ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಕಡ್ಡಾಯ, ಕೆಜಿಎಫ್‍ನಲ್ಲಿ ಗಣಿ ಗುತ್ತಿಗೆಗೆ ಸಚಿವ ಸಂಪುಟ ಒಪ್ಪಿಗೆ

Update: 2024-06-20 14:03 GMT

ಬೆಂಗಳೂರು : ಸ್ವಾತಂತ್ರ್ಯೋತ್ಸವ ದಿನಾಚರಣೆ ಸಂದರ್ಭದಲ್ಲಿ ಸರಕಾರಿ ಶಾಲಾ-ಕಾಲೇಜು, ಸರಕಾರಿ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಇಡಬೇಕು. ಕೋಲಾರ ಜಿಲ್ಲೆಯ ಕೆಜಿಎಫ್‍ನಲ್ಲಿ ಗಣಿ ಗುತ್ತಿಗೆ, ಸರಕಾರಿ ಶಾಲಾ, ಕಾಲೇಜುಗಳಲ್ಲಿ ಉಚಿತ ವಿದ್ಯುತ್ ಮತ್ತು ನೀರಿನ ಸೌಲಭ್ಯ ಯೋಜನೆ ಅನುಷ್ಠಾನಕ್ಕೆ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, "ಗಣರಾಜ್ಯೋತ್ಸವ ದಿನದೊಂದಿಗೆ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ, ನವೆಂಬರ್ 26ರ ಸಂವಿಧಾನದ ದಿನಾಚರಣೆ ವೇಳೆ ರಾಜ್ಯದ ಎಲ್ಲ ಸರಕಾರಿ ಕಚೇರಿ, ಸರಕಾರಿ ಸ್ವಾಮ್ಯದ ಸಂಸ್ಥೆಗಳು ಹಾಗೂ ಶಾಲಾ-ಕಾಲೇಜು ಸೇರಿ ಸರಕಾರದ ವತಿಯಿಂದ ನಡೆಯುವ ಎಲ್ಲ ಸಮಾರಂಭಗಳಲ್ಲಿ ಮಹಾತ್ಮ ಗಾಂಧೀಜಿ ಭಾವಚಿತ್ರದೊಂದಿಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ಸಹ ಕಡ್ಡಾಯವಾಗಿಡಲು ಸಂಪುಟ ಸಭೆ ನಿರ್ಧರಿಸಿದೆ ಎಂದರು.

ಭಾರತ್ ಚಿನ್ನದ ಗಣಿ ಸಂಸ್ಥೆಯ, ಕೆಜಿಎಫ್‍ನಲ್ಲಿ ನಿಷ್ಕ್ರಿಯಗೊಂಡಿರುವ ಗಣಿಗುತ್ತಿಗೆಯ 1003.4 ಎಕರೆ ಪ್ರದೇಶದಲ್ಲಿ ಗಣಿ ಚಟುವಟಿಕೆಗಳನ್ನು ಮುಂದುವರೆಸಲು ಕೇಂದ್ರ ಸರಕಾರ ಸಲ್ಲಿಸಿರುವ ಪ್ರಸ್ತಾವನೆಗೆ ಸಚಿವ ಸಂಪುಟ ಸಹಮತಿ ನೀಡಿದೆ. ಒಟ್ಟಾರೆ, 5213.21 ಹೆಕ್ಟೇರ್ ಪ್ರದೇಶದಲ್ಲಿ ಗಣಿ ಚಟುವಟಿಕೆಗಳು ನಡೆಯಲಿವೆ ಎಂದು ಅವರು ಹೇಳಿದರು.

