ಅ.2ರಂದು ರಾಜ್ಯಾದ್ಯಂತ ಗಾಂಧಿ ನಡಿಗೆ, ಸ್ವಚ್ಛತೆ ಬಗ್ಗೆ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ : ಡಿಸಿಎಂ ಡಿ.ಕೆ.ಶಿವಕುಮಾರ್

Update: 2024-09-28 08:58 GMT

ಬೆಂಗಳೂರು : “ಮಹಾತ್ಮ ಗಾಂಧೀಜಿಯವರು ಬೆಳಗಾವಿಯಲ್ಲಿ ಸ್ವಾತಂತ್ರ್ಯ ಸಂಗ್ರಾಮದ ನೇತೃತ್ವ ವಹಿಸಿಕೊಂಡು 100 ವರ್ಷವಾಗಿರುವ ಹಿನ್ನೆಲೆಯಲ್ಲಿ ಒಂದು ವರ್ಷಗಳ ಕಾಲ ವಿಭಿನ್ನ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಅ.2ರಂದು ರಾಜ್ಯಾದ್ಯಂತ ‘ಗಾಂಧಿ ನಡಿಗೆ’ ಹಾಗೂ ‘ಸ್ವಚ್ಛತೆಯ ಪ್ರತಿಜ್ಞಾ ಸ್ವೀಕಾರ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.

ಶನಿವಾರ ವಿಧಾನನಸೌಧದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, “ಕಾರ್ಯಕ್ರಮದ ಮೊದಲ ಭಾಗವಾಗಿ ಅ.2ರ ಗಾಂಧಿ ಜಯಂತಿಯಂದು 1 ಕಿ.ಮೀ. 'ಗಾಂಧಿ ನಡಿಗೆ' ಮತ್ತು 'ಸ್ವಚ್ಛತಾ ಪ್ರತಿಜ್ಞಾ ಸ್ವೀಕಾರ' ಅಭಿಯಾನ ಹಮ್ಮಿಕೊಳ್ಳಲಾಗಿದೆ. ರಾಜ್ಯಾದ್ಯಂತ ಜಿಲ್ಲಾ, ತಾಲೂಕು ಕೇಂದ್ರ ಹಾಗೂ ಪಾಲಿಕೆ ಮಟ್ಟದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಬೆಂಗಳೂರಿನಲ್ಲಿಯೂ ಬರುವ ಬುಧವಾರ ಬೆಳಗ್ಗೆ 9 ಗಂಟೆಗೆ ಗಾಂಧಿ ಭವನದಿಂದ ವಿಧಾನಸೌಧದ ಗಾಂಧಿ ಪ್ರತಿಮೆವರೆಗೂ ನಡಿಗೆ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಪಕ್ಷಾತೀತವಾಗಿ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗುವುದು” ಎಂದು ತಿಳಿಸಿದರು.

500 ಶಾಲಾ ಮಕ್ಕಳಿಗೆ ಜೂಮ್ ಮೂಲಕ ಪ್ರತಿಜ್ಞಾ ವಿಧಿ :

“ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಇಬ್ಬರ ಜನ್ಮದಿನವೂ ಒಂದೇ ದಿನ ಆಗಿರುವ ಕಾರಣ ಇಬ್ಬರ ಪ್ರತಿಮೆಗೂ ಮಾಲಾರ್ಪಣೆ ಮಾಡಲಾಗುವುದು. ನಂತರ ನಡಿಗೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಹಾಗೂ ಬೆಂಗಳೂರಿನ 500 ಶಾಲಾ, ಕಾಲೇಜು ಮಕ್ಕಳಿಗೆ ಜೂಮ್ ಮೂಲಕ ಪ್ರತಿಜ್ಞಾ ವಿಧಿ ಬೋಧನೆ ಮಾಡಲಾಗುವುದು. ಇದು ಸರಕಾರದ ಕಾರ್ಯಕ್ರಮ, ಗಾಂಧಿ ಅವರ ಆದರ್ಶವನ್ನು ಯುವ ಪೀಳಿಗೆಗೆ ತಲುಪಿಸಲು ಈ ಕಾರ್ಯಕ್ರಮ ರೂಪಿಸಿದೆ” ಎಂದರು.

ಶ್ವೇತ ವಸ್ತ್ರ ಧರಿಸಿ ನಡಿಗೆ :

“ಜಿಲ್ಲಾ ಕೇಂದ್ರದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ತಾಲೂಕು ಮಟ್ಟದಲ್ಲಿ ಸ್ಥಳೀಯ ಶಾಸಕರು ಭಾಗವಹಿಸಲಿದ್ದಾರೆ. ಈ ನಡಿಗೆ ವೇಳೆ ಬಿಳಿ ವಸ್ತ್ರ, ಗಾಂಧಿ ಟೋಪಿ ಧರಿಸಿ ಹೆಜ್ಜೆ ಹಾಕುವಂತೆ ಮನವಿ ಮಾಡಲಾಗುವುದು” ಎಂದು ತಿಳಿಸಿದರು.

“ಗಾಂಧಿ ಜಯಂತಿಯನ್ನು ವಿಶಿಷ್ಟವಾಗಿ ಆಚರಣೆ ಮಾಡುತ್ತಿದ್ದು, ಇಡೀ ವರ್ಷ ಗಾಂಧೀಜಿ ಅವರ ಆಚಾರ ವಿಚಾರವನ್ನು ಯುವ ಪೀಳಿಗೆಗೆ ತಿಳಿಸಲು ಸರಕಾರ ಹಾಗೂ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತ್ಯೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ” ಎಂದು ತಿಳಿಸಿದರು.

ಪ್ರತಿಜ್ಞಾ ವಿಧಿಗಾಗಿ ಆಪ್ ಮೂಲಕ ನೋಂದಣಿ :

“ರಾಜ್ಯದಲ್ಲಿ ಸಾರ್ವಜನಿಕರು ಪ್ರತಿಜ್ಞಾ ವಿಧಿ ತೆಗೆದುಕೊಳ್ಳಲು ಒಂದು ಆಪ್ ಸಿದ್ಧಪಡಿಸಲಾಗಿದ್ದು, ಈಗಾಗಲೇ 35 ಸಾವಿರ ಮಂದಿ ಈ ಆಪ್ ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಪ್ರತಿಜ್ಞಾ ವಿಧಿ ಪಡೆದವರಿಗೆ ಆನ್ ಲೈನ್ ನಲ್ಲೇ ಪ್ರಮಾಣಪತ್ರ ನೀಡಲಾಗುವುದು. ಇದು ಮೊದಲ ಹಂತದ ಕಾರ್ಯಕ್ರಮವಾಗಿದ್ದು, ಇಡೀ ವರ್ಷ ಬೇರೆ ಬೇರೆ ಕಾರ್ಯಕ್ರಮ ಮಾಡಲಾಗುವುದು. ನಂತರ ಪಕ್ಷದ ವತಿಯಿಂದ ನಡೆಯುವ ಕಾರ್ಯಕ್ರಮವನ್ನು ಮಧ್ಯಾಹ್ನ 12 ಗಂಟೆ ನಂತರ ಬೆಂಗಳೂರಿನ ಭಾರತ ಜೋಡೋ ಭವನದಲ್ಲಿ ಮಾಡಲಾಗುವುದು” ಎಂದು ಮಾಹಿತಿ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News