JDS ಕಾರ್ಯಕಾರಿ ಸಮಿತಿ ವಿಸರ್ಜನೆ; ಕುಮಾರಸ್ವಾಮಿಗೆ ಪಕ್ಷದ ಹೊಣೆ

Update: 2023-10-19 10:49 GMT

ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆ ಮುಗಿದ ಮೇಲೆ ಸ್ಥಗಿತಗೊಂಡಿದ್ದ ಪಕ್ಷದ ಚಟುವಟಿಕೆಗಳಿಗೆ ವೇಗ ನೀಡುವ ಉದ್ದೇಶದಿಂದ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಮಾಜಿ ಪ್ರಧಾನಿಗಳಾದ ಎಚ್.ಡಿ.ದೇವೆಗೌಡರು ರಾಜ್ಯದ ಜೆಡಿಎಸ್ ಘಟಕದ ಕಾರ್ಯಕಾರಿ ಸಮಿತಿಯನ್ನು ವಿಸರ್ಜಿಸಿ ಆದೇಶ ಹೊರಡಿಸಿದ್ದಾರೆ.

ಅಲ್ಲದೆ; ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ರಾಜ್ಯ ಜೆಡಿಎಸ್ ಘಟಕದ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದ್ದು, ಈ ಎರಡೂ ಆದೇಶಗಳು ತಕ್ಷಣದಿಂದಲೇ ಜಾರಿಗೆ ಬರುತ್ತವೆ ಎಂದು ರಾಷ್ಟ್ರೀಯ ಅಧ್ಯಕ್ಷರು ಮಾಧ್ಯಮಗೋಷ್ಠಿಯಲ್ಲಿ ಪ್ರಕಟಿಸಿದರು.

ರಾಜ್ಯ ಘಟಕ ವಿಸರ್ಜನೆ:

"ಜನತಾದಳ (ಜಾತ್ಯತೀತ) ಪಕ್ಷದ ಸಂವಿಧಾನ ಮತ್ತು ನಿಯಮಗಳ ಅಡಿಯಲ್ಲಿ, ಅಂದರೆ; ಆರ್ಟಿಕಲ್ 10ರ ಪ್ರಕಾರ, ಕರ್ನಾಟಕ ಪ್ರದೇಶ ಜನತಾದಳ (ಜಾತ್ಯಾತೀತ) ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಮತ್ತು ರಾಜ್ಯ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನು ಒಳಗೊಂಡಂತೆ ಈ ಕೂಡಲೇ ಜಾರಿಗೆ ಬರುವಂತೆ ಆ ಸಮಿತಿಯನ್ನು ವಿಸರ್ಜನೆ ಮಾಡಲಾಗಿದೆ" ಎಂದು ಆದೇಶದಲ್ಲಿ ದೇವೇಗೌಡರು ತಿಳಿಸಿದ್ದಾರೆ.

 ಕುಮಾರಸ್ವಾಮಿಗೆ ಪಕ್ಷದ ಹೊಣೆ

"ಕರ್ನಾಟಕ ಪ್ರದೇಶ ಜನತಾದಳ (ಜಾತ್ಯತೀತ) ಪಕ್ಷದ ರಾಜ್ಯಾಧ್ಯಕ್ಷರು ಮತ್ತು ರಾಜ್ಯ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನು ಒಳಗೊಂಡಂತೆ ಆ ಸಮಿತಿಯನ್ನು ಈಗಾಗಲೇ ವಿಸರ್ಜನೆ ಮಾಡಲಾಗಿದೆ. ಪಕ್ಷದ ಮುಂದಿನ ಕಾರ್ಯ ಚಟುವಟಿಕೆಗಳನ್ನು ಸುಲಲಿತವಾಗಿ ಮುಂದುವರಿಸಿಕೊಂಡು ಹೋಗಲು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಪಕ್ಷದ ರಾಜ್ಯ ಘಟಕದ ಅಡಾಕ್ ಅಧ್ಯಕ್ಷರನ್ನಾಗಿ ಕೂಡಲೇ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ" ಎಂದು ಮಾಜಿ ಪ್ರಧಾನಿಗಳು ಮತ್ತೊಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ, ಕಳೆದ ಕೆಲ ದಿನಗಳಿಂದ ನಡೆದ ರಾಜಕೀಯ ಬೆಳವಣಿಗೆಗಳನ್ನು ಅವಲೋಕನ ಮಾಡಿದ ಜೆಡಿಎಸ್ ರಾಜ್ಯ ಕಾರ್ಯಕಾರಿಣಿ ಸಮಿತಿ ಸಭೆಯು, ಈ ಮಹತ್ವದ ನಿರ್ಧಾರ ಕೈಗೊಳ್ಳಲು ರಾಷ್ಟ್ರೀಯ ಅಧ್ಯಕ್ಷರಿಗೆ ಸಂಪೂರ್ಣ, ಸರ್ವಸಮ್ಮತದ ಅಧಿಕಾರ ನೀಡಿತು.

ಅದಾದ ಬಳಿಕ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡರು ಸೇರಿದಂತೆ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾ ಘಟಕಗಳ ಅಧ್ಯಕ್ಷರು ಹಾಗೂ ಹಿರಿಯ ನಾಯಕರನ್ನು ಒಳಗೊಂಡಂತೆ ಮಾಧ್ಯಮಗೋಷ್ಠಿ ನಡೆಸಿದ ಮಾಜಿ ಪ್ರಧಾನಿಗಳು, ಸಮಿತಿ ಕೈಗೊಂಡ ಈ ಮಹತ್ವದ ತೀರ್ಮಾನವನ್ನು ಪ್ರಕಟಿಸಿದರು.

ʼʼಪಕ್ಷದ ಹಲವು ಮುಸ್ಲಿಂ ನಾಯಕರು ಕೂಡ ನಮ್ಮ ಜತೆಗೆ ಇದ್ದಾರೆ. ಯಾರೂ ಧೃತಿಗೆಡಬೇಕಾಗಿಲ್ಲ. ಬೇರೆ ಬೇರೆ ರಾಜ್ಯದಲ್ಲಿ ಬೇರೆ ಬೇರೆ ಸನ್ನಿವೇಶ ಇದೆ. ಕುಮಾರಸ್ವಾಮಿ ಅವರು ಶಾಸಕಾಂಗ ಪಕ್ಷದ ನಾಯಕ ಜವಾಬ್ದಾರಿಯ ಜತೆಗೆ ಜತೆಗೆ ಪಕ್ಷದ ಅಧ್ಯಕ್ಷ ಸ್ಥಾನದ ಹೊಣೆಯನ್ನೂ ನಿರ್ವಹಣೆ ಮಾಡಬೇಕು ಎಂದು ನಿರ್ಧಾರ ಮಾಡಲಾಗಿದೆʼʼ 

ಎಚ್.ಡಿ.ದೇವೆಗೌಡ, ಮಾಜಿ ಪ್ರಧಾನಿ

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News