ಕೃಷ್ಣಾ ಮೇಲ್ದಂಡೆ ವ್ಯಾಪ್ತಿಯಲ್ಲಿ ಮೆಣಸಿನಕಾಯಿ ಬೆಳೆ ಉಳಿಸಲು 2.75 ಟಿಎಂಸಿ ನೀರು ಹರಿಸಲು ತೀರ್ಮಾನ: ಡಿಸಿಎಂ ಡಿ.ಕೆ. ಶಿವಕುಮಾರ್

Update: 2024-01-07 09:42 GMT

ಬೆಂಗಳೂರು: "ಕೃಷ್ಣಾ ಮೇಲ್ದಂಡೆ ಅಚ್ಚುಕಟ್ಟು ಪ್ರದೇಶದ ಮೆಣಸಿನಕಾಯಿ ಬೆಳೆ ಉಳಿಸಲು ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯದಿಂದ 2.75 ಟಿಎಂಸಿ ನೀರನ್ನು ಹರಿಸಲು ತೀರ್ಮಾನಿಸಲಾಗಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಸದಾಶಿವನಗರ ನಿವಾಸದಲ್ಲಿ ಭಾನುವಾರ ಮಾಧ್ಯಮಗೋಷ್ಠಿಯಲ್ಲಿ ಶಿವಕುಮಾರ್ ಅವರು ಈ ವಿಚಾರ ತಿಳಿಸಿದರು.

"ನಿನ್ನೆ ರಾತ್ರಿ ಕಲಬುರ್ಗಿ, ರಾಯಚೂರು, ಬಾಗಲಕೋಟೆ, ಯಾದಗಿರಿ ಭಾಗದ ಜಿಲ್ಲಾ ಮಂತ್ರಿಗಳು, ಎಲ್ಲ ಪಕ್ಷದ ಶಾಸಕರು, ರೈತ ಮುಖಂಡರ ಜೊತೆ ಸಭೆ ಮಾಡಲಾಯಿತು. ಈ ಸಭೆಯಲ್ಲಿ ಜನಪ್ರತಿನಿಧಿಗಳು ವಾಸ್ತವ ಪರಿಸ್ಥಿತಿ ವಿವರಿಸಿ, ನೀರು ಬಿಡಲು ಒತ್ತಾಯಿಸಿದರು.

ರಾಜ್ಯದ ಇತಿಹಾಸದಲ್ಲೇ ಈ ಬಾರಿ ಅತ್ಯಂತ ದೊಡ್ಡ ಪ್ರಮಾಣದ ಬರಗಾಲ ಎದುರಾಗಿದೆ. ಅತಿ ಹೆಚ್ಚು ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ.

ಬರ ಪರಿಸ್ಥಿತಿಯಲ್ಲಿ ಬೆಳೆ ಹಾಕಬೇಡಿ ಎಂದು ಮನವಿ ಮಾಡಿದ್ದರೂ ಕೆಲವು ರೈತರು ಭತ್ತದ ಬದಲು ಮೆಣಸಿನಕಾಯಿ ಬೆಳೆ ಹಾಕಿಕೊಂಡಿದ್ದಾರೆ. ಈ ಬೆಳೆ ನಾಶವಾದರೆ 2 ಸಾವಿರ ಕೋಟಿ ರೂಪಾಯಿಯಷ್ಟು ನಷ್ಟವಾಗುವ ಸಾಧ್ಯತೆ ಇದೆ ಎಂದರು.

ರೈತರ ರಕ್ಷಣೆ ಉದ್ದೇಶದಿಂದ ಬೆಳೆಗಳಿಗೆ ಅಂತಿಮ ಬಾರಿಗೆ 2.75 ಟಿಎಂಸಿ ನೀರು ಬಿಡಲು ನಿನ್ನೆ ರಾತ್ರಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಪ್ರತಿಭಟನಾ ನಿರತ ರೈತರು, ಮನವಿ ಮಾಡಿರುವ ಶಾಸಕರುಗಳೇ ಮೆಣಸಿನಕಾಯಿ ಬೆಳೆಗಳಿಗೆ ಮಾತ್ರ ಈ ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಈ ಜವಾಬ್ದಾರಿಯನ್ನು ಆ ಭಾಗದ ರೈತರಿಗೆ ವಹಿಸಿ ನೀರು ಬಿಡುತ್ತಿದ್ದೇವೆ ಎಂದು ಹೇಳಿದರು.

