ಸಿಎಂಗೆ ಶೋಕಾಸ್ ನೋಟಿಸ್ | ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುವ ಪರಿಸ್ಥಿತಿ ನಿರ್ಮಾಣ : ಡಿ.ಕೆ.ಶಿವಕುಮಾರ್

Update: 2024-08-01 17:05 GMT

ಬೆಂಗಳೂರು: ‘ಮುಡಾ’ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಹೋರಾಟಗಾರ ಟಿ.ಜೆ.ಅಬ್ರಾಹಂ ಎಂಬವರ ದೂರಿನನ್ವಯ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಜು.26ರಂದು ನೀಡಿರುವ ಶೋಕಾಸ್ ನೋಟೀಸ್ ಅನ್ನು ಹಿಂಪಡೆಯಬೇಕು’ ಎಂದು ರಾಜ್ಯ ಸಚಿವ ಸಂಪುಟ, ರಾಜ್ಯಪಾಲರಿಗೆ ಸಲಹೆ ನೀಡಲು ತೀರ್ಮಾನಿಸಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ತೀರ್ಮಾನದ ಬಗ್ಗೆ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಚಿವ ಸಂಪುಟ ಸಭೆಯಲ್ಲಿ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗೆ ರಾಜ್ಯಪಾಲರು ನೀಡಿರುವ ಶೋಕಾಸ್ ನೋಟೀಸ್ ವಿಚಾರವಾಗಿ ವಿಸ್ತೃತವಾಗಿ ಚರ್ಚೆ ನಡೆಸಿದ್ದೇವೆ ಎಂದು ಹೇಳಿದರು.

ಅದೇ ರೀತಿ, ಬೇರೆ ಬೇರೆ ರಾಜ್ಯಗಳಲ್ಲಿ ನಡೆದಿರುವ ಪ್ರಕರಣ, ಇತರೆ ಪ್ರಕರಣಗಳಲ್ಲಿ ನ್ಯಾಯಾಲಯದ ಮಾರ್ಗದರ್ಶನ ಹಾಗೂ ತೀರ್ಪು, ಇಂತಹ ಪರಿಸ್ಥಿತಿಯಲ್ಲಿ ಬೇರೆ ರಾಜ್ಯಗಳಲ್ಲಿ ಯಾವ ಸರಕಾರಗಳು ಯಾವ ರೀತಿ ನಡೆದುಕೊಂಡಿವೆ ಎಂದು ಚರ್ಚೆ ಮಾಡಿದ್ದೇವೆ ಎಂದು ಅವರು ತಿಳಿಸಿದರು.

ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುವ ಪರಿಸ್ಥಿತಿ ನಿರ್ಮಾಣ: ಈ ಪ್ರಕರಣದಲ್ಲಿ ಮುಖ್ಯಮಂತ್ರಿಯಿಂದ ಅಕ್ರಮ ನಡೆದಿರುವ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳಾಗಲಿ, ತನಿಖಾ ಸಂಸ್ಥೆಗಳ ವಿಚಾರಣೆಯಾಗಲಿ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಸಿಎಂ ವಿಚಾರಣೆ ನಡೆಸಲು ಹೇಗೆ ಸಾಧ್ಯ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹುದೊಡ್ಡ ಬಹುಮತದೊಂದಿಗೆ ಆಯ್ಕೆಯಾದ ರಾಜ್ಯದ ಮುಖ್ಯಮಂತ್ರಿಯನ್ನು ಕೆಳಗಿಳಿಸಲು ಷಡ್ಯಂತ್ರ ನಡೆಯುತ್ತಿದೆ. ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಅವರು ಕಿಡಿಕಾರಿದರು.

