ದೇಶ ಗೆಲ್ಲಲು ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ: ಬಡಗಲಪುರ ನಾಗೇಂದ್ರ

Update: 2023-07-14 15:28 GMT

ಮೈಸೂರು,ಜು.14:ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದೇಶ ಗೆಲ್ಲಬೇಕಾದರೆ ಜನರು ಬಿಜೆಪಿಯನ್ನು ಸೋಲಿಸಬೇಕು. ಇದಕ್ಕಾಗಿ ಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ. 

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಜನಾಂದೋಲ ಮಹಾಮೈತ್ರಿ ಆಯೋಜಿಸಿದ್ದ ಸುದ್ಧಿಗೋಷ್ಠಿಯಲ್ಲಿ ಭಾಗವಹಿಸಿ ಮಾನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸೋಲಿಸಿದಂತೆ ಕೇಂದ್ರದಲ್ಲೂ ಸೋಲಿಸಬೇಕು. ಆರೆಸ್ಸೆಸ್ ಕಿತ್ತೊಗೆಯಲು ಸಾಂಸ್ಕೃತಿಕವಾಗಿ ಹೋರಾಟ ಮಾಡಬೇಕಾಗುತ್ತದೆ. ಸಂವಿಧಾನ ವಿರೋಧಿಗಳನ್ನು ಹಾಗೂ ಅದನ್ನು ಬದಲಿಸುತ್ತೇವೆ ಎನ್ನುವ ಮನೋಭಾವದವರನ್ನು ಸೋಲಿಸದಿದ್ದರೆ ಇಡೀ ದೇಶ ಸೋಲಬೇಕಾಗುತ್ತದೆ. ಸರ್ವರ ಹಿತದೃಷ್ಟಿಯಿಂದ ಕೋಮುವಾದಿ ಶಕ್ತಿಗಳನ್ನು ಹಿಮ್ಮೆಟ್ಟಿಸಬೇಕು ಎಂದು ಹೇಳಿದರು.

ರೈತ ವಿರೋಧಿಯಾದ ತಿದ್ದುಪಡಿ ಕಾಯ್ದೆಗಳನ್ನೆಲ್ಲ ಹಿಂಪಡೆದು, ಚುನಾವಣೆಗೆ ಮುನ್ನ ಕೊಟ್ಟ ಮಾತಿನಂತೆ ಕಾಂಗ್ರೆಸ್ ನಡೆದುಕೊಳ್ಳಬೇಕು. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಕೊಡಬೇಕು. ಕೃಷಿ ಬೆಲೆ ಆಯೋಗವನ್ನು ಬಲಪಡಿಸಬೇಕು. ಈ ಹಕ್ಕೊತ್ತಾಯಗಳನ್ನು ಮಂಡಿಸಲು ಜುಲೈ 17ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಲಿದ್ದೇವೆ ಎಂದರು.

ಹೋರಾಟಗಾರ ರಾಘವೇಂದ್ರ ಕುಷ್ಟಗಿ ಮಾತನಾಡಿ, ನಾವು ಸಿದ್ದರಾಮಯ್ಯ ಅವರು ಅನುಸರಿಸುತ್ತಿರುವ ತತ್ವ ಸಿದ್ಧಾಂತದ ಮೇಲೆ ಗೌರವ ಇಟ್ಟುಕೊಂಡವರು. ಅವರು, ಜೆಡಿಎಸ್ ಮತ್ತು ಬಿಜೆಪಿಯವರು ಮಾಡಿದ್ದ ತಿದ್ದುಪಡಿ ಕಾಯ್ದೆಗಳನ್ನು ಆದಷ್ಟು ಬೇಗ ವಾಪಸ್ ಪಡೆಯಬೇಕು. ರೈತ ಸ್ನೇಹಿಯಾದ ಕ್ರಮಗಳನ್ನು ಜರುಗಿಸಬೇಕು ಎಂದು ಒತ್ತಾಯಿಸಿದರು. ಈ ವಿಷಯದಲ್ಲಿ ಸಂಕೋಚ, ಅಂಜಿಕೆ ಏಕೆ ಎಂದು ಕೇಳಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡ ಉಗ್ರ ನರಸಿಂಹೇಗೌಡ, ಜನಾಂದೋಲನ ಮಹಾಮೈತ್ರಿಯ ಅಭಿರುಚಿ ಗಣೇಶ್ ಹಾಗೂ ಪ್ರಸನ್ನ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News