ದೇವರು, ಧರ್ಮ ವಿಚಾರದಲ್ಲಿ ರಾಜಕೀಯ ಅಗತ್ಯವಿಲ್ಲ

ರಾಮಮಂದಿರ ಉದ್ಘಾಟನೆಗೆ ತೆರಳುತ್ತೀರಾ ಎಂದು ಕೇಳಿದಾಗ, "ನನಗೆ ಹಾಗೂ ನಮ್ಮ ಮುಖ್ಯಮಂತ್ರಿಗಳಿಗೆ ಆಹ್ವಾನ ಬಂದಿಲ್ಲ. ನಮ್ಮ ಅಧ್ಯಕ್ಷರಿಗೆ ಆಹ್ವಾನ ಬಂದಿದೆ ಎಂದು ಪತ್ರಿಕೆಗಳಲ್ಲಿ ಓದಿದ್ದೇನೆ. ಪಕ್ಷ ಈ ವಿಚಾರದಲ್ಲಿ ತೀರ್ಮಾನ ಮಾಡುತ್ತದೆ. ನಮ್ಮ ಮನೆಯಲ್ಲಿ ಶಿವ, ಹನುಮಂತನ ಫೋಟೋ ಇಟ್ಟು ಪೂಜೆ ಮಾಡುತ್ತೇವೆ. ನಮ್ಮ ಹೃದಯದಲ್ಲಿ ನಮ್ಮ ದೇವರುಗಳನ್ನು ಇಟ್ಟು ಪೂಜಿಸಿಕೊಂಡು ಬಂದಿದ್ದೇವೆ. ಹೀಗಾಗಿ ಧರ್ಮ, ದೇವರ ವಿಚಾರದಲ್ಲಿ ರಾಜಕೀಯ ಮಾಡುವ ಅಗತ್ಯವಿಲ್ಲ. ಆರೆಸ್ಸೆಸ್ ಹಾಗೂ ಬಿಜೆಪಿಯವರು ಮಂತ್ರಾಕ್ಷತೆ ನೀಡುತ್ತಿದ್ದಾರೆ. ಅನ್ನಭಾಗ್ಯ ಅಕ್ಕಿಯಲ್ಲೆ ಮಂತ್ರಾಕ್ಷತೆ ಮಾಡಿ ಹಂಚುತ್ತಿದ್ದಾರೆ. ಅದೇ ನಮಗೆ ಸಂತೋಷ" ಎಂದು ತಿಳಿಸಿದರು.

ಬೊಮ್ಮಾಯಿ ಅವರಿಗೆ ಮರೆವು ಶುರುವಾಗಿದೆ

ಅನ್ನಭಾಗ್ಯ ಯೋಜನೆಯಲ್ಲಿ ರಾಜ್ಯ ಸರ್ಕಾರದ ಕೊಡುಗೆ ಏನಿಲ್ಲ. ಇದು ಮೋದಿ ಸರ್ಕಾರ ನೀಡುತ್ತಿರುವ ಅಕ್ಕಿ ಎಂದು ಮಾಜಿ ಸಿಎಂ ಬೊಮ್ಮಾಯಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, "ಆಹಾರ ಭದ್ರತಾ ಕಾಯ್ದೆ ತಂದಿದ್ದು ಮನಮೋಹನ್ ಸಿಂಗ್ ಹಾಗೂ ಸೋನಿಯಾ ಗಾಂಧಿ ಅವರು. ಈ ವಿಚಾರವನ್ನು ಬೊಮ್ಮಾಯಿ ಅವರು ಮರೆತಿದ್ದಾರೆ. ನಾವು 10 ಕೆ.ಜಿ ಅಕ್ಕಿ ನೀಡಲು ಮುಂದಾಗಿದ್ದೇವೆ. ನನ್ನ ಸ್ನೇಹಿತನಿಗೆ ಮರೆವು ಶುರುವಾಗಿರಬೇಕು" ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್ ಪಕ್ಷಕ್ಕೆ 138 ವರ್ಷಗಳ ಇತಿಹಾಸ, ಕಾಂಗ್ರೆಸ್ ಸರ್ಕಾರಕ್ಕೆ 138 ಶಾಸಕರ ಬಲ

ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರಿಂದಲೇ ಕಾಂಗ್ರೆಸ್ ಅಂತ್ಯ ಎಂಬ ದೇವೇಗೌಡರ ಹೇಳಿಕೆ ಬಗ್ಗೆ ಕೇಳಿದಾಗ, "ಕಾಂಗ್ರೆಸ್ ಪಕ್ಷಕ್ಕೆ 138 ವರ್ಷಗಳ ಇತಿಹಾಸವಿದೆ. ಜನ 135 ಕ್ಷೇತ್ರಗಳಲ್ಲಿ ಗೆಲ್ಲಿಸಿದ್ದಾರೆ. ಅದರ ಜೊತೆಗೆ ಪಕ್ಷೇತರ ಶಾಸಕರು ಸೇರಿ ನಮ್ಮ ಬಲ 138 ಆಗಿದೆ" ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News