ವಾಲ್ಮೀಕಿ ನಿಗಮದಲ್ಲಿ ಅಕ್ರಮ | ಎಸ್ಐಟಿ ತನಿಖೆ ನಡೆಯುತ್ತಿರುವಾಗ ಈ.ಡಿ. ದಾಳಿ ಅನಾವಶ್ಯಕ : ಡಿಕೆಶಿ

Update: 2024-07-11 13:15 GMT

ಬೆಂಗಳೂರು : ‘ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ವರ್ಗಾವಣೆ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡ(ಎಸ್‌ಐಟಿ) ತನಿಖೆ ನಡೆಸುತ್ತಿರುವ ಸಂದರ್ಭದಲ್ಲಿ ಈ.ಡಿ. ದಾಳಿ ನಡೆಸುವ ಅಗತ್ಯವೇನಿರಲಿಲ್ಲ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಈ ಪ್ರಕರಣದ ಸತ್ಯಾಸತ್ಯತೆ ನಮಗೆ ಗೊತ್ತಿದೆ. ರಾಜ್ಯ ಸರಕಾರ ವಿಶೇಷ ತನಿಖಾ ತಂಡ ರಚಿಸಿ ತನಿಖೆ ನಡೆಸುತ್ತಿದ್ದು, ಅಕ್ರಮವಾಗಿ ವರ್ಗಾವಣೆಯಾಗಿದ್ದ ಹಣವನ್ನು ಈಗಾಗಲೇ ವಶಪಡಿಸಿಕೊಳ್ಳುತ್ತಿದೆ. ನಿರ್ದಿಷ್ಟ ಮೊತ್ತಕ್ಕಿಂತ ಹೆಚ್ಚಿನ ಪ್ರಮಾಣದ ಅವ್ಯವಹಾರವಾದರೆ ಸಿಬಿಐ ತನಿಖೆ ಮಾಡುವ ಅಧಿಕಾರವಿದೆ. ಈ ಎಲ್ಲ ತನಿಖೆ ಮುಕ್ತಾಯದ ನಂತರ ಈ ತನಿಖೆಗೆ ಸರಿಯಾಗಿ ನಡೆದಿದೆಯೇ? ಎಂದು ಈ.ಡಿ ಪರಾಮರ್ಶನೆ ಮಾಡಬಹುದಿತ್ತು.

ಆದರೆ, ಈ.ಡಿ. ಅಧಿಕಾರಿಗಳು ಯಾವುದೇ ದೂರು ಇಲ್ಲದ ಕಾರಣ, ದಾಳಿ ಮಾಡುವ ಅಗತ್ಯವಿರಲಿಲ್ಲ. ಈ.ಡಿಯವರು ಯಾವ ರೀತಿ ತನಿಖೆ ಮಾಡುತ್ತಿದ್ದಾರೆ, ಯಾವ ಪ್ರಕ್ರಿಯೆ ಮೇಲೆ ಮಾಡುತ್ತಿದ್ದಾರೆಂದು ನನಗೆ ಗೊತ್ತಿಲ್ಲ. ಎಸ್‍ಐಟಿ ತನಿಖೆ ಮುಕ್ತವಾಗಿ ನಡೆಯುತ್ತಿದ್ದು, ತನಿಖೆಗೆ ಅಡಚಣೆಯಾಗಬಾರದು ಎಂಬ ಉದ್ದೇಶಕ್ಕೆ ಸಚಿವರು ಸ್ವಯಂ ಪ್ರೇರಿತರಾಗಿ ರಾಜೀನಾಮೆ ನೀಡಿದ್ದಾರೆ. ನಾವು ಕೂಡ ಪರಿಶೀಲನೆ ಮಾಡಿದ್ದು, ಮಂತ್ರಿಗಳು ಯಾವುದೇ ಸಹಿ ಮಾಡಿಲ್ಲ. ಅವರ ಹಸ್ತಕ್ಷೇಪವೂ ಇಲ್ಲ ಎಂದು ಸ್ಪಷ್ಟನೆ ನೀಡಿದರು.

ಕಾನೂನು ಪ್ರಕಾರ ತನಿಖೆ ನಡೆಯುತ್ತಿದ್ದು, ಈ ಮಧ್ಯೆ ಈಡಿ ದಾಳಿ ಮಾಡಿದೆ. ನೋಡೋಣ ಏನು ಮಾಡುತ್ತಾರೆ. ಈ ಹಿಂದೆ ಈ.ಡಿ. ವಿರುದ್ಧ ಹೋರಾಟ ಮಾಡಿದ್ದೀರಿ, ಈ ದಾಳಿಯೂ ರಾಜಕೀಯ ಪ್ರೇರಿತ. ಅವರ ತನಿಖೆ ಮುಗಿಯಲಿ ನಂತರ ಮಾತನಾಡುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದರು.