ರಾಜ್ಯದ ಜನತೆ 136 ಸ್ಥಾನಗಳನ್ನು ನೀಡಿ ನಮ್ಮ ಸರಕಾರವನ್ನು ಅಧಿಕಾರಕ್ಕೆ ತಂದಿದ್ದಾರೆ. ಅಬ್ರಹಾಂ ಹಿನ್ನೆಲೆ ಎಲ್ಲರಿಗೂ ಗೊತ್ತಿದೆ. ಆತ ಯಾರ ವಿರುದ್ಧ ಕೇಸ್ ದಾಖಲಿಸಿದ್ದಾನೆ, ಸುಪ್ರೀಂ ಕೋರ್ಟ್ ಎಷ್ಟು ದಂಡ ವಿಧಿಸಿದೆ ಎಂಬುದು ನಿಮ್ಮೆಲ್ಲರಿಗೂ ಗೊತ್ತಿದೆ. ಆತ ನೀಡಿರುವ ದೂರನ್ನು ಇಟ್ಟುಕೊಂಡು ರಾಜ್ಯಪಾಲರನ್ನು ಬಳಸಿಕೊಂಡು ರಾಜ್ಯ ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ದೂರಿದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜು.5ರಂದು ರಾಜ್ಯಪಾಲರು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿ ಆಧರಿಸಿ ಪ್ರಕರಣದ ಕುರಿತ ವರದಿ ನೀಡುವಂತೆ ಮುಖ್ಯಕಾರ್ಯದರ್ಶಿಗೆ ಕೇಳಿದ್ದರು. ಜು.15ರಂದು ರಾಜ್ಯಪಾಲರು ಮುಖ್ಯಕಾರ್ಯದರ್ಶಿಗೆ ಪತ್ರ ಬರೆದು, ‘ಕರ್ನಾಟಕ ರಾಜ್ಯ ರೈತ ಒಕ್ಕೂಟವು ಮುಡಾದಲ್ಲಿ ಅಕ್ರಮವಾಗಿ ನಿವೇಶನ ಹಂಚಿಕೆ ಮಾಡಿದ್ದು, ಈ ಪ್ರಕರಣವನ್ನು ನ್ಯಾಯಾಂಗ ತನಿಖೆ ನಡೆಸಬೇಕು’ ಎಂದು ಮನವಿ ಸಲ್ಲಿಸಿದ್ದು, ಆದಷ್ಟು ಬೇಗ ವರದಿ ನೀಡುವಂತೆ ಕೇಳಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಹಿಂದಿನ ಉದ್ದೇಶವೇನು?: ರಾಜ್ಯಪಾಲರ ಪತ್ರವನ್ನು ಗಂಭೀರವಾಗಿ ಪರಿಗಣಿಸಿ ಮುಖ್ಯಮಂತ್ರಿ ಈ ಪ್ರಕರಣದ ತನಿಖೆಯನ್ನು ಹೈಕೋರ್ಟ್ ನಿವೃತ್ತ ನ್ಯಾ.ಪಿ.ಎನ್ ದೇಸಾಯಿ ನೇತೃತ್ವದ ವಿಚಾರಣಾ ಆಯೋಗ ರಚಿಸಿ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ. ಇದಾದ ನಂತರ ಅಬ್ರಾಹಂ ಜು.26ರಂದು ರಾಜ್ಯಪಾಲರಿಗೆ ಸುಮಾರು 200 ಪುಟಗಳ ದಾಖಲೆಗಳೊಂದಿಗೆ ದೂರು ನೀಡುತ್ತಾರೆ. ಅದೇ ದಿನ ಮುಖ್ಯ ಕಾರ್ಯದರ್ಶಿ ರಾಜ್ಯಪಾಲರಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 70 ಪುಟಗಳ ವರದಿಯನ್ನು ಸಲ್ಲಿಸಿದ್ದಾರೆ. ರಾಜ್ಯಪಾಲರು ದೂರು ಹಾಗೂ ಮುಖ್ಯ ಕಾರ್ಯದರ್ಶಿಯ ವರದಿಯನ್ನು ಸಂಪೂರ್ಣವಾಗಿ ಪರಿಶೀಲಿಸುವ ಮುನ್ನವೇ, ಮುಖ್ಯಮಂತ್ರಿಗೆ ಶೋಕಾಸ್ ನೋಟಿಸ್ ನೀಡಿರುವುದ ಹಿಂದಿನ ಉದ್ದೇಶ ಏನು? ಎಂದು ಅವರು ಪ್ರಶ್ನಿಸಿದರು.