2022-23ರ ವರೆಗೆ ಬಿಜಿಎಂಎಲ್ ರಾಜ್ಯಕ್ಕೆ 75.24ಕೋಟಿ ರೂ. ಬಾಕಿ ಮೊತ್ತವನ್ನು ಪಾವತಿಸಬೇಕಿದೆ. 2,330 ಎಕರೆ ಭೂಮಿಯಲ್ಲಿ ಕೈಗಾರಿಕಾ ವಸಾಹತು ಸ್ಥಾಪಿಸಲು ನೀಡಬೇಕೆನ್ನುವ ಬೇಡಿಕೆ ರಾಜ್ಯ ಸರಕಾರದ್ದು ಆಗಿದೆ. ಇದರಿಂದ ಸಾವಿರಾರು ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು.

ಉನ್ನತ ಶಿಕ್ಷಣ ಇಲಾಖೆಯ ವಿಶ್ವವಿದ್ಯಾಲಯಗಳಲ್ಲಿ ರಾಜ್ಯದಲ್ಲಿ ಪ್ರಧಾನ ಮಂತ್ರಿ ಉಚ್ಛತರ್ ಶಿಕ್ಷಾ ಅಭಿಯಾನ ಯೋಜನೆ ಆಯಾ ವಿಶ್ವವಿದ್ಯಾಲಯಗಳ ವಿಸ್ತೃತ ಯೋಜನಾ ವರದಿಯಲ್ಲಿ ಸೂಚಿಸಿರುವಂತೆ ಬೆಂಗಳೂರು ವಿಶ್ವವಿದ್ಯಾಲಯ, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ಕರ್ನಾಟಕ ವಿಶ್ವವಿದ್ಯಾಲಯ, ಮಂಗಳೂರು ವಿಶ್ವವಿದ್ಯಾಲಯ, ಕಲಬುರಗಿ ವಿಶ್ವವಿದ್ಯಾಲಯ ಹಾಗೂ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯಗಳಲ್ಲಿ ಕೇಂದ್ರದ ವಂತಿಕೆ 167.86 ಕೋಟಿ ರೂ., ರಾಜ್ಯದ ವಂತಿಕೆ 111.91 ಕೋಟಿ ಸೇರಿ ಒಟ್ಟು 279.77 ಕೋಟಿ ರೂಪಾಯಿಗಳಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಅವರು ಹೇಳಿದರು.

ಮೈಸೂರಿನ ಕೆ.ಆರ್.ಆಸ್ಪತ್ರೆಯ ಆವರಣದಲ್ಲಿ ನೂತನ ಹೊರರೋಗಿ ವಿಭಾಗದ ಕಟ್ಟಡ ನಿರ್ಮಾಣ ಕಾಮಗಾರಿ 75 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಅನುಮೋದಿಸಲಾಗಿದೆ. ರಾಜ್ಯದ 46,829 ಸರಕಾರಿ ಶಾಲೆಗಳು ಮತ್ತು 1234 ಸರಕಾರಿ ಪದವಿ ಪೂರ್ವ ಕಾಲೇಜುಗಳಿಗೆ ಉಚಿತ ವಿದ್ಯುತ್ ಮತ್ತು ನೀರಿನ ಸೌಲಭ್ಯ ಯೋಜನೆಯನ್ನು 29.19 ಕೋಟಿ ರೂಪಾಯಿ ಅಂದಾಜು ಮೊತ್ತದಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಅವರು ಹೇಳಿದರು.

ರಾಜ್ಯದ 8 ಜಿಲ್ಲೆಗಳಲ್ಲಿನ 201 ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ(ಕ್ರೈಸ್) ವಸತಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಮಗ್ರ ವ್ಯಕ್ತಿತ್ವ ಅಭಿವೃದ್ಧಿ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುವುದು ಎಂದು ಎಚ್.ಕೆ.ಪಾಟೀಲ್ ಹೇಳಿದರು.

