ಅಕ್ರಮ, ಕಳಪೆ ಗುಣಮಟ್ಟದ ಕಟ್ಟಡಗಳ ತೆರವು ಕಾರ್ಯ ಪ್ರಗತಿ : ಡಿ.ಕೆ.ಶಿವಕುಮಾರ್

Update: 2024-10-26 15:54 GMT

ಡಿ.ಕೆ.ಶಿವಕುಮಾರ್

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಅಕ್ರಮವಾಗಿ ನಿರ್ಮಾಣವಾಗುತ್ತಿರುವ ಹಾಗೂ ಕಳಪೆ ಗುಣಮಟ್ಟದ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯ ಮುಂದುವರಿಯುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಶನಿವಾರ ಮುಖ್ಯಮಂತ್ರಿಗಳ ಗೃಹಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ರಮ ಕಟ್ಟಡ ನಿರ್ಮಾಣ ತಡೆಯಲು ನಾವು ಮುಂದಾಗಿದ್ದೇವೆ. ಈ ಹಿಂದೆ ಅಧಿಕಾರಿಗಳಿಗೆ ಇದ್ದ ಅಧಿಕಾರವನ್ನು ಹಿಂದಿನ ಸರಕಾರ ಮೊಟಕುಗೊಳಿಸಿತ್ತು. ಈಗ ನಮ್ಮ ಸರಕಾರ ಬಿಬಿಎಂಪಿ, ಬಿಡಿಎ, ಬಿಎಂಆರ್‍ಡಿಎ ಅಧಿಕಾರಿಗಳಿಗೆ ಈ ಅಕ್ರಮ ಕಟ್ಟಡ ನಿರ್ಮಾಣ ತಡೆಯಲು ಅಧಿಕಾರ ನೀಡುತ್ತಿದ್ದೇವೆ ಎಂದರು.

ಕೂಡಲೇ ಅಕ್ರಮ ಆಸ್ತಿಗಳ ನೋಂದಣಿಯನ್ನು ನಿಲ್ಲಿಸಲಾಗುವುದು. ಇದೇ ವೇಳೆ ಒತ್ತುವರಿ ತೆರವುಗೊಳಿಸುವ ಬಗ್ಗೆಯೂ ಗಮನ ಹರಿಸಲಾಗುವುದು. ಅಕ್ರಮ ಹಾಗೂ ಕಳಪೆ ಗುಣಮಟ್ಟದ ಕಟ್ಟಡಗಳ ತೆರವುಗೊಳಿಸುವ ವಿಚಾರದಲ್ಲಿ ನಾವು ಪ್ರಮುಖ ತೀರ್ಮಾನ ಕೈಗೊಂಡಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ವಿವರಿಸಿದರು.

ಬೆಂಗಳೂರು ನಗರದಲ್ಲಿ ಕೆರೆಯಲ್ಲಿ ಇಬ್ಬರು ಮಕ್ಕಳು ಮುಳುಗಿದ್ದು ಹಾಗೂ ಕಳಪೆ ಗುಣಮಟ್ಟದ ಕಟ್ಟಡ ಕುಸಿತ ಹೊರತಾಗಿ ಮಳೆಯಿಂದಾಗಿ ಯಾವುದೇ ಪ್ರಾಣಹಾನಿಯಾಗಿಲ್ಲ. ಮಳೆಯಿಂದ ಹಾನಿಗೊಳಗಾಗುವ ಪ್ರದೇಶಗಳಲ್ಲಿನ ಜನರನ್ನು ಸ್ಥಳಾಂತರ ಮಾಡಿ, ಅವರನ್ನು ಸುರಕ್ಷಿತವಾಗಿ ಹೋಟೆಲ್‍ಗಳಲ್ಲಿ ಇರಿಸಿ ಅವರಿಗೆ ಊಟ ಸೇರಿದಂತೆ ಎಲ್ಲಾ ವ್ಯವಸ್ಥೆ ನೀಡಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು

ಒಂದೇ ಬಾರಿಗೆ ಮಳೆನೀರುಗಾಲುವೆ ನಿರ್ಮಾಣ ಮಾಡುತ್ತಿದ್ದೇವೆ. ಹೀಗಾಗಿ ರಾಜಕಾಲುವೆ ಅಕ್ಕಪಕ್ಕ 50 ಅಡಿ ಜಾಗ ಬಿಟ್ಟು ಅಲ್ಲಿ ರಸ್ತೆ ನಿರ್ಮಾಣ ಮಾಡಲು ಮುಂದಾಗಿದ್ದೇವೆ. ಈ ರಸ್ತೆ ನಿರ್ಮಾಣದಿಂದ ಕಟ್ಟಡಗಳಿಗೂ ರಕ್ಷಣೆ ಸಿಗುತ್ತದೆ ಹಾಗೂ ಕಾಲುವೆಗಳ ಸ್ವಚ್ಛ ಕಾರ್ಯಕ್ಕೂ ನೆರವಾಗಲಿದೆ. ಮೊದಲ ಹಂತದಲ್ಲಿ 300 ಕಿ.ಮೀ. ರಸ್ತೆ ನಿರ್ಮಾಣ ಮಾಡಲಾಗುವುದು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News