ನದೀಮ್ ಖಾನ್ ವಿರುದ್ಧದ ದುರುದ್ದೇಶದಪೂರಿತ ಎಫ್‍ಐಆರ್ ರದ್ದುಗೊಳಿಸಲು ಒತ್ತಾಯ
ಬೆಂಗಳೂರು: ‘ಮಾನವ ಹಕ್ಕುಗಳ ಹೋರಾಟಗಾರ ನದೀಮ್ ಖಾನ್ ವಿರುದ್ಧ ದಿಲ್ಲಿ ಪೊಲೀಸರು ದಾಖಲಿಸಿರುವ ದುರುದ್ದೇಶದಪೂರಿತ ಎಫ್‍ಐಆರ್ ಅನ್ನು ಕೂಡಲೇ ರದ್ದುಪಡಿಸಬೇಕು’ ಎಂದು ಬಹುತ್ವ ಕರ್ನಾಟಕ, ತಮಟೆ, ಪಿಯುಸಿಎಲ್ ಕರ್ನಾಟಕ, ಕರ್ನಾಟಕ ಜನಶಕ್ತಿ, ಜಾಗೃತ ಕರ್ನಾಟಕ ಸೇರಿ ವಿವಿಧ ಪ್ರಗತಿಪರ ಸಂಘಟನೆಗಳು ಒತ್ತಾಯಿಸಿವೆ.
ರವಿವಾರದಂದು ಸಂಘಟನೆಗಳು ಜಂಟಿ ಪ್ರಕಟನೆಯನ್ನು ಹೊರಡಿಸಿದ್ದು, ‘ಕರ್ನಾಟಕ ಸರಕಾರವು ಕಾನೂಬಾಹಿರ ಕಿರುಕುಳ ಹಾಗೂ ಬೆದರಿಕೆ ಹಾಕುತ್ತಿರುವ ದಿಲ್ಲಿ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು. ಒಕ್ಕೂಟ ಸರಕಾರವು, ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಲು ಕೆಲಸ ಮಾಡುತ್ತಿರುವ ಮಾನವ ಹಕ್ಕುಗಳ ಹೋರಾಟಗಾರರ ಮೇಲೆ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು’ ಎಂದು ಆಗ್ರಹಿಸಿವೆ.
‘ಟ್ವಿಟರ್(ಎಕ್ಸ್)ನಲ್ಲಿ ಕೆಲವು ಸಾಮಾಜಿಕ ಮಾಧ್ಯಮ ಖಾತೆಗಳ ಹೊಂದಿದ್ದರು’ ಎಂಬ ಪ್ರೇರಣೆಯಿಂದ ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (ಎಪಿಸಿಆರ್)ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನದೀಮ್ ಖಾನ್ ಅವರನ್ನು ದಿಲ್ಲಿ ಪೊಲೀಸರು ಉದ್ದೇಶ ಪೂರ್ವಕವಾಗಿ ಕಿರುಕುಳ ನೀಡಲಾಗುತ್ತಿರುವ ಮತ್ತು ದಾಳಿ ನಡೆಸಲಾಗುತ್ತಿರುವ ರೀತಿಯನ್ನು ನೋಡಿ ಆಘಾತ ಉಂಟಾಗಿದೆ.
ರವಿವಾರದಂದು ದಿಲ್ಲಿಯ ಶಾಹೀನ್ ಬಾಗ್ ಪೊಲೀಸ್ ಠಾಣೆಯ ಎಸ್‍ಎಚ್‍ಓ ಸೇರಿದಂತೆ ನಾಲ್ವರು ಪೊಲೀಸ್ ಸಿಬ್ಬಂದಿ, ನದೀಮ್ ಖಾನ್ ತಂಗಿದ್ದ ಬೆಂಗಳೂರಿನ ಖಾಸಗಿ ನಿವಾಸಕ್ಕೆ ಬಂದಿದ್ದರು. ಯಾವುದೇ ವಾರಂಟ್ ಅಥವಾ ನೋಟಿಸ್ ಇಲ್ಲದೆ ಅವರನ್ನು ಬಂಧಿಸಲು ಪ್ರಯತ್ನಿಸಿದರು ಎಂದು ಸಂಘಟನೆಗಳು ಆರೋಪಿಸಿವೆ.
ದಿಲ್ಲಿ ಪೊಲೀಸರು ನಗರದಲ್ಲಿರು ನದೀಮ್ ಅವರ ಸಹೋದರನ ನಿವಾಸಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದಾರೆ. ದಿಲ್ಲಿಯ ಶಾಹೀನ್ ಬಾಗ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್‍ಐಆರ್ ತನಿಖೆಗಾಗಿ ಬರುವಂತೆ ನದೀಮ್ ಅವರನ್ನು ಒತ್ತಾಯಿಸಲಾಗಿದೆ. ಆದರೆ, ನೋಟಿಸ್ ನೀಡದೆ ಅಥವಾ ಬಂಧನ ವಾರೆಂಟ್ ಇಲ್ಲದೆ, ತಕ್ಷಣವೇ ದಿಲ್ಲಿಗೆ ಬರುವಂತೆ ತಿಳಿಸಿದ್ದಾರೆ. ಅಲ್ಲದೆ ಅವರ ಕುಟುಂಬದ ಸದಸ್ಯರನ್ನು ಅಪರಾಧಿಗಳು ಎಂಬಂತೆ ಬಿಂಬಿಸಿದ್ದಾರೆ ಎಂದು ತಿಳಿಸಿವೆ.
ರಾಷ್ಟ್ರೀಯ ಮಟ್ಟದ ಮಾನವ ಹಕ್ಕುಗಳ ಸಂಘಟನೆಯಾದ ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್‍ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ನದೀಮ್ ಖಾನ್ ವಿರುದ್ಧ ದಿಲ್ಲಿ ಪೊಲೀಸ್‍ರ ವ್ಯವಸ್ಥಿತ ದಬ್ಬಾಳಿಕೆ ನಿಲ್ಲಬೇಕು. ಅವರಿಗೆ ಆಗಿರುವ ಹಿಂಸೆಗೆ ಅವರಿಗೆ ಪರಿಹಾರ ನೀಡಬೇಕು ಎಂದು ಸಂಘಟನೆಗಳು ಆಗ್ರಹಿಸಿವೆ.
ನದೀಮ್ ಖಾನ್ ಹಾಗೂ ಅವರ ಕುಟುಂಬದ ಮೇಲೆ ಮಾಡಿದ ದಬ್ಬಾಳಿಕೆ ಮಾಡಿ, ಅವರಿಗೆ ಹಾಕಿದ ಬೆದರಿಕೆ ಹಾಗು ಅವರ ಮನೆಯೊಳಗೇ ಅಕ್ರಮವಾಗಿ ನುಗಿದ್ದಕ್ಕೆ ದಿಲ್ಲಿಯ ಶಾಹಿನ್ ಭಾಗ್ ಪೊಲೀಸ್ ಠಾಣೆ ಪೊಲೀಸ್ ಸಿಬ್ಬಂದಿ ವಿರುದ್ಧ ಕರ್ನಾಟಕ ಪೊಲೀಸ್ ಎಫ್‍ಐಆರ್ ದಾಖಲಿಸಬೇಕು. ರಾಜ್ಯ ಸರಕಾರ ನದೀಮ್ ಖಾನ್ ಕುಟುಂಬ ಸದಸ್ಯರು ನೀಡಿದ ದೂರಿನ ಆಧಾರದ ಮೇಲೆ ದಿಲ್ಲಿ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆಗಳು ಮನವಿ ಮಾಡಿವೆ.