"ಲೂಟಿಕೋರರ ಪಿತಾಮಹ ನೀನು": ಡಾ.ಅಶ್ವತ್ಥ ನಾರಾಯಣ ವಿರುದ್ಧ ಡಿ.ಕೆ.ಶಿವಕುಮಾರ್ ಟೀಕೆ

Update: 2024-07-16 14:03 GMT

ಬೆಂಗಳೂರು: ಬಿಜೆಪಿಯ ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಲೂಟಿಕೋರರ ಪಿತಾಮಹ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ ಕೆಲಕಾಲ ಆಡಳಿತ-ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.

ಮಂಗಳವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯ ನಂತರ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ವಾಲ್ಮೀಕಿ ನಿಗಮದ ಹಗರಣದ ಬಗ್ಗೆ ಚರ್ಚೆ ಮೇಲಿನ ಪ್ರಸ್ತಾಪ ಮುಂದುವರೆಸಲು ಮುಂದಾದರು. ಈ ವೇಳೆ ಮಾಜಿ ಸಚಿವ ಅಶ್ವತ್ಥ್ ನಾರಾಯಣ, ವಾಲ್ಮೀಕಿ ನಿಗಮದ ಹಗರಣದಲ್ಲಿ ಹಗಲು ದರೋಡೆ ಮಾಡಿರುವ ಮುಖ್ಯಮಂತ್ರಿ ಗೈರು ಹಾಜರಾಗಿದ್ದಾರೆ. ಅವರು ಸದನಕ್ಕೆ ಹಾಜರಾಗಬೇಕು ಎಂದು ಪಟ್ಟು ಹಿಡಿದರು.

ಈ ವೇಳೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಈ ಹಿಂದೆ ವಿರೋಧ ಪಕ್ಷದ ನಾಯಕರಾಗಿದ್ದಾಗ ವಿಷಯದ ಚರ್ಚೆಗೆ ಪ್ರಸ್ತಾಪ ಮಾಡಿದಾಗೆಲ್ಲ ಬಿಜೆಪಿಯ ಮುಖ್ಯಮಂತ್ರಿ ಸದನದಲ್ಲಿ ಹಾಜರಿರುತ್ತಿದ್ದರೇ? ಅವರು ಗೈರಾಗಿರಲಿಲ್ಲವೇ? ಬಿಜೆಪಿ ಸರಕಾರದ ಅವಧಿಯಲ್ಲಿ ಅಶ್ವತ್ಥ್ ನಾರಾಯಣ ಮಾಡಬಾರದನ್ನು ಮಾಡಿರುವುದಕ್ಕೇ ಜನ ನಮ್ಮನ್ನು ಇಲ್ಲಿ ಕೂರಿಸಿ, ನಿಮ್ಮನ್ನು ಅಲ್ಲಿ ಕೂರಿಸಿ ತೀರ್ಪು ಕೊಟ್ಟಿದ್ದಾರೆ ಎಂದು ಹರಿಹಾಯ್ದರು.

‘ನನ್ನ ಹೆಸರು ಹೇಳಿ ಆಪಾದನೆ ಮಾಡಲಾಗಿದೆ, ಸಾಕ್ಷಿ ನೀಡಬೇಕು’ ಎಂದು ಡಾ.ಅಶ್ವತ್ಥ್ ನಾರಾಯಣ ಹೇಳಿದಾಗ ಮಾಡಬಾರದ್ದು ಮಾಡಿರುವ ನಿಮ್ಮದನ್ನು ತೆಗೆಯುತ್ತೇವೆ, ಮಾತನಾಡುತ್ತೇವೆ ತಡೆಯಿರಿ ಎಂದು ಶಿವಕುಮಾರ್ ಗುಡುಗಿದರು.

ನನ್ನ ವಿರುದ್ದ ಮಾಡಿದ ಆಪಾದನೆ ಹಿಟ್ ಅಂಡ್ ರನ್ ಎಂದು ಅಶ್ವತ್ಥ್ ನಾರಾಯಣ ಗದ್ದಲ ಎಬ್ಬಿಸಿದಾಗ, ರಾಮನಗರದ ಕಸ ಗುಡಿಸುತ್ತೇನೆ ಎಂದು ಹೇಳಿದ ನಿಮಗೆ ವಿಧಾನಸಭೆ ಚುನಾವಣೆಯಲ್ಲಿ ಒಂದೇ ಒಂದು ಸೀಟು ಗೆಲ್ಲಲು ಆಗಲಿಲ್ಲ ಎಂದು ಕುಟುಕಿದರು.

ಅಲ್ಲದೆ, ಇಷ್ಟು ಹೊತ್ತಿನ ತನಕ ಮುಖ್ಯಮಂತ್ರಿಗಳು ಕುಳಿತಿರಲಿಲ್ಲವೇ? ಸದನದಲ್ಲಿ ನಾವೆಲ್ಲಾ ಕುಳಿತಿಲ್ಲವೇ? ಮುಖ್ಯಮಂತ್ರಿಗಳ ಮೇಲೆ ಆರೋಪವಿದೆ ಎಂದು ಹೇಗೆ ಹೇಳುತ್ತಾರೆ ಇವರು? ಎಂದು ಬಿಜೆಪಿ ಶಾಸಕರ ಮೇಲೆ ಶಿವಕುಮಾರ್ ಮುಗಿಬಿದ್ದರು. ಈ ರೀತಿ ಯಾರ ಹೆಸರನ್ನು ಬೇಕಾದರೂ ನಾವು ಬಳಸಿಕೊಳ್ಳಬಹುದೇ" ಎಂದು ಬಿಜೆಪಿ ಶಾಸಕ ಸುನೀಲ್ ಕುಮಾರ್ ಹೇಳಿದಾಗ ಇವರು (ಅಶ್ವತ್ಥ್ ನಾರಾಯಣ) ಮುಖ್ಯಮಂತ್ರಿಗಳ ಹೆಸರನ್ನು ಹೇಗೆ ಬಳಸಿಕೊಂಡರು? ಎಂದು ಕಟುವಾಗಿ ಮರುಪ್ರಶ್ನಿಸಿದರು.

ಶಿವಕುಮಾರ್ ಅವರ ಹೇಳಿಕೆಯನ್ನು ವಿರೋಧಿಸಿ ಬಿಜೆಪಿ ಶಾಸಕರು ಗದ್ದಲ ಮಾಡಿದಾಗ ಕಲಾಪವನ್ನು ಹತ್ತು ನಿಮಿಷಗಳ ಕಾಲ ಮುಂದೂಡಲಾಯಿತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News