ಕೊಲೆ ಬೆದರಿಕೆ ಆರೋಪ: ವೈದ್ಯಾಧಿಕಾರಿ ಅಮಾನತು
ಬೆಂಗಳೂರು, ಜು. 8: ‘ಆಯುಷ್ ಇಖೆಯ ಮುಖ್ಯ ಆಡಳಿತಾಧಿಕಾರಿಗೆ ಕೊಲೆ ಬೆದರಿಕೆ ಹಾಕಿದ್ದಲ್ಲದೆ, ಅವರ ಸಾರ್ವಜನಿಕ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಜಯಚಾಮರಾಜೇಂದ್ರ ಆಯುರ್ವೇದ ಮತ್ತು ಯುನಾನಿ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ.ವೆಂಕಟರಾಮಯ್ಯ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸರಕಾರಿ ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಶನಿವಾರ ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಶೈಲಾ ಆರ್.ಗೊರವರ ಆದೇಶ ಹೊರಡಿಸಿದ್ದು, 2023ರ ಫೆ.6ರಂದು ಆಯುಷ್ ಇಲಾಖೆ ಮುಖ್ಯ ಆಡಳಿತಾಧಿಕಾರಿ ಎಸ್.ಶೈಲಜಾ ಅವರು ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಡಾ. ವೆಂಕಟರಾಮಯ್ಯ ಕೊಲೆ ಬೆದರಿಕೆ ಹಾಕಿದ್ದರು.
ಈ ಪ್ರಕರಣ ಸಂಬಂಧ ಶೈಲಜಾ ಅವರು ಫೆ.7ರಂದು ಅವರ ವಿರುದ್ಧ ಇಲಾಖೆ ಆಯುಕ್ತರಿಗೆ ದೂರು ಸಲ್ಲಿಸಿದ್ದರು. ಆ ದೂರನ್ನು ಆಧರಿಸಿ ದಾಖಲೆಗಳನ್ನು ಪರಿಶೀಲಿಸಿದ ಆಯುಕ್ತರು, ಡಾ.ವೆಂಕಟರಾಮಯ್ಯ ಅವರು ಸರಕಾರಿ ನೌಕರರಿಗೆ ಸಲ್ಲದ ರೀತಿಯಲ್ಲಿ ವರ್ತಿಸಿ, ನಾಗರಿಕ ಸೇವಾ (ನಡತೆ)ನಿಯಮ ಉಲ್ಲಂಘಿಸಿರುವುದು ಕಂಡು ಬಂದಿರುವುದಾಗಿ ವರದಿ ಸಲ್ಲಿಸಿದ್ದರು.
ಆ ಹಿನ್ನೆಲೆಯಲ್ಲಿ ಡಾ.ವೆಂಕಟರಾಮಯ್ಯ ವಿರುದ್ಧ ಇಲಾಖಾ ವಿಚಾರಣೆ ಬಾಕಿ ಇರಿಸಿ, ಸೇವೆಯಿಂದ ಅಮಾನತುಗೊಳಿಸಲಾಗಿದೆ. ಅಮಾನತು ಅವಧಿಯಲ್ಲಿ ನಿಯಮಾನುಸಾರ ಜೀವನಾಧಾರ ಭತ್ಯೆ ಪಡೆಯಲು ಅರ್ಹರಾಗಿರುತ್ತಾರೆ. ಈ ಅವಧಿಯಲ್ಲಿ ಸಕ್ಷಮ ಅಧಿಕಾರಿಯ ಅನುಮತಿ ಪಡೆಯದೇ ಕೇಂದ್ರ ಸ್ಥಾನವನ್ನು ಯಾವುದೇ ಕಾರಣಕ್ಕೂ ಬಿಡಬಾರದು ಎಂದು ಆದೇಶದಲ್ಲಿ ನಿರ್ದೇಶನ ನೀಡಲಾಗಿದೆ.