ರಾಜ್ಯಕ್ಕೆ ನ್ಯಾಯಯುತ ತೆರಿಗೆ ಪಾಲು ಬಂದರೆ ಅಭಿವೃದ್ಧಿ ಸಾಧ್ಯ: ಸಿಎಂ ಸಿದ್ದರಾಮಯ್ಯ

Update: 2024-10-13 15:38 GMT

ಬೆಳಗಾವಿ: ರಾಜ್ಯಕ್ಕೆ ನ್ಯಾಯಯುತವಾಗಿ ಬರಬೇಕಾಗಿದ್ದ ತೆರಿಗೆ ಪಾಲು ನೀಡದೆ, ಕನ್ನಡಿಗರಿಗೆ ದ್ರೋಹ ಎಸಗಲಾಗಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ನಂಬಿರುವ ನಮಗೆ ಅನ್ಯಾಯವಾಗಬಾರದು. ರಾಜ್ಯಕ್ಕೆ ನ್ಯಾಯಯುತ ತೆರಿಗೆ ಪಾಲನ್ನು ಕೇಂದ್ರ ನೀಡಿದರೆ, ರಾಜ್ಯದಲ್ಲಿ ಅಭಿವೃದ್ಧಿಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ರವಿವಾರ ಜಿಲ್ಲೆಯ ಸವದತ್ತಿ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿ ಪ್ರಾಧಿಕಾರದ ಸಭೆಯ ಬಳಿಕ ಮಾತನಾಡಿದ ಅವರು, ‘ತೆರಿಗೆ ವಿಚಾರದಲ್ಲಿ ಕರ್ನಾಟಕ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತದ ಬಿಜೆಪಿಯವರು, ಕೇವಲ ಕೋಮುವಾದಿ ಕ್ಷುಲ್ಲಕ ವಿಚಾರಗಳಿಗೆ ಪ್ರತಿಭಟನೆ ಮಾಡುತ್ತಾರೆ’ ಎಂದು ಟೀಕಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ವಿಜಯೇಂದ್ರ ಮೊದಲು ತಮ್ಮ ತಂದೆ ಯಡಿಯೂರಪ್ಪನವರು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ನಮ್ಮ ಮೇಲೆ ಇಂತಹ ಹೇಳಿಕೆಗಳನ್ನು ನೀಡಲು ಯಾವ ನೈತಿಕತೆ ಇದೆ? ಕಾಂಗ್ರೆಸ್ ಸರಕಾರಕ್ಕೆ ಜನ ನೀಡುತ್ತಿರುವ ಬೆಂಬಲವನ್ನು ಸಹಿಸಲಾಗದೇ ಈ ರೀತಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸೌಕರ್ಯ ಒದಗಿಸಲು ನಿರ್ಧಾರ: ಬಡವರು ಹಾಗೂ ರೈತಾಪಿ ವರ್ಗದವರು ಭೇಟಿ ನೀಡುವ ಸವದತ್ತಿ ಯಲ್ಲಮ್ಮ ದೇವಸ್ಥಾನ ಕ್ಷೇತ್ರದಲ್ಲಿ ಗುಣಮಟ್ಟದ ಮೂಲಸೌಕರ್ಯ ಒದಗಿಸಲು ತೀರ್ಮಾನಿಸಲಾಗಿದೆ. ಕ್ಷೇತ್ರದಲ್ಲಿ 1,087ಎಕರೆ ಪ್ರದೇಶ ಲಭ್ಯವಿದ್ದು, ಮೂಲಸೌಕರ್ಯ ವ್ಯವಸ್ಥೆ ಕಲ್ಪಿಸುವ ಉದ್ದೇಶಕ್ಕೆ ಈ ಪ್ರದೇಶವನ್ನು ಬಳಸಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News