ಡಿಜೆ ಹಳ್ಳಿ-ಕೆಜಿಹಳ್ಳಿ, ಹುಬ್ಬಳ್ಳಿ ಗಲಾಟೆ | ಬಂಧಿತ ಅಮಾಯಕರು, ವಿದ್ಯಾರ್ಥಿಗಳ ಬಿಡುಗಡೆಗೆ ಶಾಸಕ ತನ್ವೀರ್ ಸೇಠ್ ಪತ್ರ

Update: 2023-07-26 05:29 GMT

ತನ್ವೀರ್ ಸೇಠ್- ಶಾಸಕರು

ಬೆಂಗಳೂರು: ಡಿಜೆ ಹಳ್ಳಿ, ಕೆಜಿ ಹಳ್ಳಿ, ಶಿವಮೊಗ್ಗ ಹಾಗೂ ಹುಬ್ಬಳ್ಳಿ ಗಲಾಟೆಯಲ್ಲಿ ಬಂಧಿತರಾಗಿರುವ ಆರೋಪಿಗಳನ್ನು ಬಿಡುಗಡೆಗೊಳಿಸಬೇಕು ಎಂದು ಮೈಸೂರು ಜಿಲ್ಲೆಯ ನರಸಿಂಹ ರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಸರಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಗೃಹ ಸಚಿವ ಜಿ.ಪರಮೇಶ್ವರ್ ​ಅವರಿಗೆ ಪತ್ರ ಬರೆದಿರುವ ಶಾಸಕರು, ಡಿಜೆ ಹಳ್ಳಿ , ಕೆಜಿ ಹಳ್ಳಿ , ಶಿವಮೊಗ್ಗ ಹುಬ್ಬಳ್ಳಿ ಸೇರಿ ಹಲವೆಡೆ ಅಮಾಯಕರು, ವಿದ್ಯಾರ್ಥಿಗಳು ಬಂಧಿತರಾಗಿದ್ದಾರೆ. ಸುಳ್ಳು ಮೊಕದ್ದಮೆ ಹೂಡಿ ಅವರನ್ನ ಬಂಧಿಸಲಾಗಿದೆ. ಸದರಿ ಮೊಕದಮ್ಮೆಯನ್ನ ಮರು ಪರಿಶೀಲಿಸಿ ಅವರನ್ನ ಬಿಡುಗಡೆ ಮಾಡಲು ಮನವಿ ಸಲ್ಲಿಸಿದ್ದಾರೆ.

ಶಾಸಕರ ಮನವಿಗೆ ಸ್ಪಂದಿಸಿರುವ ಗೃಹ ಸಚಿವ ಪರಮೇಶ್ವರ್, ಈ ಸಂಬಂಧ ಮರು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲು ಸರ್ಕಾರದ ಪ್ರಧಾನ ಕಾರ್ಯದರ್ಶಿ ಅವರಿಗೆ ಟಿಪ್ಪಣಿ ಬರೆದಿದ್ದಾರೆ.

 

ಬಿಜೆಪಿ ಶಾಸಕ ಯತ್ನಾಳ್ ಆಕ್ಷೇಪ 

''ಶಾಸಕ ತನ್ವೀರ್ ಸೇಠ್ ಮನವಿಯಂತೆ ಡಿ.ಜೆ ಹಳ್ಳಿ, ಕೆ.ಜಿ ಹಳ್ಳಿ, ಶಿವಮೊಗ್ಗ, ಹುಬ್ಬಳ್ಳಿ ಹಾಗು ಇತರೆ ಕರ್ನಾಟಕದೆಲ್ಲೆಡೆ ನಡೆದ ಗಲಭೆಗಳಲ್ಲಿ ಭಾಗಿಯಾಗಿರುವ ಆರೋಪಿಗಳ ಕೇಸುಗಳನ್ನು ವಾಪಸ್ ಪಡೆಯಲು ಕ್ರಮಕೈಗೊಳ್ಳಲು ಗೃಹ ಮಂತ್ರಿಗಳು ಸೂಚಿಸಿದ್ದಾರೆ. ಈ ಆರೋಪಿಗಳು ಪೋಲೀಸರ ವಿರುದ್ಧ ಕಲ್ಲು ತೂರಿರುವವರು, ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದವರು ಹಾಗು ಗಲಭೆ ನಡೆಸಿದವರು ಇದ್ದಾರೆ. ಹಿಂದೆ ಇವರದ್ದೇ ಸರ್ಕಾರ PFI ಗೂಂಡಾಗಳು ವಿರುದ್ಧ ಕೇಸುಗಳನ್ನು ವಾಪಸ್ ಪಡೆದು ರಾಜ್ಯದಲ್ಲಿ ಅಶಾಂತಿ ವಾತಾವರಣ ನಿರ್ಮಾಣ ಮಾಡಲು ಪ್ರಚೋದನೆ ನೀಡಿದ್ದರು. ಯಾರದ್ದೋ ಕೃಪೆಯಿಂದ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದಿರುವ ಗೃಹ ಮಂತ್ರಿಗಳು ಈಗ ಮುಸ್ಲಿಮರನ್ನು ಓಲೈಸಲು ಈ ಹುಚ್ಚು ಕೆಲಸಕ್ಕೆ ಕೈಹಾಕಿದ್ದಾರೆ'' ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟ್ವೀಟ್ ಮಾಡಿದ್ದಾರೆ. 

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News