇದಕ್ಕಾಗಿ 200 ಕೋಟಿ ರೂ. ಅನುದಾನವನ್ನು ಮೀಸಲಿಡಲಾಗಿದೆ. ಈ ವಿಚಾರವನ್ನು ಕ್ಯಾಬಿನೆಟ್, ಸಚಿವರ ಸಭೆ ಹಾಗೂ ವಿರೋಧ ಪಕ್ಷಗಳ ನಾಯಕರೊಟ್ಟಿಗೆ ನಡೆದ ಸಭೆಗಳಲ್ಲೂ ಪ್ರಸ್ತಾಪಿಸಲಾಗಿದೆ. ಈ ರಸ್ತೆಗಳಲ್ಲಿ ಬಸ್ ಓಡಾಟಕ್ಕೆ ಅವಕಾಶವಿಲ್ಲ. ಬದಲಾಗಿ ಶಾಲಾ, ನಾಗರಿಕರ ವಾಹನಗಳ ಓಡಾಟಕ್ಕೆ ಅವಕಾಶ ನೀಡಲಾಗುವುದು ಎಂದು ಡಿ.ಕೆ.ಶಿವಕುಮಾರ್ ಮಾಹಿತಿ ನೀಡಿದರು.

ಮಹಾತ್ಮಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಿ ಕರ್ನಾಟಕದಲ್ಲಿ ಅಧಿಕಾರ ವಹಿಸಿಕೊಂಡು 100 ವರ್ಷಗಳು ಸಂದಿವೆ. ಇದಕ್ಕಾಗಿ ನಗರಾದ್ಯಂತ ಸ್ವಚ್ಚತಾ ಅಭಿಯಾನ ಹಮ್ಮಿಕೊಳ್ಳಲಾಗುವುದು. ಇದೇ ವೇಳೆ ಒಂದು ಸಾವಿರ ಶಾಲಾ ಮಕ್ಕಳು ಆನ್ ಲೈನ್ ಮೂಲಕ ಪತಿಜ್ಞಾವಿಧಿ ತೆಗೆದುಕೊಳ್ಳಲಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು. 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News