ಕೇಂದ್ರದ ರೈತ ವಿರೋಧಿ ಧೋರಣೆಯನ್ನು ಖಂಡಿಸಿ ಫೆ.26ಕ್ಕೆ ʼದಿಲ್ಲಿ ಚಲೋʼ

Update: 2023-12-24 15:49 GMT

ಸಾಂದರ್ಭಿಕ ಚಿತ್ರ

ಬೆಂಗಳೂರು: ರೈತ ಬೇಡಿಕೆಗಳನ್ನು ಈಡೇರಿಸುವಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ವಿಫಲವಾಗಿದೆ. ಹಾಗಾಗಿ ಕೇಂದ್ರ ಸರಕಾರದ ರೈತ ವಿರೋಧಿ ಧೋರಣೆಯನ್ನು ಖಂಡಿಸಿ ‘ದಿಲ್ಲಿ ಚಲೋ’ ನಡೆಸಲಾಗುವುದು ಎಂದು ಭಾರತೀಯ ಸಂಯುಕ್ತ ಕಿಸಾನ್ ಮೋರ್ಚದ(ರಾಜಕೀಯತರ) ಮುಖಂಡ ಜಗಜಿತ್ ಸಿಂಗ್ ದಲೈವಾಲ ತಿಳಿಸಿದ್ದಾರೆ.

ರವಿವಾರ ಗಾಂಧಿಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದೇಶದ ರೈತರ ಪ್ರಮುಖ ಏಳು ಒತ್ತಾಯಗಳ ಬಗ್ಗೆ ‘ದಿಲ್ಲಿ ಚಲೋ’ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಪೂರ್ವಭಾವಿಯಾಗಿ ರಾಜಕೀಯತರವಾಗಿ ರೈತರಿಗೆ ಜಾಗೃತಿ ಮೂಡಿಸಲು ದೇಶಾದ್ಯಂತ ಕಿಸಾನ್ ಮಹಾ ಪಂಚಾಯತ್ ನಡೆಸಲಾಗುತ್ತಿದೆ. ಈಗಾಗಲೇ ವಿವಿಧ ರಾಜ್ಯಗಳಲ್ಲಿ 6 ಕಿಸಾನ್ ಮಹಾಪಂಚಾಯತ್‍ಗಳನ್ನು ನಡೆಸಲಾಗಿದೆ ಎಂದರು.

ಒಡಿಸ್ಸಾ ರಾಜ್ಯದ ಭುವನೇಶ್ವರದಲ್ಲಿ ಪಂಜಾಬಿನ ಲೂಧಿಯಾನ ಮತ್ತು ಮೊಗಾ, ಕೇರಳದ ಪಾಲಕ್ಕಾಡ್, ತಮಿಳುನಾಡಿನ ಚೆನ್ನೈ, ಕರ್ನಾಟಕದ ಬೆಂಗಳೂರಿನಲ್ಲಿ ನಡೆಸಲಾಗಿದೆ. ದೇಶದ ವಿವಿಧ ಭಾಗಗಳಲ್ಲಿ ನಡೆಸಿದಂತೆ ಮುಂಬರುವ ಒಂದೂವರೆ ತಿಂಗಳಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ಇನ್ನೂ 14 ಕಿಸಾನ್ ಮಹಾ ಪಂಚಾಯತ್ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

‘ದಿಲ್ಲಿ ಚಲೋ’ ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಡಾ. ಸ್ವಾಮಿನಾಥನ್ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ನಿಗದಿಯಾಗಬೇಕು. ಎಂಎಸ್‍ಪಿ ಅನ್ನು ಖಾತರಿಪಡಿಸಲು ಕಾನೂನನ್ನು ಮಾಡಬೇಕು. ದೇಶದ ಎಲ್ಲ ರೈತರನ್ನು ಸಂಪೂರ್ಣ ಕೃಷಿ ಸಾಲದಿಂದ ಋಣಮುಕ್ತರನ್ನಾಗಿಸಬೇಕು ಎನ್ನುವ ಬೇಡಿಕೆಗಳನ್ನು ಇಡುತ್ತಿದ್ದೇವೆ ಎಂದು ಜಗಜಿತ್ ಸಿಂಗ್ ದಲೈವಾಲ ಹೇಳಿದರು.

