ಬಸವಣ್ಣನ ವಚನಗಳು ಮಾನವೀಯತೆಯ ಭಂಡಾರ: ಯು.ಟಿ.ಖಾದರ್

Update: 2024-09-14 18:15 GMT

ಬೆಂಗಳೂರು: ವಿಶ್ವಮಟ್ಟದಲ್ಲಿ ಸೌಹಾರ್ದ ಮನೋಭಾವ, ಸಮಾನತೆ ಸಾಧಿಸಲು ಬಸವಣ್ಣ ಅವರ ತತ್ವ-ಆದರ್ಶಗಳು ಅತ್ಯಗತ್ಯ. ಇವರ ವಚನಗಳು ಮಾನವೀಯತೆಯ ಭಂಡಾರವಾಗಿವೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಬಣ್ಣಿಸಿದ್ದಾರೆ.

ಶನಿವಾರ ನಗರದ ಬಸವ ಸಮಿತಿಯ ಅನುಭವ ಮಂಟಪ ಸಭಾಂಗಣದಲ್ಲಿ ನಡೆದ ಮಾಜಿ ರಾಷ್ಟ್ರಪತಿ ಡಾ.ಬಿ.ಡಿ.ಜತ್ತಿಯವರ 112ನೇ ಜನ್ಮದಿನೋತ್ಸವ ಹಾಗೂ ಬಸವ ಸಮಿತಿಯ ವಜ್ರಮಹೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಸವ ಸಮಿತಿ ಹಾಗೂ ಅದರ ಸಂಸ್ಥಾಪಕ ಬಿ.ಡಿ.ಜತ್ತಿ ಒಂದೇ ನಾಣ್ಯದ ಎರಡು ಮುಖಗಳಂತೆ. ಬಿ.ಡಿ.ಜತ್ತಿಯವರು ಕರ್ನಾಟಕದಲ್ಲಿ ಹುಟ್ಟಿ ರಾಷ್ಟ್ರಪತಿ ಸ್ಥಾನ ಅಲಂಕರಿಸುವುದೆಂದರೆ ಅದು ಈ ದೇಶದ ಪ್ರಜಾಪ್ರಭುತ್ವದ ಸೌಂದರ್ಯದಿಂದಲೇ ಸಾಧ್ಯ. ಬಸವ ಸಮಿತಿಯ ಸಹೋದರನಾಗಿ ಸಮಿತಿಗೆ ನನ್ನ ಸಹಕಾರ, ಪ್ರೋತ್ಸಾಹ ಇದ್ದೇ ಇರುತ್ತದೆ ಎಂದು ಯು.ಟಿ.ಖಾದರ್ ಹೇಳಿದರು.

ಪೋಷಕರು ತಮ್ಮ ಮಕ್ಕಳನ್ನು ಹೆಚ್ಚಾಗಿ ಸಾಹಿತ್ಯ ಕ್ಷೇತ್ರದ ಕಾರ್ಯಕ್ರಮಗಳಿಗೆ ಕರೆತಂದು, ಸಾಹಿತ್ಯ ಪರಿಚಯಿಸುವ ಕೆಲಸವಾಗಬೇಕು. ನಮ್ಮ ದೇಶ ಬಲಿಷ್ಠವಾಗಬೇಕಾದರೆ ಮಕ್ಕಳು ವಿಚಾರವಂತರಾಗಬೇಕು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಎಲ್ಲರೂ ಸರಿಸಮಾನವಾಗಿ ಬದುಕುವುದಾದರೆ, ನಿರ್ಭಯವಾಗಿ ಓಡಾಡುವುದಾರೆ ಅದು ಈ ದೇಶದ ಸಂವಿಧಾನದಿಂದ ಮಾತ್ರ ಸಾಧ್ಯವಾಗಿದೆ. ಎಲ್ಲರಿಗೂ ಸಮಾನತೆ, ಸೌಹಾರ್ದತೆ, ಬ್ರಾತೃತ್ವ ಸಂದೇಶವನ್ನು ಸಾರುವ ಸಂವಿಧಾನ, ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರ ವಿಚಾರಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳುವಂತಾಗಬೇಕು ಎಂದು ಯು.ಟಿ.ಖಾದರ್ ತಿಳಿಸಿದರು.

