ಅಂಗನವಾಡಿಗಳಿಗೆ ಕೊಳೆತ ಮೊಟ್ಟೆ ವಿತರಣೆ ಆರೋಪ: ಟೆಂಡರ್ ದಾರರಿಗೆ ನೋಟಿಸ್

Update: 2023-07-13 12:23 GMT

ಮಡಿಕೇರಿ ಜು.13 : ಕುಶಾಲನಗರ ತಾಲೂಕು ವ್ಯಾಪ್ತಿಯ ಕೆಲವು ಅಂಗನವಾಡಿ ಕೇಂದ್ರಗಳಿಗೆ ಕೊಳೆತ ಮೊಟ್ಟೆಗಳನ್ನು ಸರಬರಾಜು ಮಾಡಿರುವ ಬಗ್ಗೆ ಆರೋಪಗಳು ಕೇಳಿ ಬಂದಿದೆ.

ತಾಲ್ಲೂಕಿನ ಕೂಡಿಗೆ, ಬಸವನತ್ತೂರು ಸೇರಿದಂತೆ ಕೆಲವು ಅಂಗನವಾಡಿಗಳಲ್ಲಿ ಗರ್ಭಿಣಿ ಮಹಿಳೆಯರು, ಬಾಣಂತಿಯರು ಹಾಗೂ ಕೇಂದ್ರದ ಮಕ್ಕಳಿಗೆ ಕೊಳೆತ ಮೊಟ್ಟೆಗಳನ್ನು ಸರಬರಾಜು ಮಾಡಿರುವ ಬಗ್ಗೆ ಸಾರ್ವಜನಿಕರಿಂದ ಅಸಮಾಧಾನ ವ್ಯಕ್ತವಾಗಿದೆ.

ಮೊಟ್ಟೆಗಳನ್ನು ಬೇಯಿಸಿದ ಸಂದರ್ಭ ದುರ್ವಾಸನೆಯಿಂದ ಕೂಡಿದ್ದು ಈ ಬಗ್ಗೆ ತನಿಖೆ ನಡೆಸಿ ಸಂಬಂಧಿಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೂಲಕ ರಾಜ್ಯ ಮಟ್ಟದಲ್ಲಿ ಟೆಂಡರ್ ಪಡೆದಿರುವ ಹೊರ ಜಿಲ್ಲೆಯ ಗುತ್ತಿಗೆದಾರರ ನಿರ್ಲಕ್ಷವೇ ಇದಕ್ಕೆ ಕಾರಣ ಎಂದು ಆರೋಪಿಸಲಾಗಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಟೆಂಡರ್ ವಹಿಸಿರುವ ಸಂಸ್ಥೆಗೆ ನೋಟಿಸ್ ನೀಡಿದ್ದಾರೆ.

ಇಲಾಖೆ ಅಧಿಕಾರಿಗಳಾದ ನಟರಾಜ್ ಹಾಗೂ ವಿಮಲಾ ಅವರುಗಳು ಕುಶಾಲನಗರ ಸಮೀಪದ ಬಸವನತ್ತೂರು ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಂಗನವಾಡಿ ಮೇಲ್ವಿಚಾರಕರೊಂದಿಗೆ ಮಾಹಿತಿ ಪಡೆದು ಗುಣಮಟ್ಟವಿಲ್ಲದ ಮೊಟ್ಟೆಗಳನ್ನು ವಶಪಡಿಸಿಕೊಂಡರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News