ಅಪಾರ್ಟ್‍ಮೆಂಟ್ ಖಾತಾ ಮಾಡಲು ಲಂಚಕ್ಕೆ ಬೇಡಿಕೆ: ಬಿಬಿಎಂಪಿ ಕಂದಾಯ ಅಧಿಕಾರಿ ಸೇರಿ ಇಬ್ಬರು ಲೋಕಾಯುಕ್ತ ಬಲೆಗೆ
ಬೆಂಗಳೂರು, ಆ.4: ಅಪಾರ್ಟ್‍ಮೆಂಟ್‍ಗಳ 79 ಫ್ಲಾಟ್‍ಗಳಿಗೆ ಖಾತಾ ನೀಡಲು ತಲಾ 10 ಸಾವಿರ ಲಂಚ ನಿಗದಿಪಡಿಸಿ ವಸೂಲಿಗೆ ಮುಂದಾಗಿದ್ದ ಬಿಬಿಎಂಪಿಯ ಕಂದಾಯ ಅಧಿಕಾರಿ ಸೇರಿ ಇಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಬಿಬಿಎಂಪಿಯ ಮಹದೇವಪುರ ವಲಯದ ಕಂದಾಯ ಅಧಿಕಾರಿ ನಟರಾಜ್ ಹಾಗೂ ಖಾಸಗಿ ವ್ಯಕ್ತಿ ಪವನ್ ಎಂಬುವರನ್ನು ಲಂಚ ಸ್ವೀಕರ ಆರೋಪದಡಿ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೊಡಿಗೇಹಳ್ಳಿ ವ್ಯಾಪ್ತಿಯ ಖಾಸಗಿ ಅಪಾರ್ಟ್‍ಮೆಂಟ್ ಗಳಲ್ಲಿ 79 ಫ್ಲಾಟ್‍ಗಳಿಗೆ ಖಾತಾ ನೀಡಲು ತಲಾ 10 ಸಾವಿರ ಲಂಚ ನೀಡುವಂತೆ ಆರೋಪಿ ಕಂದಾಯ ಅಧಿಕಾರಿ ಸೇರಿ ಇಬ್ಬರು ಬೇಡಿಕೆಯಿಟ್ಟಿದ್ದರು.ಈ ಸಂಬಂಧ ದಾಖಲಾದ ದೂರಿನ್ವಯ ಶುಕ್ರವಾರ ಲೋಕಾಯುಕ್ತ ಡಿಎಸ್ಪಿ ಬಸವರಾಜ ಮಗದುಮ್, ಇನ್ಸ್‍ಪೆಕ್ಟರ್ ಮಂಜುನಾಥ ಹೂಗಾರ ನೇತೃತ್ವದ ತಂಡವೂ ಕಾರ್ಯಾಚರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಇನ್ನೂ, ಮಹದೇವಪುರ ಬಿಬಿಎಂಪಿ ಕಚೇರಿಯಲ್ಲಿ ಮುಂಗಡವಾಗಿ ಲಂಚದ ಮೊತ್ತ 5 ಲಕ್ಷ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದಾರೆ. ವಿಚಾರಣೆಯಲ್ಲಿ ಪ್ರತಿ ಖಾತೆಗೆ 10 ಸಾವಿರದಂತೆ ಒಟ್ಟು 7.9ಲಕ್ಷ ರೂ., ನೀಡುವಂತೆ ಬೇಡಿಕೆಯಿಟ್ಟಿದ್ದರು ಎನ್ನುವ ಮಾಹಿತಿ ಗೊತ್ತಾಗಿದೆ ಎಂದು ಲೋಕಾಯುಕ್ತ ಪೊಲೀಸರು ಹೇಳಿದ್ದಾರೆ.