ವಿಧಾನ ಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಕರ್ನಾಟಕದಲ್ಲಿ ಬಸವಾದಿಶರಣರು ಜನಿಸಿ ಮಹತ್ತರ ಕೊಡುಗೆ ನೀಡಿದ್ದಾರೆ. ಬಸವಣ್ಣನವರು ಕಾಯಕ, ಸಮಾನತೆಯ ತತ್ವವನ್ನು ಇಡೀ ಜಗತ್ತಿಗೆ ಸಾರಿದ್ದು, ಅದರ ಪ್ರತೀಕವಾಗಿ ಅನುಭವ ಮಂಟಪವಿದೆ. ಲಿಂಗಾಯತರಷ್ಟೇ ಬಸವಣ್ಣನ ಅಭಿಮಾನಿಗಳಲ್ಲ. ಎಲ್ಲ ಜಾತಿ, ಧರ್ಮದವರು ಸಹ ಬಸವಣ್ಣನವರ ಅಭಿಮಾನಿಗಳು. ಪ್ರತಿಯೊಬ್ಬರೂ ಅವರ ತತ್ವಾದರ್ಶಗಳನ್ನು ಪಾಲಿಸೋಣ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ಸಿಗೆ ಇಂದಿಗೂ ಅಸ್ತಿತ್ವ, ಕುರುಹು ಇದೆಯೆಂದರೆ ಅದಕ್ಕೆ ಕಾರಣ ಬಿ.ಡಿ.ಜತ್ತಿ. ಅವರು ಕರ್ನಾಟಕದಲ್ಲಿ ಕಾಂಗ್ರೆಸ್ ಅನ್ನು ಕಟ್ಟಿ ಬೆಳೆಸಿದವರು. ಅದೇ ರೀತಿ, ಬಸವಣ್ಣ ಅವರನ್ನು ಸಾಂಸ್ಕೃತಿಕ ರಾಯಭಾರಿಯಾಗಿ ಮಾಡಿ ಎಲ್ಲಾ ಸರಕಾರಿ ಕಚೇರಿಗಳಲ್ಲಿ ಬಸವಣ್ಣನ ಭಾವಚಿತ್ರ ಹಾಕುವಂತೆ ಆದೇಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆಗಳು. ರಾಜ್ಯದಲ್ಲಿ ಬಸವಣ್ಣನಿಗೆ ಇಂತಹ ಮಾನ್ಯತೆ ದೊರಕಲು ಸಿದ್ದರಾಮಯ್ಯ ಬರಬೇಕಾಯಿತು ಎಂದು ಬಸವರಾಜ ಹೊರಟ್ಟಿ ತಿಳಿಸಿದರು.

ಜತೆಗೆ, ನಾನು ಶಿಕ್ಷಣ ಸಚಿವನಾಗಿದ್ದಾಗ ಶಾಲೆಗಳಲ್ಲಿ ಬಸವಾದಿಶರಣರ ಪುಸ್ತಕಗಳನ್ನು ಕೊಡುವ ಪ್ರಯತ್ನ ಮಾಡಿದ್ದೆ. ಶಾಲಾ ಮಕ್ಕಳಿಗೆ ವಚನಗಳನ್ನು ಕಲಿಯಲು ಅವಕಾಶ ಮಾಡಿಕೊಡಬೇಕು. ಬಸವಾದಿಶರಣರ ಕುರಿತು ಹೆಚ್ಚೆಚ್ಚು ಪುಸ್ತಕಗಳನ್ನು ಮಕ್ಕಳಿಗೆ ನೀಡಿ, ಪ್ರೋತ್ಸಾಹಿಸಬೇಕು. ಅವರ ವಿಚಾರಧಾರೆಗಳ ಅಧ್ಯಯನಗಳು ಹೆಚ್ಚಾಗಬೇಕು. ಜಾತಿ ಲೇಪನ ಹಚ್ಚದೇ ಬಸವಣ್ಣನನ್ನು ಎಲ್ಲರಿಗೂ ಮನವರಿಕೆ ಮಾಡಿಕೊಡುವ ಅಗತ್ಯವಿದೆ ಎಂದು ಬಸವರಾಜ ಹೊರಟ್ಟಿ ಹೇಳಿದರು.