ಸಮುದಾಯದ ಕಲ್ಯಾಣಕ್ಕಾಗಿಯೇ ವಿನಿಯೋಗಿಸುತ್ತಿದೆ : ಇಡೀ ದೇಶದಲ್ಲಿ ಆಂಧ್ರದ ನಂತರ ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟರ ಕಲ್ಯಾಣಕ್ಕಾಗಿ ಪ್ರತ್ಯೇಕ ಅನುದಾನ ನೀಡಿ ಬಳಸಲು ಕಾಯ್ದೆ ತಂದಿದ್ದೇವೆ. ರಾಷ್ಟ್ರೀಯ ಆಯೋಗ ನೊಟೀಸ್ ಜಾರಿ ಮಾಡುವುದೇ ಆದರೆ ಅದು ಕೇಂದ್ರ ಸರರ್ಕಾರಕ್ಕೆ ನೀಡಬೇಕು ಎಂದು ಶಿವಕುಮಾರ್, ರಾಷ್ಟ್ರೀಯ ಎಸ್ಸಿ-ಎಸ್ಟಿ ಆಯೋಗದ ನೋಟಿಸ್ ಸಂಬಂಧ ಪ್ರತಿಕ್ರಿಯಿಸಿದರು.

ಪರಿಶಿಷ್ಟ ಕಲ್ಯಾಣಕ್ಕೆ ಮೀಸಲಿಟ್ಟ ಅನುದಾನವನ್ನು ಸರಕಾರ ಆ ಸಮುದಾಯದ ಕಲ್ಯಾಣಕ್ಕಾಗಿಯೇ ವಿನಿಯೋಗಿಸುತ್ತಿದೆ. ಇದಕ್ಕೆ ನೊಟೀಸ್ ನೀಡಿರುವ ರಾಷ್ಟ್ರೀಯ ಆಯೋಗಕ್ಕೆ ನಾಚಿಕೆಯಾಗಬೇಕು. ಎಸ್‍ಸಿಪಿ, ಟಿಎಸ್‍ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗೆ ಬಳಸಿಕೊಳ್ಳುತ್ತಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಅವರು ವಿವರಣೆ ನೀಡಿದರು.

ತಪ್ಪುಗಳನ್ನು ಪರಾಮರ್ಶಿಸಿ, ಸರಿಪಡಿಸಿಕೊಳ್ಳುತ್ತೇವೆ :  

"ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಎಲ್ಲಿ ಎಡವಿದೆ ಎಂದು ಪರಾಮರ್ಶನೆ ನಡೆಸಿ, ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು ಮುಂದಿನ ದಿನಗಳಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯನ್ನು ಎದುರಿಸಲು ಸಿದ್ದತೆ ಮಾಡಿಕೊಳ್ಳಲಾಗುವುದು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.

“ಲೋಕಸಭೆಯಲ್ಲಿ 1 ಸ್ಥಾನ ಹೊಂದಿದ್ದವರು ಈಗ 9 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದೇವೆ. ನಾವು 14-15 ಸೀಟುಗಳನ್ನು ಗೆಲ್ಲುವ ನಿರೀಕ್ಷೆ ಇತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಎಲ್ಲಿ ಎಡವಿದ್ದೇವೆ ಎಂದು ಎಐಸಿಸಿಯ ಸಮಿತಿ ಸಮ್ಮುಖದಲ್ಲಿ ಇಂದು ಪರಾಮರ್ಶನೆ ನಡೆಯಲಿದೆ. ಕೇವಲ ಕರ್ನಾಟಕ ಮಾತ್ರವಲ್ಲದೇ ದೇಶದೆಲ್ಲೆಡೆ ಈ ಪ್ರಕ್ರಿಯೆ ಮಾಡಲಾಗುತ್ತಿದೆ. ನಾನು ಕೂಡ ನಾಲ್ಕು ವಿಭಾಗಗಳ ವರದಿ ಕಳುಹಿಸಿಕೊಡಲಿದ್ದೇನೆ. ನಾನು ಹಾಗೂ ಮುಖ್ಯಮಂತ್ರಿಗಳು ಸೇರಿ ನಮ್ಮ ನಾಯಕರ ಜತೆ ಚರ್ಚೆ ಮಾಡಿ ಪರಾಮರ್ಶನೆ ಮಾಡುತ್ತೇವೆ" ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News