ಅರ್ಹ ಉದ್ಯೋಗಾಕಾಂಕ್ಷಿಗೆ ಅವಕಾಶ ನಿರಾಕರಿಸುವುದು ಕಲ್ಯಾಣ ರಾಜ್ಯದ ಲಕ್ಷಣವಲ್ಲ: ಹೈಕೋರ್ಟ್

Update: 2023-11-15 13:54 GMT

ಬೆಂಗಳೂರು, ನ.15: ಅರ್ಹ ಉದ್ಯೋಗ ಆಕಾಂಕ್ಷಿಗೆ ಅವಕಾಶವನ್ನು ನಿರಾಕರಿಸುವುದು ಕಲ್ಯಾಣ ರಾಜ್ಯದ ಲಕ್ಷಣವಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಅರ್ಜಿದಾರರ ಮೂಲ ಜಾತಿ ಪ್ರಮಾಣ ಪತ್ರ/ಸಾಮಾಜಿಕ ಸ್ಥಿತಿ ಸರ್ಟಿಫಿಕೇಟ್ ಪಡೆದು ಮೀಸಲು ವಿಭಾಗದಲ್ಲಿ ಉದ್ಯೋಗ ಕಲ್ಪಿಸುವಂತೆ ಕರ್ನಾಟಕ ಹಾಲು ಮಹಾ ಮಂಡಳಿ(ಕೆಎಂಎಫ್)ಗೆ ನಿರ್ದೇಶನ ನೀಡಿದೆ.

ಜಾತಿ ಪ್ರಮಾಣ ಪತ್ರ ಅಸ್ಪಷ್ಟವಾಗಿದೆ ಎಂಬ ಕಾರಣವನ್ನು ನೀಡಿ ತನ್ನನ್ನು ಸಾಮಾನ್ಯ ವರ್ಗದಲ್ಲಿ ನೇಮಕ ಮಾಡಿಕೊಂಡಿದ್ದ ಕರ್ನಾಟಕ ಹಾಲು ಉತ್ಪಾದಕರ ಸಹಕಾರ ಒಕ್ಕೂಟ ಸಂಸ್ಥೆ ಕ್ರಮ ಪ್ರಶ್ನಿಸಿ ಬೆಂಗಳೂರಿನ ನಿವಾಸಿ ಪಿ.ಆರ್.ದೇವರಾಜು ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ವಿಭಾಗೀಯ ನ್ಯಾಯಪೀಠವು ಪುರಸ್ಕರಿಸಿದೆ.

ಅಲ್ಲದೆ, ಅರ್ಜಿದಾರರಾದ ದೇವರಾಜು ಅವರಿಗೆ ಲೆಕ್ಕ ಸಹಾಯಕ ಗ್ರೇಡ್ 1 ಹುದ್ದೆಗೆ ನೇಮಕ ಮಾಡಿಕೊಳ್ಳಬೇಕು ಎಂದು ನ್ಯಾಯಾಲಯವು ಪ್ರತಿವಾದಿ ಹಾಲು ಉತ್ಪಾದಕರ ಸಹಕಾರ ಒಕ್ಕೂಟ ಸಂಸ್ಥೆಗೆ ನಿರ್ದೇಶನ ನೀಡಿದೆ.

ಅರ್ಜಿದಾರರನ್ನು ಸಾಮಾನ್ಯ ವರ್ಗದಲ್ಲಿ ನೇಮಕ ಮಾಡಿಕೊಂಡಿರುವ ಪ್ರತಿವಾದಿ ಸಂಸ್ಥೆಯು ತಪ್ಪನ್ನು ಎಸಗಿದೆ. ಪ್ರಮಾದ ಸರಿಪಡಿಸಿ, ನೈಸರ್ಗಿಕ ನ್ಯಾಯ ಪಾಲಿಸಬಹುದಿತ್ತು. ಆ ಕ್ರಮಕ್ಕೆ ಮುಂದಾಗದಿರುವುದನ್ನು ಒಪ್ಪಲಾಗದು. ಈ ಬೆಳವಣಿಗೆ ಅರ್ಜಿದಾರರ ಪರ ವಕೀಲರು ವಾದಿಸಿರುವಂತೆ ಅನ್ಯಾಯದ ಪರಮಾವಧಿ ಎಂದು ಪೀಠ ತಿಳಿಸಿದೆ.