ಇಷ್ಟು ತರಾತುರಿಯಲ್ಲಿ ಇಂತಹ ತೀರ್ಮಾನ ಮಾಡುತ್ತಿರುವುದೇಕೆ? ನಮ್ಮ ಅನುಭವದ ಪ್ರಕಾರ ಯಾವುದೇ ದೂರು ದಾಖಲಾದರೂ ತನಿಖೆಗೆ ಆದೇಶ ನೀಡುವ ಮುನ್ನ ಆರೋಪ ಸಾಬೀತುಪಡಿಸಲು ಪೂರಕ ಸಾಕ್ಷ್ಯಾಧಾರಗಳು ಬೇಕು. ಅಥವಾ ಯಾವುದಾದರೂ ತನಿಖಾ ಸಂಸ್ಥೆಗಳು ಅನುಮತಿಗೆ ಮನವಿ ನೀಡುತ್ತಾರೆ. ಆದರೆ ಈ ಪ್ರಕರಣದಲ್ಲಿ ತನಿಖೆ ಮಾಡುವ ಮುನ್ನವೇ ಶೋಕಾಸ್ ನೋಟೀಸ್ ನೀಡಲಾಗಿದೆ. ಇದು ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಕಗ್ಗೊಲೆಯಲ್ಲವೇ? ಎಂದು ಶಿವಕುಮಾರ್ ಪ್ರಶ್ನಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯರ ಪತ್ನಿ ಪಾರ್ವತಿ ಅವರ ಸಹೋದರ ಡಿನೋಟಿಫಿಕೇಷನ್ ಆದ ಐದಾರು ವರ್ಷಗಳ ನಂತರ ಭೂಮಿ ಖರೀದಿ ಮಾಡಿ ಅದನ್ನು ತವರು ಮನೆಯ ಅರಿಷಿನ ಕುಂಕುಮದ ಕಾಣಿಕೆಯಾಗಿ ದಾನ ಪತ್ರದ ಮೂಲಕ ನೀಡಿದ್ದಾರೆ. ಈ ಜಮೀನನ್ನು ಮುಡಾ ಸ್ವಾಧೀನಪಡಿಸಿಕೊಳ್ಳದೇ, ಒತ್ತುವರಿ ಮಾಡಿಕೊಂಡು ಬಳಸಿಕೊಂಡಿದೆ. ಆಗ ಪಾರ್ವತಿ ಅವರು ಅಕ್ರಮವಾಗಿ ನಮ್ಮ ಜಾಗ ಒತ್ತುವರಿ ಮಾಡಿ ಬೇರೆಯವರಿಗೆ ಹಂಚಿಕೆ ಮಾಡಲಾಗಿದೆ ಹೀಗಾಗಿ ನಮಗೆ ಪರಿಹಾರ ನೀಡಿ ಎಂದು ಕೇಳಿದ್ದಾರೆ ಎಂದು ಶಿವಕುಮಾರ್ ತಿಳಿಸಿದರು.

ಮುಡಾದವರಿಗೆ ತಮ್ಮ ತಪ್ಪಿನ ಅರಿವಾಗಿ ಪಾರ್ವತಿಯವರ ಜತೆ ಚರ್ಚೆ ಮಾಡಿ 50:50 ಅನುಪಾತದಲ್ಲಿ ಪರಿಹಾರ ನೀಡಲು ತೀರ್ಮಾನಿಸಿದ್ದಾರೆ. ಮುಡಾದ ಮನವಿ ಆಧಾರದ ಮೇಲೆ ಪಾರ್ವತಿಯವರು ತಮ್ಮ ಜಮೀನನ್ನು ಮುಡಾಕ್ಕೆ ಬಿಟ್ಟುಕೊಡುತ್ತಾರೆ. ಈ ತೀರ್ಮಾನ ಮಾಡಿದಾಗ ಮುಡಾದಲ್ಲಿ ಎಲ್ಲ ಪಕ್ಷದವರು ಇದ್ದರು. ಇದೆಲ್ಲವೂ ಬಿಜೆಪಿ ಸರಕಾರದ ಅವಧಿಯಲ್ಲಿ ಆಗಿದೆ. ಆಗ ಸಿದ್ದರಾಮಯ್ಯ ಅಧಿಕಾರದಲ್ಲಿ ಇರಲಿಲ್ಲ. ಹೀಗಿರುವಾಗ ಸ್ವಜನ ಪಕ್ಷಪಾತ ಹೇಗಾಗುತ್ತದೆ ಎಂದು ಅವರು ವಿವರಿಸಿದರು.