ಸ್ಥಳೀಯ ಸಂಸ್ಥೆಗಳಲ್ಲಿನ ನೀರಿನ ಬಳಕೆ ಶುಲ್ಕದ ಬಾಕಿ ಮೊತ್ತ ಬಡ್ಡಿ ಸಹಿತ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಪ್ರಸ್ತುತ ವಾರ್ಷಿಕ ಬೇಡಿಕೆ ಸಹಿತ ವಸೂಲಿ ಮಾಡುವುದು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬಹುದಿನಗಳಿಂದ ಬಾಕಿ ಇರುವ ಆಸ್ತಿ ತೆರಿಗೆ ಮತ್ತು ವಾರ್ಷಿಕ ಬೇಡಿಕೆಗಳಿಗನುಗುಣವಾಗಿ ಆಸ್ತಿಗಳಿಂದ ವಸೂಲಿ ಮಾಡಬೇಕಾದ ಆಸ್ತಿ ತೆರಿಗೆಯನ್ನು ಸಮರ್ಪಕ ವಸೂಲಿಗೆ ಸ್ಥಳೀಯ ಮಹಿಳಾ ಸ್ವ-ಸಹಾಯ ಗುಂಪುಗಳ ಸೇವೆಯನ್ನು ಪಡೆಯುವುದು, ಈ ಗುಂಪುಗಳಿಗೆ ವಸೂಲಾದ ಮೊತ್ತದಲ್ಲಿನ ಶೇ.5 ರಷ್ಟನ್ನು ಪ್ರೋತ್ಸಾಹ ಧನ ರೂಪದಲ್ಲಿ ನೀಡಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ಅವರು ಹೇಳಿದರು.

ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಒಟ್ಟು 33 ಘಟಕಗಳನ್ನು ವಿಶೇಷ ಪೊಲೀಸ್ ಠಾಣೆಗಳೆಂದು ಘೋಷಣೆ ಮಾಡಲು ಸಚಿವ ಸಂಪುಟ ತಾತ್ವಿಕ ಒಪ್ಪಿಗೆ ನೀಡಿದೆ. ಸಮಾಜ ಕಲ್ಯಾಣ ಇಲಾಖೆ ಮತ್ತು ಗೃಹ ಇಲಾಖೆಗಳು ಎರಡೂ ಸೇರಿ ಸಚಿವ ಸಂಪುಟದ ಈ ತೀರ್ಮಾನ ಅನುಷ್ಠಾನಗೊಳಿಸಲು ಸಿಬ್ಬಂದಿ ಮತ್ತು ಇತರ ವಿವರಗಳನ್ನು ಅಂತಿಮಗೊಳಿಸಲು ಸೂಚಿಸಲಾಗಿದೆ. ಇದು ಪೊಲಿಸ್ ಠಾಣೆಗಳ ಮೇಲಿನ ಕೆಲಸದ ಹೊರೆಯನ್ನು ತಗ್ಗಿಸುವ ಉದ್ದೇಶವನ್ನು ಹೊಂದಿದೆ ಎಂದು ಅವರು ವಿವರಿಸಿದರು.

ಕೊಪ್ಪಳ ತಾಲ್ಲೂಕಿನ ಮುನಿರಾಬಾದ್ ಗ್ರಾಮದಲ್ಲಿ ವೀರಶೈವ ವಿದ್ಯಾವರ್ಧಕ ಸಂಘ ನಡೆಸುತ್ತಿರುವ ವಿಜಯನಗರ ಸಂಯುಕ್ತ ಪದವಿ ಪೂರ್ವ ಕಾಲೇಜಿಗೆ ಗುತ್ತಿಗೆ ನೀಡಲಾಗಿರುವ ಕರ್ನಾಟಕ ನೀರಾವರಿ ನಿಗಮದ 2.70 ಎಕರೆ ಜಾಗದ ಗುತ್ತಿಗೆ ಅವಧಿಯನ್ನು 2053 ರವರೆಗೆ ವಿಸ್ತರಿಸಲು ಹಾಗೂ ವಾರ್ಷಿಕ 2 ಲಕ್ಷ ರೂಪಾಯಿ ವಾರ್ಷಿಕ ಬಾಡಿಗೆ ನಿಗಧಿಪಡಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News