ಮೆಟ್ರೋ ಸುರಂಗ ಮಾರ್ಗ ಕೊರೆಯುವ ಸ್ಥಳಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಭೇಟಿ, ಪರಿಶೀಲನೆ

Update: 2023-07-14 13:38 GMT

ಬೆಂಗಳೂರು: ನಗರದ ಮೆಟ್ರೋ ಸುರಂಗ ಮಾರ್ಗದ ಕಾಮಗಾರಿ ಸ್ಥಳಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಗರದ ಲಕ್ಕಸಂದ್ರ ಸುರಂಗ ಮಾರ್ಗ ಹಾಗೂ ಮಹಾತ್ಮ ಗಾಂಧಿ ರಸ್ತೆಯ ಸುರಂಗ ಸ್ಟೇಷನ್ ಬಳಿ ನಡೆಯುತ್ತಿರುವ ಕಾಮಗಾರಿ ಸ್ಥಳಕ್ಕೆ ಶುಕ್ರವಾರ ತೆರಳಿ ಪರಿಶೀಲನೆ ನಡೆಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಮೆಟ್ರೋ ಸುರಂಗ ಕಾಮಗಾರಿ ಬಹಳ ಉತ್ತಮವಾಗಿ ಸಾಗುತ್ತಿದೆ. ಅಧಿಕಾರಿಗಳು ಎಷ್ಟೇ ಹೇಳಿದರೂ ಕಾಮಗಾರಿಯ ಪ್ರಗತಿಯನ್ನು ನಾನು ಕಣ್ಣಾರೆ ನೋಡಬೇಕು ಎಂದು ಇಲ್ಲಿಗೆ ಭೇಟಿ ನೀಡಿದ್ದೇನೆ. ಅಧಿಕಾರಿಗಳ ಮಾಹಿತಿ ಪ್ರಕಾರ 20.9 ಕಿಮೀ ಸುರಂಗ ಮಾರ್ಗ ಆಗಿದೆ. ಒಟ್ಟು 18 ನಿಲ್ದಾಣಗಳನ್ನು ಮಾಡಲಾಗುತ್ತಿದೆ. ನಾಲ್ಕು ಪ್ಯಾಕೆಜ್ ನಲ್ಲಿ ಈ ಯೋಜನೆ ತೆಗೆದುಕೊಳ್ಳಲಾಗಿದೆ. ಕೆಲವೆಡೆ ಕಾಮಗಾರಿ ಪೂರ್ಣಗೊಂಡಿದ್ದರೆ, ಮತ್ತೆ ಕೆಲವು ಕಡೆಗಳಲ್ಲಿ 70%, 80% ಪೂರ್ಣವಾಗಿದೆ. 2025ರ ಮಾರ್ಚ್ ವೇಳೆಗೆ ಈ ಮೆಟ್ರೋ ಕಾಮಗಾರಿ ಪೂರ್ಣವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ'' ಎಂದರು. 

 

''ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳು, ಗುತ್ತಿಗೆದಾರರು, ಸರಕಾರ ಎಲ್ಲರ ಸಹಕಾರ ಬೇಕು. ಬ್ರ್ಯಾಂಡ್ ಬೆಂಗಳೂರು ನಿರ್ಮಾಣ ಮಾಡಲು ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಆದ್ಯತೆ ನೀಡಿ ಕಾಮಗಾರಿ ತೀವ್ರಗತಿಯಲ್ಲಿ ಸಾಗುತ್ತಿದೆ. ಬೆಂಗಳೂರಿನ ಅಭಿವೃದ್ಧಿಗಾಗಿ ಬಹಳ ದೊಡ್ಡ ಯೋಜನೆಗಳ ಬಗ್ಗೆ ಚರ್ಚೆ ಮಾಡಲಾಗುತ್ತಿದೆ'' ಎಂದು ತಿಳಿಸಿದರು. 

''ಇನ್ನು ಸುರಂಗ ರಸ್ತೆ ನಿರ್ಮಾಣದ ಸಾಧಕ ಬಾಧಕಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದೇವೆ. ಬೇರೆ ರಾಜ್ಯಗಳಲ್ಲಿ ಹೇಗೆ ಮಾಡಲಾಗುತ್ತಿದೆ ಎಂಬುದನ್ನು ನೋಡುತ್ತಿದ್ದೇವೆ. ಈ ವಿಚಾರವಾಗಿ ಸದ್ಯದಲ್ಲೇ ಮಾಹಿತಿ ನೀಡುತ್ತೇನೆ. ಈ ಕಾಮಗಾರಿಗಳು ತಾಂತ್ರಿಕವಾಗಿ ನಡೆಯುತ್ತವೆ. ಇವು ಬಹಳ ಸುರಕ್ಷಿತವಾಗಿ ಮಾಡಬೇಕಾದ ಕೆಲಸ. ಹೀಗಾಗಿ ಇದಕ್ಕೆ ಸಮಯ ತೆಗೆದುಕೊಳ್ಳುತ್ತದೆ. ಯಾರು ಟೀಕೆ ಮಾಡುತ್ತಾರೆ ಎಂಬುದು ಮುಖ್ಯ ಅಲ್ಲ." ಎಂದು ಹೇಳಿದರು. 




 


Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News