ತ್ಯಾಜ್ಯ ವಿಲೇವಾರಿ ವಾಹನ ಚಾಲಕ, ಸಹಾಯಕ, ಕ್ಲೀನರ್ ಗಳನ್ನು ಖಾಯಂಗೊಳಿಸುವಂತೆ ಧರಣಿ
ಬೆಂಗಳೂರು, ಸೆ.12: ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ತ್ಯಾಜ್ಯ ಸಂಗ್ರಹಿಸುವ ಮತ್ತು ವಿಲೇವಾರಿ ಮಾಡುವ ವಾಹನಗಳ ಚಾಲಕರು ಮತ್ತು ಸಹಾಯಕರನ್ನು ತಕ್ಷಣವೇ ನೇರವೇತನ ಪಾವತಿಯಡಿ ತಂದು, ಖಾಯಂಗೊಳಿಸಬೇಕು ಎಂದು ಒತ್ತಾಯಿಸಿ ಪೌರಕಾರ್ಮಿಕರು ಮಂಗಳವಾದಂದು ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಧರಣಿ ನಡೆಸಿದರು.
ಸ್ವೀಪರ್‍ಗಳು, ಘನತ್ಯಾಜ್ಯ ನಿರ್ವಹಣೆ ವಾಹನ ಚಾಲಕರು, ಸಹಾಯಕರು, ಲೋಡರ್ಸ್ ಸೇರಿದಂತೆ ಎಲ್ಲ ಪೌರಕಾರ್ಮಿಕರು 1ನೇ ಜುಲೈ 2022ರಿಂದ ಅನಿರ್ದಿಷ್ಟಕಾಲ ಮುಷ್ಕರ ನಡೆಸಿದ್ದರು. ಆಗ ಕಾಂಗ್ರೆಸ್ ಪಕ್ಷದ ನಾಯಕರು ಮುಷ್ಕರದ ಸ್ಥಳಕ್ಕೆ ಬಂದು ಬೆಂಬಲ ನೀಡಿದ್ದರು. ಅಲ್ಲದೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಪೌರ ಕಾರ್ಮಿಕರನ್ನು ಖಾಯಂಗೊಳಿಸಿ, ತ್ಯಾಜ್ಯ ಸಂಗ್ರಹಣೆ ವಿಲೇವಾರಿ ವಾಹನ ಚಾಲಕರು, ಸಹಾಯಕರು, ಲೋಡರ್ಸ್ ನೇರ ಪಾವತಿ ವ್ಯವಸ್ಥೆಗೆ ತರುವುದಾಗಿ ನಿರ್ದಿಷ್ಟವಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. ಇದನ್ನು ಮುಖ್ಯಮಂತ್ರಿಯವರ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಹಾಗೂ ಪಟ್ಟಣ ಪಂಚಾಯತಿಯಲ್ಲಿ ರಾಜ್ಯಾದ್ಯಂತ 15,000ಕ್ಕೂ ಹೆಚ್ಚು ತ್ಯಾಜ್ಯ ಸಾಗಿಸುವ ವಾಹನ ಚಾಲಕರು ಆ ಮೂಲಕ ನಗರ, ಪಟ್ಟಣಗಳ ಸ್ವಚ್ಛತೆಯಲ್ಲಿ ಮಹತ್ವಪೂರ್ಣ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ, ಸೇವಾ ನಿರತರ ವಾಹನ ಚಾಲಕರಿಗೆ ಕನಿಷ್ಠ ಕೂಲಿಯಾಗಲಿ, ನ್ಯಾಯೋಚಿತ ಸಂವಿಧಾನಬದ್ಧ ಕನಿಷ್ಠ ಸೌಕರ್ಯಗಳಾಗಲಿ ಇದುವರೆಗೂ ದೊರೆತಿಲ್ಲ. ಇದರಿಂದ ಚಾಲಕರ ಆದಾಯವನ್ನು ನಂಬಿ ಬದುಕುತ್ತಿರುವ ಕುಟುಂಬಗಳು ದೈನಂದಿನ ಅಗತ್ಯ ವಸ್ತುಗಳನ್ನು ಪೂರೈಸಿಕೊಳ್ಳಲಾಗದಂತಹ ದುಃಸ್ಥಿತಿಗೆ ತಲುಪಿದ್ದಾರೆ. ಐಪಿಡಿ ಸಾಲಪ್ಪರವರ ವರದಿಯನ್ನು ಜಾರಿಗೊಳಿಸಬೇಕು ಎಂದು ಧರಣಿನಿರತ ಪೌರಕಾರ್ಮಿಕರು ಸರಕಾರವನ್ನು ಒತ್ತಾಯಿಸಿದರು.
ಎಐಸಿಸಿಟಿಯು ಸಂಯೋಜಿತ ಕರ್ನಾಟಕ ಪ್ರಗತಿಪರ ತ್ಯಾಜ್ಯ ಸಾಗಿಸುವ ವಾಹನ ಚಾಲಕರು ಹಾಗೂ ಸಹಾಯಕರ ಸಂಘ, ಬಿಬಿಎಂಪಿ ಪೌರ ಕಾರ್ಮಿಕರ ಸಂಘ, ಪ್ರಗತಿಪರ ಪೌರ ಕಾರ್ಮಿಕರ ಸಂಘದ ಎಲ್ಲ ಪದಾಧಿಕಾರಿಗಳು ಸೇರಿದಂತೆ ಪೌರ ಕಾರ್ಮಿಕರು, ತ್ಯಾಜ್ಯ ಸಂಗ್ರಹಿಸುವ ಮತ್ತು ವಿಲೇವಾರಿ ಮಾಡುವ ವಾಹನ ಚಾಲರು, ಸಹಾಯಕರು ಧರಣಿಯಲ್ಲಿ ಭಾಗವಹಿಸಿದ್ದರು.