ಪೆನ್‍ಡ್ರೈವ್ ಹಂಚುವಂತಹ ಚಿಲ್ಲರೆ ಕೆಲಸವನ್ನು ನಾನು ಮಾಡುವುದಿಲ್ಲ: ಡಿ.ಕೆ. ಶಿವಕುಮಾರ್

Update: 2024-04-30 14:23 GMT

ಬೆಂಗಳೂರು: ಪೆನ್‍ಡ್ರೈವ್ ಹಂಚುವಂತಹ ಚಿಲ್ಲರೆ ಕೆಲಸವನ್ನು ನಾನು ಮಾಡುವುದಿಲ್ಲ. ನಾನೇನಿದ್ದರೂ ಎದುರಾಳಿಗಳನ್ನು ಚುನಾವಣೆಯಲ್ಲಿ ನೇರವಾಗಿ ಎದುರಿಸುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಮಂಗಳವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಮ್ಮ ವಿರುದ್ಧ ಮಾಡಿರುವ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಪೆನ್‍ಡ್ರೈವ್ ಇದೆ ಎಂದು ಹೆದರಿಸಲ್ಲ. ವಿಧಾನಸಭೆಗೆ ಬನ್ನಿ ಎಂದು ಕರೆದಿದ್ದೇನೆ. ಇದು ಹಳೆ ವಿಡಿಯೋ ಎಂದು ರೇವಣ್ಣ ಹೇಳಿದ್ದಾರೆ. ಆ ಮೂಲಕ ಅವರೇ ಒಪ್ಪಿಕೊಂಡಿದ್ದಾರೆ ಎಂದರು.

ಉಪ್ಪು ತಿಂದವನು ನೀರು ಕುಡಿಯಲೇಬೇಕು ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಪ್ರಜ್ವಲ್ ಕುಟುಂಬ ಸದಸ್ಯ ಅಲ್ಲ ಅಂತ ಹೇಳಿದರೆ ಹೇಗೆ ಒಪ್ಪಲು ಆಗುತ್ತದೆ?. ಎಚ್.ಡಿ.ಎಂದರೆ ಏನು?. ಎಚ್.ಡಿ. ರೇವಣ್ಣ ಎಂದರೆ ಹೊಳೆನರಸೀಪುರ ದೇವೇಗೌಡರ ಮಗ ಅಂತ. ಎಚ್.ಡಿ.ಕುಮಾರಸ್ವಾಮಿ ಎಂದರೆ ಹೊಳೆನರಸೀಪುರ ದೇವೇಗೌಡರ ಮಗ ಅಂತ ಎಂದು ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದರು.

ಪ್ರಜ್ವಲ್‍ನನ್ನು ಪಕ್ಷದಿಂದ ವಜಾ ಮಾಡಲಿ ಇಲ್ಲವೇ ಒಳಗಿಟ್ಟುಕೊಳ್ಳಲಿ. ಅದೆಲ್ಲಾ ಕಣ್ಣೊರೆಸುವ ನಾಟಕ. ರಾಜಕಾರಣದಲ್ಲಿ ಅಮಾನತು ಏನು ಎಂದು ನನಗೂ ಗೊತ್ತಿದೆ ಎಂದು ಶಿವಕುಮಾರ್ ತಿಳಿಸಿದರು.

ಅಶೋಕ್ ಬೆನ್ನುಮೂಳೆ ಇಲ್ಲದ ನಾಯಕ..!

ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗುವಾಗ ಯಾರು ಜೊತೆಗಿದ್ದರು. ಯಾರು ಯಾರಿಗೆ ಕರೆ ಮಾಡಿದ್ದರು? ಈ ಪ್ರಶ್ನೆಗಳನ್ನು ಅವರಿಗೆ ಕೇಳಿ. ಈ ವಿಚಾರದಲ್ಲಿ ಬಿಜೆಪಿಯವರ ನಿಲುವು ಏನೆಂದು ಹೇಳಬೇಕು. ಪ್ರಹ್ಲಾದ್ ಜೋಶಿ, ಸುನೀಲ್ ಕುಮಾರ್, ಯತ್ನಾಳ್, ಬೊಮ್ಮಾಯಿ, ಶೋಭಕ್ಕ ಯಾಕೆ ಮಾತಾಡುತ್ತಿಲ್ಲ?. ವಿಪಕ್ಷ ನಾಯಕ ಆರ್.ಅಶೋಕ್ ಓರ್ವ ಬೆನ್ನುಮೂಳೆ ಇಲ್ಲದ ನಾಯಕ ಎಂದು ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News