ಸ್ವಾತಂತ್ರ್ಯ ದಿನಾಚರಣೆ ಭಾಷಣ ವೇಳೆ ಸುಸ್ತಾದ ಸಚಿವ ಡಾ.ಎಚ್.ಸಿ.ಮಹದೇವಪ್ಪ
ಮೈಸೂರು: 77 ನೇ ಸ್ವಾತಂತ್ರ್ಯೋತ್ಸವ ಆಚರಣೆ ಮಾಡಿ ಭಾಷಣ ಓದುವ ವೇಳೆ ಸಮಾಜ ಕಲ್ಯಾಣ ಹಾಗೂ ಮೈಸೂರು ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸುಸ್ತಾಗಿ ಕುಳಿತುಕೊಂಡ ಘಟನೆ ನಡೆಯಿತು.
ನಗರದ ಬನ್ನಿಮಂಟಪದಲ್ಲಿರುವ ಪಂಜಿನ ಕವಾಯಿತು ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ 77 ನೇ ಸ್ವಾತಂತ್ರಯೋತ್ಸವ ಆಚರಣೆಯನ್ನು ಸಚಿವ ಡಾ.ಎಚ್.ಸಿ.ಮಹದೇವಪ್ಪ ಧ್ವಜಾರೋಹಣ ನೆರವೇರಿಸಿ ಸುದೀರ್ಘ ಭಾಷಣ ಮಾಡುತ್ತಿದ್ದರು. ಬೆಳಗ್ಗಿನ ಬಿಸಿಲನ ತಾಪಕ್ಕೆ ಸುಸ್ತಾದ ಸಚಿವರು ಭಾಷಣ ಪ್ರತಿಯನ್ನು ಇಟ್ಟುಕೊಂಡಿದ್ದ ಪೋಡಿಯಂಗೆ ಒರಗಿದರು. ತಕ್ಷಣ ಪಕ್ಕದಲ್ಲಿದ್ದ ಪೊಲೀಸ್ ಸಿಬ್ಬಂದಿ ಅವರನ್ನು ಹಿಡಿದುಕೊಂಡರು.ನಂತರ ಧ್ವಜ ಸ್ಥಂಭದ ಬಳಿಯೇ ಕುರ್ಚಿಯಲ್ಲಿ ಕುಳ್ಳಿರಿಸಿ ನೀರನ್ನು ಕುಡಿಸಲಾಯಿತು.
ಸಚಿವ ಡಾ.ಎಚ್.ಸಿ.ಮಹದೇವಪ್ಪ ಸುಸ್ತಾಗಿ ಕುಳಿತುಕೊಳ್ಳುತ್ತಿದ್ದಂತೆ ವೇದಿಯಲ್ಲೇ ಇದ್ದ ಶಾಸಕ ತನ್ವೀರ್ ಸೇಠ್ ಓಡಿ ಬಂದು ಸಚಿವರಿಗೆ ಚಾಕೊಲೇಟ್ ತಿನ್ನಿಸಿದರು. ಸ್ವಲ್ಪ ಸಮಯದ ನಂತರ ಚೇತರಿಸಿಕೊಂಡ ಸಚಿವ ಮಹದೇವಪ್ಪ ಮೊದಲಿನಂತೆ ಆದರು.