ಆರಗ ಜ್ಞಾನೇಂದ್ರ ತೀರ್ಥಹಳ್ಳಿಗೆ ಕಳಂಕ: ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಕಿಡಿ

Update: 2023-08-03 10:50 GMT

ಬೆಂಗಳೂರು: ʼಆರಗ ಜ್ಞಾನೇಂದ್ರ ಅವರು ತೀರ್ಥಹಳ್ಳಿಗೆ ಕಳಂಕʼ ಎಂದು ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್‌ ಕಿಡಿಕಾರಿದ್ದಾರೆ. 

ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ʼʼಆರಗ ಜ್ಞಾನೇಂದ್ರ ಕವಿ ಕುವೆಂಪು, ಅನಂತಮೂರ್ತಿ ಹಾಗೂ ಶಾಂತವೇರಿ ಗೋಪಾಲಗೌಡರು, ಬದ್ರಿನಾರಾಯಣ್‌ ಅವರಂತಹ ಸಂಸದೀಯ ಪಟುಗಳು ಗೆದ್ದುಬಂದಂತಹ ತೀರ್ಥಹಳ್ಳಿ ಕ್ಷೇತ್ರಕ್ಕೆ ಅವಮಾನ ಮಾಡುತ್ತಿದ್ದಾರೆʼʼ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ʼಗೃಹಚಿವರಾಗಿ, ಎಂಪಿಎಂ ಅಧ್ಯಕ್ಷರಾಗಿ ಮತ್ತು ಅನೇಕ ಜವಾಬ್ದಾರಿಯುತ ಸ್ಥಾನಗಳನ್ನು ಅಆರಗ ಜ್ಞಾನೇಂದ್ರ ಅವರು ನಿಭಾಯಿಸಿದ್ದಾರೆ. ಇಂತಹ ವ್ಯಕ್ತಿ ಬಾಯಿ ತಪ್ಪಿನಿಂದ ಹೇಳಿದೆ, ಕಣ್ತಪ್ಪಿನಿಂದ ಹೇಳಿದೆ ಎನ್ನುವ ವಯಸ್ಸು ಅಲ್ಲ, ಜ್ಞಾನವೂ ಅಲ್ಲʼ ಎಂದು ಟೀಕಿಸಿದರು. 

ʼʼಬಿಜೆಪಿಯ ಯಾವುದೇ ನಾಯಕರು ಅರಗ ಜ್ಞಾನೇಂದ್ರ ಅವರ ಈ ಹೇಳಿಕೆಯನ್ನು ಏಕೆ ಖಂಡಿಸುತ್ತಿಲ್ಲ, ಅವರ ಮನಸ್ಸಿನಲ್ಲಿಯೂ ಅದೇ ಆಲೋಚನೆ ಇದೆಯೇ? ಮೋದಿಯವರು ಸಹ ಇದೇ ಮನಸ್ಥಿತಿ ಹೊಂದಿರುವವರೆ, ಏಕೆಂದರೆ ಅವರ ಸಂಪುಟದ ಅನೇಕ ಸದಸ್ಯರು ಈ ತರಹದ ಹೇಳಿಕೆ ನೀಡಿದಾಗಲೂ ಸುಮ್ಮನಿದ್ದರು. ಅನಂರತಕುಮಾರ್‌ ಹೆಗಡೆ "ನಾವು ಸಂವಿಧಾನ ಬದಲಾಯಿಸಲು ಬಂದಿದ್ದೇವೆ ಹೇಳಿಕೆಯಿಂದ ಹಿಡಿದು ಯತ್ನಾಳರ ತನಕ ಇಂತಹ ಸಂವಿಧಾನ ವಿರೋಧಿ ಹೇಳಿಕೆ ನೀಡಿದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲʼʼ ಎಂದು ದೂರಿದರು. 

ʼಅರಗ ಜ್ಞಾನೇಂದ್ರ ಅವರು ಕ್ಷಮೆ ಕೇಳಿ ಉಪಯೋಗವಿಲ್ಲ, ಅವರಿಂದ ರಾಜಿನಾಮೆ ಪಡೆಯಬೇಕು. ಖರ್ಗೆಯವರ ಹಾಗೂ ಈಶ್ವರ ಖಂಡ್ರೆ ಅವರ ಬಗ್ಗೆ ಹಗುರವಾಗಿ ಮಾತನಾಡಿರುವದರ ಜೊತೆಗೆ ಬಣ್ಣವೂ ಸೇರಿಕೊಂಡಿದೆ, ಇದಕ್ಕಿಂತ ದೊಡ್ಡ ಅಪರಾಧ ಇನ್ನಿಲ್ಲ. ಮನುಷ್ಯನ ಬಣ್ಣದ ಬಗ್ಗೆ ಮಾತನಾಡಿರುವುದು ಘೋರ ಅಪರಾಧʼ ಎಂದು ಕಿಡಿಕಾರಿದರು. 

ಆರಗ ಅವರು "ನಾನು ಖರ್ಗೆಯವರ ಹೆಸರು ತೆಗೆದುಕೊಂಡಿಲ್ಲ ಎಂದು ಸುಳ್ಳು ಹೇಳಿದ್ದಾರೆ. ಸ್ಪೀಕರ್‌ಗೆ ದೂರು ಸಲ್ಲಿಸಲಾಗುವುದು, ಕೋರ್ಟಿಗೂ ಹೋಗಲಾಗುವುದು, ನಂದಿತಾ ಅವರ ಕೇಸಿನಲ್ಲೂ ಅತ್ಯಾಚಾರ ಎಂದು ಸುಳ್ಳು ಬಿಂಬಿಸಿದವರು ಅರಗ, ಪೊಲೀಸರನ್ನು ನಾಯಿಗಳು ಎಂದವರು, ಹೆಣ್ಣು ಮಕ್ಕಳು 7 ಗಂಟೆ ನಂತರ ಏಕೆ ಓಡಾಡಬೇಕು ಎಂದಂತಹ ವ್ಯಕ್ತಿ ಇವರು. ಖರ್ಗೆಯವರ ವಿಚಾರದಲ್ಲಿ ಕೇವಲ ವಿಷಾದ ವ್ಯಕ್ತಪಡಿಸುವುದು ಬೇಕಿಲ್ಲ, ನೇರವಾಗಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಬೃಹತ್‌ ಪತ್ರಿಭಟನೆ ಹಾಗೂ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಎಚ್ಚರಿಕೆ ನೀಡಿದರು. 

ʼʼಕಸ್ತೂರಿ ರಂಗನ್‌ ವಿಚಾರಕ್ಕೆ ರಾಷ್ಟ್ರಮಟ್ಟದಲ್ಲಿ ಬಿಜೆಪಿಯವರೇ ಒಪ್ಪಿಗೆ ನೀಡಿದ್ದಾರೆ. ನಮ್ಮ ಕಾಂಗ್ರೆಸ್‌ ಸರ್ಕಾರ ಇದಕ್ಕೆ ವಿರೋಧ ಮಾಡಿತ್ತು. ತೀರ್ಥಹಳ್ಳಿಯ ಜನರನ್ನು ಮಂಗ ಮಾಡಲು ಇಲ್ಲಿ ವಿರೋಧ ಮಾಡುವುದು, ಕೇಂದ್ರದಲ್ಲಿ ಒಪ್ಪಿಗೆ ನೀಡುವ ಕಣ್ಣಾಮುಚ್ಚಲೆ ಆಡುತ್ತಿದೆʼʼ ಎಂದು ಆಕ್ರೋಶ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News