‘ನೈಸ್’ ಯೋಜನೆಗೆ ಸಹಿ ಹಾಕಿದ್ದೇ ದೇವೇಗೌಡರು; ನಾವು ಯಾವುದೇ ಹಗರಣ ಮಾಡಿಲ್ಲ: ಡಿ.ಕೆ.ಶಿವಕುಮಾರ್
ಬೆಂಗಳೂರು, ಜು. 21: ‘ನೈಸ್ ಯೋಜನೆಗೆ ಸಹಿ ಹಾಕಿದ್ದು ಆಗಿನ ಸಿಎಂ ಆಗಿದ್ದ ಎಚ್.ಡಿ. ದೇವೇಗೌಡ. ಅವರೇ ಈ ಯೋಜನೆ ತಂದವರು. ಈ ರಸ್ತೆಯಲ್ಲಿ ಅಕ್ರಮವಾಗಿದ್ದರೆ ಸ್ವತಃ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿದ್ದಾಗ ತನಿಖೆ ಮಾಡಿಸಬಹುದಿತ್ತು. ನಾವು ಯಾವುದೇ ಹಗರಣ ಮಾಡಿಲ್ಲ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ನೈಸ್ ರಸ್ತೆ ವಿಚಾರವನ್ನು ಸಕಾರಾತ್ಮಕವಾಗಿ ಪರಿಗಣಿಸುತ್ತೇವೆ. ಏನಾದರೂ ತಪ್ಪು ನಡೆದಿದ್ದರೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಅನಗತ್ಯವಾಗಿ ನಾವು ದ್ವೇಷದ ರಾಜಕಾರಣ ಮಾಡುವುದಿಲ್ಲ. ಅಧಿಕಾರ ಇದ್ದಾಗ ಏನೂ ಮಾಡದೇ ಈಗ ಅಧಿಕಾರ ಹೋದ ನಂತರ ಮಾತನಾಡಿದರೆ ಏನು ಪ್ರಯೋಜನ?’ ಎಂದು ಪ್ರಶ್ನಿಸಿದರು.
‘ನಮಗೆ ರಾಜ್ಯ ಹಾಗೂ ಜನರ ಅಬಿವೃದ್ಧಿ ಮುಖ್ಯ. ಅವರು ನನ್ನ ಹೆಸರು ಹೇಳಿಕೊಳ್ಳಲಿ. ಯಾವ ಹಿನ್ನೆಲೆಯಲ್ಲಿ ಯಾರು ನನ್ನ ಬಗ್ಗೆ ಏನು ಹೇಳುತ್ತಾರೆ ಎಂಬುದು ನನಗೆ ಗೊತ್ತಿದೆ. ಕಾನೂನು ವಿರುದ್ಧವಾಗಿ ನಡೆದುಕೊಂಡಿದ್ದರೆ ಕಾನೂನು ಪ್ರಕಾರ ಸದನ ಹಾಗೂ ಕೋರ್ಟ್‍ಗಳಲ್ಲಿ ಹೋರಾಟ ಮಾಡಲಿ’ ಎಂದು ಡಿ.ಕೆ.ಶಿವಕುಮಾರ್ ಸಲಹೆ ನೀಡಿದರು.
ಬಿಜೆಪಿಗೆ ಧೈರ್ಯವಿಲ್ಲ: ‘ಬಿಜೆಪಿಗೆ ಸದನವನ್ನು ಎದುರಿಸುವ ಧೈರ್ಯವಿರಲಿಲ್ಲ. ಧೈರ್ಯ ಇದ್ದಿದ್ದರೆ ಸದನ ಕಲಾಪದ ಚರ್ಚೆಯಲ್ಲಿ ಭಾಗವಹಿಸುತ್ತಿದ್ದರು. ಸರಕಾರ ಗ್ಯಾರಂಟಿ ಯೋಜನೆ ಜಾರಿ ಮಾಡಿರುವುದನ್ನು ಕಂಡು ಬಿಜೆಪಿ ಸದಸ್ಯರು ಆಘಾತಕ್ಕೊಳಗಾಗಿದ್ದಾರೆ. ಹೀಗಾಗಿ ಅನಗತ್ಯ ವಿಚಾರವಾಗಿ ಗದ್ದಲ ಮಾಡಿದ್ದಾರೆ’ ಎಂದು ಶಿವಕುಮಾರ್ ಲೇವಡಿ ಮಾಡಿದರು.