2013ರಲ್ಲಿ ಭೂಸ್ವಾಧೀನ ಕಾನೂನಿನಲ್ಲಿ ರಾಜ್ಯ ಸರ್ಕಾರಗಳು ಮಾಡಿದ ಬದಲಾವಣೆಗಳನ್ನು ತಕ್ಷಣವೇ ಹಿಂಪಡೆಯಬೇಕು. ರೈತರ ಲಿಖಿತ ಅನುಮತಿ ಪಡೆಯಬೇಕು ಮತ್ತು ಯಾವುದೇ ಭೂಸ್ವಾಧೀನಕ್ಕೆ ಮೊದಲು ಬಡ್ಡಿದರದ ಜೊತೆಗೆ 4 ಪಟ್ಟು ಪರಿಹಾರವನ್ನು ಖಚಿತಪಡಿಸಿಕೊಳ್ಳಲು ಹೊಸ ಕಾನೂನನ್ನು ರಚಿಸಬೇಕು. ಎಲ್ಲ ಕೃಷಿ ಉತ್ಪನ್ನಗಳ ಆಮದು ಸುಂಕವನ್ನು ಹೆಚ್ಚಿಸಿ, ಕೃಷಿ ಉತ್ಪನ್ನಗಳ ಬೆಲೆ ರಕ್ಷಿಸಬೇಕು ಎಂದು ಅವರು ಹೇಳಿದರು.

ಭಾರತ ಸರಕಾರ ಡಬ್ಲ್ಯುಟಿಒದಿಂದ ಹೊರಬಂದು ಎಲ್ಲ ಮುಕ್ತ ವ್ಯಾಪಾರ ಒಪ್ಪಂದಗಳನ್ನು ರದ್ದುಗೊಳಿಸಬೇಕು. ಮುಕ್ತ ವ್ಯಾಪಾರ ಒಪ್ಪಂದ ಮಾತುಕತೆಯನ್ನು ನಿಲ್ಲಿಸಬೇಕು. ವಿದ್ಯುತ್ ಮಂಡಳಿಗಳ ಖಾಸಗೀಕರಣ ಮಾಡಬಾರದು. ಕೃಷಿ ಪಂಪ್ಸೆಟ್‍ಗಳಿಗೆ ಉಚಿತ ವಿದ್ಯುತ್ ನಿಲ್ಲಿಸುವ ಹುನ್ನಾರ ನಿಲ್ಲಬೇಕು ಎಂದು ಒತ್ತಾಯಿಸಿದರು.

ಕೃಷಿಯಲ್ಲಿ ಎಫ್‍ಡಿಐ ಮತ್ತು ಇ-ಕಾಮರ್ಸ್ ಸೇರಿದಂತೆ ಚಿಲ್ಲರೆ ವ್ಯಾಪಾರದ ಇತರ ಎಲ್ಲ ಸ್ವರೂಪಗಳನ್ನು ನಿಷೇಧಿಸಬೇಕು. ಕೃಷಿ ಮತ್ತು ಚಿಲ್ಲರೆ ವ್ಯಾಪಾರದ ಕಾರ್ಪೊರೆಟೀಕರಣವನ್ನು ತಡೆಗಟ್ಟಲು ನೀತಿ ಮತ್ತು ಕಾನೂನು ಜಾರಿ ಮಾಡಬೇಕು. 60 ವರ್ಷ ತುಂಬಿದ ರೈತರಿಗೆ ಪಿಂಚಣಿಯನ್ನು ಮಾಸಿಕ 5 ಸಾವಿರ ನಿಗದಿಪಡಿಸಬೇಕು. ಫಸಲ್ ಭೀಮಾ ಬೆಳವಿಮೆ ಯೋಜನೆ ತಿದ್ದುಪಡಿಯಾಗಬೇಕು. ಎಲ್ಲ ಬೆಳೆಗಳಿಗೂ ಬೆಳೆ ವಿಮೆ ಜಾರಿಯಾಗಬೇಕು ಎಂದು ಮಾಹಿತಿ ಆಗ್ರಹಿಸಿದರು.

ಸುದ್ದಿಗೋಷ್ಟಿಯಲ್ಲಿ ರೈತ ಮುಖಂಡ ಕುರುಬೂರ್ ಶಾಂತಕುಮಾರ್, ಕೆ.ವಿ.ಬಿಜು, ಅಭಿಮನ್ಯು ಕೋಹರ್ ಮತ್ತು ಲಖ್ವಿಂದರ್ ಸಿಂಗ್ ಔಲಾಖ್, ಸಚಿನ್ ಮೊಹಾಪಾತ್ರ, ಅರುಣ್ ಸಿನ್ಹಾ, ರವಿದತ್ ಸಿಂಗ್, ಶಂಕರ್ ದಾರೆಕರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News