ಕಾಂಗ್ರೆಸ್ ನಿಂದ ಬಂದವರಿಂದ ಬಿಜೆಪಿ ಹಾಳಾಯಿತು ಎಂದರೆ ಒಪ್ಪಲು ಸಾಧ್ಯವಿಲ್ಲ; ಈಶ್ವರಪ್ಪಗೆ ದಿನೇಶ್ ಗುಂಡೂರಾವ್ ತಿರುಗೇಟು
ಮೈಸೂರು: ಮಾಜಿ ಸಚಿವ 40,50 ಪರ್ಸೆಂಟ್ ಮಜಾ ಮಾಡಿ ಈಗ ಕಾಂಗ್ರೆಸ್ ನಿಂದ ಬಂದವರಿಂದ ಪಾರ್ಟಿ ಹಾಳಾಯಿತು ಎಂದರೆ ಒಪ್ಪಲು ಸಾಧ್ಯವಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಕೊರೋನ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದ ದುರಂತ ಘಟನೆಯಲ್ಲಿ ಲೋಪವಾಗಿರುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ.ಈ ಸಂಬಂಧ ತನಿಖೆ ಕೈಗೊಳ್ಳಲು ಮುಖ್ಯಮಂತ್ರಿಗಳ ಜೊತೆಯೂ ಚರ್ಚೆ ನಡೆಸಲಾಗಿದ್ದು, ಯಾವ ರೀತಿ ಮತ್ತು ಯಾವ ಹಂತದಲ್ಲಿ ತನಿಖೆ ನಡೆಸಬೇಕು ಅದನ್ನು ತಿಳಿಸುವಂತೆ ಸೂಚಿಸಿದ್ದಾರೆ. ಈಗಾಗಲೆ ಅದರ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲು ಮುಂದಾಗಿದ್ದೇವೆ. ಶೀಘ್ರದಲ್ಲೇ ತನಿಖೆ ಮಾಡುತ್ತೇವೆ ಎಂದು ಹೇಳಿದರು.
ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಬರಿ ಕೆಳಹಂತದ ಅಧಿಕಾರಿಗಳಿಂದಷ್ಟೇ ಲೋಪವಾಗಿಲ್ಲ, ಮೇಲ್ಮಟ್ಟದ ಅಧಿಕಾರಿಗಳಿಂದಲೂ ಲೋಪವಾಗಿದೆ. ಹಾಗಾಗಿ ಯಾವ ಹಂತದಲ್ಲಿ ತನಿಖೆ ಮಾಡಬೇಕೋ, ಅದನ್ನು ಮಾಡಿ ನಿಗದಿತ ಸಮಯದೊಳಗೆ ಪೂರ್ಣಗೊಳಿಸುತ್ತೇವೆ ಎಂದು ಹೇಳಿದರು.
ಗುತ್ತಿಗೆ ಆಧಾರದ ಮೇಲೆ ಸರ್ಕಾರಿ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು ಖಾಸಗಿಯಾಗಿ ಪ್ರಾಕ್ಟೀಸ್ ಮಾಡಲು ಸರ್ಕಾರವೇ ಅನುಮತಿ ನೀಡಿತ್ತು. ಇದರಿಂದ ಕೆಲವು ಕಡೆಗಳಲ್ಲಿ ಅನಾನುಕೂಲ ಉಂಟಾಗುತ್ತಿದ್ದು. ಗುತ್ತಿಗೆ ವೈದ್ಯರು ಖಾಸಗಿಯಾಗಿ ಪ್ರಾಕ್ಟೀಸ್ ಮಾಡಬೇಕೇ, ಬೇಡವೇ ಎಂಬುದರ ಬಗ್ಗೆ ಪುನರ್ ಪರಿಶೀಲನೆ ನಡೆಸಲಾಗುವುದು ಎಂದು ಸಚಿವರು ತಿಳಿಸಿದರು.
ಹೊಸ ಆಸ್ಪತ್ರೆಗಳ ನಿರ್ಮಾಣದ ಮೊದಲು ಈಗ ಇರುವ ಆಸ್ಪತ್ರೆಗಳನ್ನೇ ಉತ್ತಮ ಮಟ್ಟದಲ್ಲಿ ಸುಧಾರಣೆ ಮಾಡಬೇಕಿದೆ. ಆಸ್ಪತ್ರೆಗಳಲ್ಲಿ ಇರುವ ವೈದ್ಯರ ಕೊರತೆ, ಸಿಬ್ಬಂದಿಗಳ ಕೊರತೆ ಮತ್ತು ತಾಂತ್ರಿಕವಾಗಿ ಬೇಕಾದಂತಹ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕಳೆದ ಹತ್ತು ವರ್ಷಗಳಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸಿ ಈಗ ಬಿಡುಗಡೆಗೊಳಿಸಲಾಗಿರುವ ಆಯುಷ್ ವೈದ್ಯರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗುವುದೇ ಎಂಬ ಪ್ರಶ್ನೆಗೆ, ಇದನ್ನು ಪರಿಶೀಲನೆ ನಡೆಸಿ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.