‘ಬಿಜೆಪಿಯವರಿಗೆ ವಿಪಕ್ಷದ ನಾಯಕತ್ವದ ಮಹತ್ವ ಗೊತ್ತಿಲ್ಲ. ಇದು ಸಂವಿಧಾನಿಕ ಹುದ್ದೆ. ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಬಜೆಟ್ ಅಧಿವೇಶನ ಹಾಗೂ ರಾಜ್ಯಪಾಲರ ಭಾಷಣ ವಿಪಕ್ಷದ ನಾಯಕರ ಅನುಪಸ್ಥಿತಿಯಲ್ಲಿ ನಡೆದಿದೆ. ರಾಜಕೀಯವಾಗಿ ತಮ್ಮ ಅಸ್ತಿತ್ವ ತೋರಿಸಲು ಧರಣಿ ಮಾಡುತ್ತಿದ್ದಾರೆ’ ಎಂದು ಅವರು ಟೀಕಿಸಿದರು.
‘ಕುಮಾರಸ್ವಾಮಿ ಹಾಗೂ ಬೊಮ್ಮಾಯಿ ಅವರ ಜಂಟಿ ಸುದ್ದಿಗೋಷ್ಠಿ ಹಾಗೂ ಆ ಬಗ್ಗೆ ಅವರದೇ ಪಕ್ಷದ ನಾಯಕರ ಅಸಮಾಧಾನ ಅದು ಅವರಿಗೆ ಬಿಟ್ಟ ವಿಚಾರ. ಆ ಬಗ್ಗೆ ನಾವು ಮಾತನಾಡುವುದಿಲ್ಲ. ಜಾತ್ಯತೀತತೆ ವಿಚಾರವಾಗಿ ದೇವೇಗೌಡರು ತಮ್ಮ ಪುಸ್ತಕದಲ್ಲಿ ಹೇಳಿಕೊಂಡಿದ್ದಾರೆ. ದೇವೇಗೌಡರೇನು ತಮ್ಮ ಸಿದ್ಧಾಂತ ಬದಲಿಸಿದ್ದಾರಾ? ಪಕ್ಷದ ಸಿದ್ಧಾಂತ, ಮೈತ್ರಿ ವಿಚಾರವಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೇ ಮಾತನಾಡಲಿ’ ಎಂದು ಹೇಳಿದರು.
ಮಳೆ ನಿರೀಕ್ಷೆಯಲ್ಲಿದ್ದೇವೆ: ‘ಕರ್ನಾಟಕದಲ್ಲಿ ಈ ಬಾರಿ ವಾಡಿಕೆ ಪ್ರಮಾಣದ ಮಳೆಯಾಗಿಲ್ಲ. ಆದರೂ ಇರುವ ನೀರಿನಲ್ಲೇ ಹರಿಸುವ ಸಾಧ್ಯತೆ ಬಗ್ಗೆ ಪರಿಶೀಲಿಸಬಹುದು. ಈ ತೀರ್ಮಾನ ಕಾವೇರಿ ಪ್ರಾಧಿಕಾರದ ಬಳಿ ಇದ್ದು, ನಾವು ಅದರ ತೀರ್ಮಾನ ಗೌರವಿಸುತ್ತೇವೆ. ಕಾವೇರಿ ಪ್ರಾಧಿಕಾರದವರು ಕುಡಿಯುವ ನೀರಿನ ಅಗತ್ಯ ಗಮನದಲ್ಲಿಟ್ಟುಕೊಂಡು ನೀರು ಬಿಡಬೇಕಾಗುತ್ತದೆ. ಇಂದು, ನಾಳೆ ಮಳೆ ಬೀಳುವ ನಿರೀಕ್ಷೆ ಇದೆ. ಎರಡು ವರ್ಷಗಳ ಕಾಲ ಉತ್ತಮ ಮಳೆಯಾಗಿತ್ತು’ ಎಂದು ತಿಳಿಸಿದರು.