ಮೈಸೂರಿನ ಮತ್ತೊಂದು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಶೇ.50ರಷ್ಟು ಪರಿಹಾರ ನೀಡಬೇಕು ಎಂದು ತೀರ್ಪು ನೀಡಿತ್ತು. ನಗರಾಭಿವೃದ್ಧಿ ಇಲಾಖೆ ಈ ವಿಚಾರದಲ್ಲಿ ಕಾನೂನು ಮಾಡಿಕೊಂಡಿದ್ದಾರೆ. ಪಾರ್ವತಿ ತಮ್ಮ ಅರ್ಜಿಯಲ್ಲಿ ಇಂತಹುದೇ ಜಾಗದಲ್ಲಿ ಪರಿಹಾರ ನೀಡಿ ಎಂದು ಎಲ್ಲಿಯೂ ಕೇಳಿಲ್ಲ. ಇದು ಮುಡಾ ತೀರ್ಮಾನ. ಇದರಲ್ಲಿ ಅವರ ತಪ್ಪೇನಿದೆ? ಎಂದು ಅವರು ಪ್ರಶ್ನಿಸಿದರು.

ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಸಹಿ ಹಾಕಿದ್ದಾರಾ? ಅಥವಾ ಯಾರ ಮೇಲಾದರೂ ಒತ್ತಡ ಹಾಕಿದ್ದಾರಾ? ಪಾರ್ವತಿಯವರು ತಮ್ಮ ಜಮೀನು ಕಳೆದುಕೊಂಡಿದ್ದಕ್ಕೆ ಪರಿಹಾರ ಪಡೆಯುವ ಹಕ್ಕು ಹೊಂದಿಲ್ಲವೇ? ಇಲ್ಲಿ ಆಗಿರುವ ಅಪರಾಧವಾದರೂ ಏನು? ಎಂದು ಉಪ ಮುಖ್ಯಮಂತ್ರಿ ಕೇಳಿದರು.

ಈ ಪ್ರಕರಣವನ್ನು ರಾಜಕೀಯ ಪ್ರಚಾರಕ್ಕೆ ಬಳಸಿಕೊಂಡು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲಾಗಿದೆ. ಅವರು ಕೇವಲ ರಾಜಕೀಯ ಮಾಡುತ್ತಿದ್ದು, ಅವರು ರಾಜಕೀಯ ಮಾಡಲಿ ನಮ್ಮ ಅಭ್ಯಂತರವಿಲ್ಲ. ಅಂತಿಮವಾಗಿ ದೇಶದಲ್ಲಿ ಸಂವಿಧಾನ ಹಾಗೂ ಕಾನೂನು ಇದೆ. ನಾವು ಅದರಂತೆ ನಡೆಯುತ್ತೇವೆ ಎಂದು ಅವರು ತಿಳಿಸಿದರು

ಬಿಜೆಪಿ ಕಾಲದಲ್ಲಿ ಸಾವಿರಾರು ನಿವೇಶನಗಳನ್ನು ಹಂಚಿಕೆ ಮಾಡಿದ್ದು ಯಾರು? ಅವರು ಕಾನೂನುಬಾಹಿರವಾಗಿ ಮಾಡಿದ್ದರೇ? ಈ ಪ್ರಕರಣದ ಬಗ್ಗೆ ಎರಡು ವರ್ಷಗಳ ಹಿಂದೆಯೇ ಮಾಧ್ಯಮಗಳಲ್ಲಿ ಬಂದಾಗ, ಅಧಿಕಾರದಲ್ಲಿದ್ದ ಬಿಜೆಪಿ ಯಾಕೆ ಮಾತನಾಡಲಿಲ್ಲ? ಈ ರೀತಿ ಸುಳ್ಳು ಪ್ರಕರಣವನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿಯನ್ನು ಕೆಳಗಿಳಿಸಿ, ಸರಕಾರವನ್ನೇ ತೆಗೆಯಲು ಮುಂದಾಗುವುದು ಎಷ್ಟು ಸರಿ? ಎಂದು ಶಿವಕುಮಾರ್ ಕೇಳಿದರು.

ದೂರು ವಜಾಗೊಳಿಸಿ: ಅಬ್ರಾಹಂ ನನ್ನ ವಿರುದ್ಧ ಸೇರಿದಂತೆ ಯಡಿಯೂರಪ್ಪ ಹಾಗೂ ಇತರ ನಾಯಕರ ವಿರುದ್ಧ ದೂರು ನೀಡಿದ್ದಾರೆ. ಎಷ್ಟು ಪ್ರಕರಣಗಳಲ್ಲಿ ನ್ಯಾಯಾಲಯ ಅವರ ವಿರುದ್ಧ ತೀರ್ಪು ನೀಡಿದೆ. ಮುಡಾದವರು ಪಾರ್ವತಿ ಅವರ ಬಳಿ ಒಪ್ಪಂದ ಮಾಡಿಕೊಂಡಿರುವುದೇಕೆ? ಇಲ್ಲಿ ಮುಖ್ಯಮಂತ್ರಿಯಿಂದ ಅಕ್ರಮ ನಡೆದಿರುವುದಕ್ಕೆ ಒಂದು ಸಣ್ಣ ದಾಖಲೆ ಇದೆಯೇ? ಹೀಗಾಗಿ ಈ ವಿಚಾರವಾಗಿ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ, ರಾಜ್ಯಪಾಲರಿಗೆ ಶೋಕಾಸ್ ನೋಟಿಸ್ ಹಿಂಪಡೆದು, ಅಬ್ರಾಹಂ ಅವರ ದೂರನ್ನು ವಜಾಗೊಳಿಸುವಂತೆ ಸಲಹೆ ನೀಡಲು ತೀರ್ಮಾನಿಸಿದ್ದೇವೆ ಎಂದು ಅವರು ತಿಳಿಸಿದರು.

