ಕನ್ನಡದಲ್ಲಿಯೇ ಔಷಧಿ ಚೀಟಿ ಬರೆಯಲು ಆದೇಶ ಜಾರಿ ಮಾಡಿ: ಆರೋಗ್ಯ ಸಚಿವರಿಗೆ ಡಾ.ಪುರುಷೋತ್ತಮ ಬಿಳಿಮಲೆ ಮನವಿ

Update: 2024-09-09 15:39 GMT

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ

ಬೆಂಗಳೂರು: ವೈದ್ಯರು ಔಷಧಿ ಚೀಟಿಗಳನ್ನು ಕನ್ನಡಭಾಷೆಯಲ್ಲೇ ಬರೆದು ಭಾಷೆಯ ಬೆಳವಣಿಗೆಗೆ ಸಹಕರಿಸಬೇಕೆಂದು ನೀಡಿದ ಕರೆಗೆ ನೂರಾರು ವೈದ್ಯರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಹೀಗಾಗಿ ಸರಕಾರಿ ವೈದ್ಯರೆಲ್ಲರೂ ಕನ್ನಡದಲ್ಲಿಯೇ ಔಷಧಿ ಚೀಟಿ ಬರೆಯಬೇಕೆಂದು ಸರಕಾರದ ಆದೇಶ ಜಾರಿ ಮಾಡಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಸರಕಾರವನ್ನು ಆಗ್ರಹಿಸಿದ್ದಾರೆ.

ಸೋಮವಾರ ಈ ಕುರಿತಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಪತ್ರ ಬರೆದಿರುವ ಪುರುಷೋತ್ತಮ ಬಿಳಿಮನೆ, ರಾಜ್ಯ ಸರಕಾರದ ಅಧೀನದಲ್ಲಿರುವ ಎಲ್ಲ ವೈದ್ಯರು ಇಂತಹ ಮಾನಸಿಕತೆಗೆ ತೆರೆದುಕೊಂಡಲ್ಲಿ ಕನ್ನಡ ಭಾಷೆಯ ಬೆಳವಣಿಗೆಗೆ ಒಂದು ಮಹತ್ವದ ದಾರಿ ದೊರಕಿದಂತೆ ಆಗುತ್ತದೆ. ಸರಕಾರದ ಆದೇಶ ಈ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗುತ್ತದೆ ಎಂದು ಹೇಳಿದ್ದಾರೆ.

ವೈದ್ಯರನ್ನು ಸತ್ಕರಿಸಿ: ಕನ್ನಡ ಪ್ರಿಯ ವೈದ್ಯರುಗಳನ್ನು, ಅವರ ಭಾಷೆ ಪರವಾದ ಕ್ರಿಯಾಶೀಲ ಚಟುವಟಿಕೆಗಳನ್ನು ಗುರುತಿಸಿ ಪ್ರತಿವರ್ಷ ವೈದ್ಯರ ದಿನದಂದು ಅಭಿನಂದಿಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ತಾಲೂಕು/ಜಿಲ್ಲೆ/ರಾಜ್ಯ ಹಂತದಲ್ಲಿ ಪ್ರತಿವರ್ಷ ಸತ್ಕರಿಸುವ ಕಾರ್ಯಕ್ರಮ ನಿರೂಪಣೆಯಾಗಬೇಕು ಎಂದು ಬಿಳಿಮಲೆ ಆಗ್ರಹಿಸಿದ್ದಾರೆ.

ಖಾಸಗಿ ಆಸ್ಪತ್ರೆಗಳ ಕನ್ನಡಪ್ರಿಯ ವೈದ್ಯರಲ್ಲಿಯೂ, ಆಸ್ಪತ್ರೆಗಳ ಮುಖ್ಯಸ್ಥರಲ್ಲಿಯೂ ಕನ್ನಡ ಬಳಕೆಗೆ ರಾಜ್ಯ ಸರಕಾರವು ಪ್ರೋತ್ಸಾಹದಾಯಕ ವಾತಾವರಣವನ್ನು ಒದಗಿಸುತ್ತದೆ ಎಂಬ ಭರವಸೆ ಮೂಡಿಸಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಸರಕಾರ ನೀತಿ ನಿರೂಪಣೆಗೆ ಮುಂದಾಗಬೇಕೆಂದು ಪುರುಷೋತ್ತಮ ಬಿಳಿಮನೆ ಕೋರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News