ಇದೇ ಸಂದರ್ಭದಲ್ಲಿ ಲೇಖಕ ಡಾ.ಎನ್.ಜಿ.ಮಹಾದೇವಪ್ಪ ರಚನೆಯ ‘ಅಲ್ಲಮನ ವಜ್ರಗಳು‘ ಗ್ರಂಥ ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಬಸವ ಸಮಿತಿ ಅಧ್ಯಕ್ಷ ಡಾ.ಅರವಿಂದ ಜತ್ತಿ, ಬೇಲಿ ಮಠದ ಶಿವರುದ್ರ ಸ್ವಾಮೀಜಿ, ಕರ್ನಾಟಕ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಿ.ಎಸ್.ಪರಮಶಿವಯ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಸಾಧಕರಿಗೆ ಸನ್ಮಾನ: ದಾವಣಗೆರೆಯ ಧರ್ಮಪ್ರಕಾಶ ಮುರಿಗಪ್ಪ ಚಿಗಟೇರಿ ಮನೆತನಕ್ಕೆ ‘ದಾಸೋಹ ರತ್ನ ಪುರಸ್ಕಾರ’, ಧಾರವಾಡದ ಡಾ.ಸಿ.ಎಂ.ಕುಂದಗೋಳ ಅವರಿಗೆ ‘ಬಸವ ವಿಭೂಷಣ ಪುರಸ್ಕಾರ’, ಯುಎಸ್‍ಎ ಟೆಕ್ಸಾಸ್‍ನ ಹರೀಶ್ ಆರ್. ಹಿರೇಮಠ, ಬೆಳಗಾವಿಯ ಶಂಕರ ಬಿ.ಗುಡಸ್ ಕುಟುಂಬ ಹಾಗೂ ಮೈಸೂರಿನ ವಚನ ಕುಮಾರಸ್ವಾಮಿ ದಂಪತಿಗಳಿಗೆ ತಲಾ ‘ಬಸವ ಭೂಷಣ ಪುರಸ್ಕಾರ’, ಬೆಂಗಳೂರಿನ ಡಾ.ಜಿ.ವಿ.ಜಯಾರಾಜಶೇಖರ್ ಮತ್ತು ಮಹಾರಾಷ್ಟ್ರದ ವೀರೇಂದ್ರ ಮಂಗಳಗೆ ಅವರಿಗೆ ತಲಾ ‘ಬಸವಶ್ರೀ ಪುರಸ್ಕಾರ’ ನೀಡಿ ಗೌರವಿಸಲಾಯಿತು.

ಲಿಂಗಾಯತರು ಒಳಪಂಗಡಗಳನ್ನು ಮರೆತು ಬಸವಣ್ಣನವರ ಹೆಸರಿನಲ್ಲಿ ಒಂದಾಗಬೇಕು. ಲಿಂಗಾಯತರು ಇಡೀ ಜಗತ್ತನ್ನು ಆಳಬಲ್ಲರು. ಆದರೆ, ಅವರಲ್ಲಿ ಒಗ್ಗಟ್ಟಿಲ್ಲ ಎಂದು ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಹೇಳಿದ ಮಾತು ನಿಜವಾಗಿದೆ. ರಾಜಕಾರಣವನ್ನು ದೂರವಿಟ್ಟು ಕಾಳಜಿ ವಹಿಸಿದರೆ ದೇಶ- ವಿದೇಶಗಳಲ್ಲಿ ಬಸವಾದಿ ಶರಣರು, ಅನುಭವ ಮಂಟಪದ ಕೀರ್ತಿ ಮತ್ತಷ್ಟು ಹರಡುತ್ತದೆ. ಅಲ್ಲಮಪ್ರಭು, ಬಸವಣ್ಣನವರು ಜಗತ್ತಿಗೆ ಮೊದಲ ಸಂಸತ್ತು ಕೊಟ್ಟವರು. ಆದರೆ, ಇನ್ನೂ ಲಿಂಗಾಯತರು ಜಾಗೃತರಾಗಿಲ್ಲ. ಲಿಂಗಾಯತರಲ್ಲಿ ಒಗ್ಗಟ್ಟಿನ ಅಗತ್ಯವಿದೆ.

-ಬಸವರಾಜ ಹೊರಟ್ಟಿ, ಪರಿಷತ್ ಸಭಾಪತಿ

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News