ರಾಜ್ಯಪಾಲರು ನಮ್ಮ ಸಲಹೆ ಸ್ವೀಕರಿಸುವ ವಿಶ್ವಾಸವಿದೆ: ರಾಜ್ಯಪಾಲರು ಈ ಪ್ರಕರಣವನ್ನು ಸೂಕ್ಷ್ಮವಾಗಿ ಪರಿಗಣಿಸಲಿದ್ದಾರೆ ಎಂಬ ಭರವಸೆ ನಮಗಿದೆ. ನಾವು ಅವರಿಗೆ ಎಲ್ಲ ಮಾಹಿತಿಯನ್ನು ವಿವರವಾಗಿ ನೀಡಿದ್ದೇವೆ. ಬೇರೆ ರಾಜ್ಯಗಳ ಪ್ರಕರಣ ನ್ಯಾಯಾಲಯದ ತೀರ್ಪುಗಳು ನಮ್ಮ ಮುಂದಿವೆ. ಇಲ್ಲಿ ಕಾನೂನು, ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ ಅಡಗಿದ್ದು, ರಾಜ್ಯಪಾಲರು ಬಹಳ ಲೆಕ್ಕಾಚಾರದಿಂದ ಹೆಜ್ಜೆ ಇಡಬೇಕಾಗುತ್ತದೆ ಎಂದು ಅವರು ಹೇಳಿದರು.

ರಾಜ್ಯಪಾಲರ ಮೇಲೆ ಏನೇ ಒತ್ತಡ ಇದ್ದರೂ ತಮ್ಮ ಸ್ಥಾನದ ಘನತೆ ಹಾಳಾಗದಂತೆ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಮುಖ್ಯಕಾರ್ಯದರ್ಶಿ ಈಗಾಗಲೇ ವಿಸ್ತೃತ ವರದಿ ನೀಡಿದ್ದು, ಮುಖ್ಯಮಂತ್ರಿಯು ವಿವರವಾಗಿ ಉತ್ತರ ನೀಡಲಿದ್ದಾರೆ ಎಂದು ಶಿವಕುಮಾರ್ ತಿಳಿಸಿದರು.

ಈ ಪ್ರಕರಣದಲ್ಲಿ ವಿಚಾರಣೆಗೆ ಅವಕಾಶವೇ ಇಲ್ಲ. ಈ ಪ್ರಕರಣದಲ್ಲಿ ವರದಿ ಕೇಳಿ ಪಡೆಯಬಹುದಾಗಿದೆ. ತನಿಖೆ ನಡೆದು ಅದರಲ್ಲಿ ಮುಖ್ಯಮಂತ್ರಿ ಕೈವಾಡವಿದೆ ಎಂಬುದು ಸಾಬೀತಾದರೆ ಆಗ ವಿಚಾರಣೆಗೆ ಅವಕಾಶ ನೀಡಬಹುದು. ಯಾರೋ ದೂರು ನೀಡಿದ ಕಾರಣಕ್ಕೆ ವಿಚಾರಣೆಗೆ ನೀಡಲು ಬರುವುದಿಲ್ಲ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಕಾನೂನು ಸಚಿವ ಎಚ್.ಕೆ.ಪಾಟೀಲ್, ಸಚಿವರಾದ ಕೃಷ್ಣಬೈರೇಗೌಡ, ಎಂ.ಬಿ.ಪಾಟೀಲ್, ಪ್ರಿಯಾಂಕ್ ಖರ್ಗೆ, ಚಲುವರಾಯಸ್ವಾಮಿ, ಸಿಎಂ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News