‘ಚನ್ನಪಟ್ಟಣ’ ಕ್ಷೇತ್ರದಲ್ಲಿ ಯಾರೇ ನಿಂತರೂ ನಾನೇ ಅಭ್ಯರ್ಥಿ : ಡಿ.ಕೆ.ಶಿವಕುಮಾರ್

Update: 2024-10-19 13:02 GMT

ಬೆಂಗಳೂರು : ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಯಾರೇ ನಿಂತರೂ ನಾನೇ ಅಭ್ಯರ್ಥಿ ಎಂದು ನಮ್ಮ ಪಕ್ಷದ ನಾಯಕರುಗಳು ಹಾಗೂ ಕಾರ್ಯಕರ್ತರಿಗೆ ಹೇಳಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಶನಿವಾರ ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆ ಪಕ್ಷದ ಅಭ್ಯರ್ಥಿ ಆಯ್ಕೆ ಸಂಬಂಧ ಕ್ಷೇತ್ರದ ನಾಯಕರು ಹಾಗೂ ಕಾರ್ಯಕರ್ತರ ಸಭೆ ಬಳಿಕ ಮಾತನಾಡಿದ ಅವರು, ‘ಚನ್ನಪಟ್ಟಣ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರೆಲ್ಲ ನನ್ನ ಜನ. ಪಕ್ಷದಿಂದ ಯಾರು ನಿಲ್ಲುತ್ತಾರೆಂದು ನೋಡಬೇಡಿ. ಯಾರೇ ನಿಂತರೂ ನಾನೇ ಅಭ್ಯರ್ಥಿ ಎಂದು ಕೆಲಸ ಮಾಡಿ’ ಎಂದು ಸಲಹೆ ನೀಡಿದರು.

‘ವಿಪಕ್ಷ ನಾಯಕರು ಹೆದರಿ ಶರಣಾಗುತ್ತಿದ್ದಾರೆ. ಅವರು ಅಷ್ಟು ದುರ್ಬಲರಾಗುತ್ತಾರೆಂದು ನಾನು ಭಾವಿಸಿರಲಿಲ್ಲ. ರಾತ್ರಿಯೆಲ್ಲಾ ಸಭೆಗಳು ನಡೆದಿವೆ. ಜೆಡಿಎಸ್‍ನವರೇ ಸೀಟು ಬಿಟ್ಟುಕೊಡುತ್ತಿದ್ದಾರೆಂದು ಯಾರೋ ಕರೆ ಮಾಡಿ ಹೇಳಿದರು. ಅದು ಎಷ್ಟು ಸತ್ಯವೋ ನನಗೆ ಗೊತ್ತಿಲ್ಲ. ಇರಲಿ, ಅವರು ಏನಾದರೂ ಮಾಡಿಕೊಳ್ಳಲಿ’ ಎಂದು ಶಿವಕುಮಾರ್ ತಿಳಿಸಿದರು.

ರಾಜಕಾರಣ ಸಾಧ್ಯತೆಗಳ ಕಲೆ:ಕ್ಷೇತ್ರಕ್ಕೆ ಅಚ್ಚರಿಯ ಅಭ್ಯರ್ಥಿ ಬರುತ್ತಾರೆಂಬ ಬಗ್ಗೆ ನನಗೆ ಗೊತ್ತಿಲ್ಲ, ನೋಡೋಣ. ಮೊದಲು ನಮ್ಮ ಕಾರ್ಯಕರ್ತರ ಬಳಿ ನಾನು ಚರ್ಚೆ ಮಾಡುತ್ತಿದ್ದೇನೆ. ಅವರಿಗೆ ಏನು ಹೇಳಬೇಕೋ ಹೇಳುತ್ತಿದ್ದೇನೆ. ಅವರ ಅಭಿಪ್ರಾಯ ಕೇಳಿದ್ದೇನೆ. ರಾಜಕಾರಣ ಸಾಧ್ಯತೆಗಳ ಕಲೆ. ಯಾರು ಬೇಕಾದರೂ ಗೆಲ್ಲಬಹುದು ಯಾರೂ ಗಾಬರಿಯಾಗುವುದು ಬೇಡ. ಪ್ರಧಾನಿ ಕ್ಷೇತ್ರವನ್ನೇ ನಾವು ರಾಮನಗರದಲ್ಲಿ ಗೆದ್ದಿದ್ದೇವೆ. ಹೀಗಾಗಿ ಕಂಗೆಡಬೇಡಿ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿದರು ನೀವು ತಯಾರಿರಬೇಕೆಂದು ತಿಳಿಸಿದ್ದೇನೆ ಎಂದು ಶಿವಕುಮಾರ್ ನುಡಿದರು.

ಕಾರ್ಯಕರ್ತರು ಸುರೇಶ್ ಹೆಸರು ಹೇಳುತ್ತಾರೆ. ಸುರೇಶ್‍ಗೂ ನಾನು ಜವಾಬ್ದಾರಿ ನೀಡುತ್ತೇನೆ. ಅವರದೂ ಹಲವಾರು ಲೆಕ್ಕಾಚಾರ ಇರುತ್ತದೆ, ನೋಡೋಣ. ನಾವು ಯಾರ ಮನಸನ್ನು ಒಲಿಸುವುದಿಲ್ಲ. ನಾವು ಇವರೇ ನಮ್ಮ ಅಭ್ಯರ್ಥಿ ಎಂದು ಹೇಳಿದರೆ ಎಲ್ಲರೂ ಒಪ್ಪುತ್ತಾರೆ. ಜೆಡಿಎಸ್ ಗೆದ್ದಿರುವ ಕ್ಷೇತ್ರ ಬಿಟ್ಟುಕೊಡುತ್ತಿದ್ದಾರೆಂದರೆ ಹೆದರಿದ್ದಾರೆಂದು ಅರ್ಥವಲ್ಲವೇ?, ಚನ್ನಪಟ್ಟಣದವರು ನನ್ನ ಜನ. ನಾನು ಹೋಗದೆ ಇನ್ಯಾರು ಹೋಗುತ್ತಾರೆ. ಅವರ ಬಗ್ಗೆ ನನಗೆ ವಿಶ್ವಾಸವಿದೆ. ಅವರ ಸೇವೆ ಮಾಡಲು ನಾನು ಹೋಗುತ್ತಿದ್ದೇನೆ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News