ಜಾತಿ ಪ್ರಮಾಣ ಪತ್ರ ನಕಲಿ ಇದ್ದಲ್ಲಿ ಸ್ವೀಕಾರಾರ್ಹವಲ್ಲ ಎಂಬುದಾಗಿ ಪ್ರತಿವಾದಿ ಸಂಸ್ಥೆ ವಾದಿಸುತ್ತಿಲ್ಲ. ಆದರೆ, ವೆಬ್‍ಸೈಟ್‍ಗೆ ಅಪ್ಲೋಡ್ ಮಾಡುವ ಸಂದರ್ಭದಲ್ಲಿ ಸ್ಪಷ್ಟವಾಗಿಲ್ಲ ಎಂಬುದಾಗಿದೆ. ಮೇಲ್ಮನವಿದಾರರಿಗೆ ಸ್ಪಷ್ಟವಾದ ಜಾತಿ ಪ್ರಮಾಣ ಪತ್ರ ಸಲ್ಲಿಸಲು ಸೂಚನೆ ನೀಡಿದ್ದರೆ ಸ್ವರ್ಗವೇನು ಬೀಳುತ್ತಿರಲಿಲ್ಲ. ನೇಮಕಾತಿ ಅಧಿಸೂಚನೆಯಲ್ಲಿ ಸಂವಿಧಾನದ 14ನೆ ವಿಧಿಯ ಭಾಗವಾಗಿ ನೈಸರ್ಗಿಕ ನ್ಯಾಯ ತತ್ವ ಹೊರತುಪಡಿಸಿ ಅರ್ಥೈಸುವುದಕ್ಕೆ ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ನೇಮಕಾತಿ ವಿಭಾಗವೂ 12ನೆ ವಿಧಿ ಅಡಿಯಲ್ಲಿ ಸ್ಥಾಪನೆಯಾಗಿರುವ ಸರಕಾರದ ಸಂಸ್ಥೆಯಾಗಿದೆ. ಇದರಿಂದ ಸಮಸ್ಯೆಗೆ ಎದುರಾದವರು ಸಂವಿಧಾನದ 16ನೆ ವಿಧಿ ಅಡಿಯಲ್ಲಿ ಹೋರಾಟ ನಡೆಸುವುದು ಮೂಲಭೂತ ಹಕ್ಕಾಗಿದೆ. ಸಣ್ಣ ಪ್ರಮಾದಗಳನ್ನು ಪ್ರತಿವಾದಿ ಸಂಸ್ಥೆ ಸುಲಭವಾಗಿ ಸರಿಪಡಿಸಬಹುದು. ಬದಲಿಗೆ ಸರಿಪಡಿಸುವಲ್ಲಿ ಆಗುವ ತೊಂದರೆಯನ್ನು ಮುಂದಿಟ್ಟು ವಾದ ಮಂಡಿಸುವುದಕ್ಕೆ ಅವಕಾಶ ನೀಡಲಾಗದು ಎಂದು ಪೀಠ ಹೇಳಿದೆ.

ಪ್ರಕರಣವೇನು?: 2022ರ ಅ.20ರಂದು ಲೆಕ್ಕ ಸಹಾಯಕರ ನೇಮಕಕ್ಕೆ ಕೆಎಂಎಫ್ ಅಧಿಸೂಚನೆ ಹೊರಡಿಸಿತ್ತು. ಅರ್ಜಿದಾರರು ದಾಖಲೆಗಳನ್ನು ಆನ್‍ಲೈನ್ ಮೂಲಕ ಅಪೆÇ್ಲೀಡ್ ಮಾಡಿದ ಬಳಿಕ ಪರೀಕ್ಷೆಗೆ ಹಾಜರಾಗಿದ್ದರು. ಆದರೆ, ಅವರು ಅಪ್ಲೋಡ್ ಮಾಡಿದ ಜಾತಿ ಪ್ರಮಾಣ ಪತ್ರ ಅಸ್ಪಷ್ಟವಾಗಿತ್ತು. ಪರಿಣಾಮ ಅರ್ಜಿದಾರರನ್ನು ಸಾಮಾನ್ಯ ಅಭ್ಯರ್ಥಿ ಎಂದು ಪರಿಗಣಿಸಲಾಗಿತ್ತು. ಇದರ ವಿರುದ್ಧ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ ಅರ್ಜಿ ವಜಾಗೊಳಿಸಿ ಆದೇಶಿಸಿತ್ತು. ಏಕ ಸದಸ್ಯ ಪೀಠದ ಕ್ರಮ ಪ್ರಶ್ನಿಸಿ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಅರ್ಜಿ ಸಲ್ಲಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News