1518 ಕೋಟಿ ರೂ.ವೆಚ್ಚದಲ್ಲಿ 53 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಒಳಚರಂಡಿ ವ್ಯವಸ್ಥೆ: ಸಚಿವ ಸಂಪುಟ ತೀರ್ಮಾನ

Update: 2023-11-23 17:28 GMT

ಬೆಂಗಳೂರು: ಬಳಸಿದ ನೀರು ನಿರ್ವಹಣೆ ಯೋಜನೆಯ ಹಂತ-2ರಲ್ಲಿ ರಾಜ್ಯದ 53 ಆದ್ಯತೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ(ಎನ್‍ಜಿಟಿ)ದ ಪರಿಸರ ಪರಿಹಾರ ನಿಧಿಯಡಿಯಲ್ಲಿ ಒಟ್ಟು 1518.00 ಕೋಟಿ ರೂ.ಯೋಜನಾ ವೆಚ್ಚದಲ್ಲಿ ಒಳಚರಂಡಿ ವ್ಯವಸ್ಥೆಯ ನಿರ್ಮಾಣ, ಉನ್ನತೀಕರಣ ಕಾಮಗಾರಿಗಳನ್ನು ಕೆಯುಐಡಿಎಫ್‍ಸಿ ವತಿಯಿಂದ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲು ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ.

ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಸಂಪುಟದ ನಿರ್ಣಯಗಳ ಮಾಹಿತಿಯನ್ನು ಒದಗಿಸಿದರು.

ಅನ್ನಭಾಗ್ಯ ಯೋಜನೆಯಡಿ ಪಡಿತರ ಚೀಟಿದಾರರ ಕುಟುಂಬದ ಮುಖ್ಯಸ್ಥರ ನಂತರ ಬರುವ ಅಥವಾ ಸ್ಥಾನಿಕವಾಗಿ ಲಭ್ಯವಾಗುವ ಅತ್ಯಂತ ಹಿರಿಯ ವ್ಯಕ್ತಿಗೆ ಆಧಾರ್ ಬ್ಯಾಂಕ್ ಖಾತೆ, ಪೋಸ್ಟಲ್ ಬ್ಯಾಂಕ್ ಖಾತೆ ಹಾಗೂ ಇತರೆ ಅರ್ಹತೆಗಳನ್ನಾಧರಿಸಿ, ಸೂಕ್ತ ಕಾರ್ಯತಂತ್ರ ರೂಪಿಸಿ ಎಲ್ಲ ಅರ್ಹ ಫಲಾನುಭವಿಗಳಿಗೆ ಸರಕಾರದ ಮಾನದಂಡಗಳನ್ವಯ ಡಿ.ಬಿ.ಟಿ ಮೂಲಕ ಹಣ ಸಂದಾಯ ಮಾಡುವ ಯೋಜನೆಗೆ ಒಳಪಡಿಸಲು ಸಚಿವ ಸಂಪುಟವು ನಿರ್ಧರಿಸಿದೆ ಎಂದು ಅವರು ಹೇಳಿದರು.

ರಾಜ್ಯ ಸಿವಿಲ್ ಸೇವೆಗಳಲ್ಲಿನ ಗ್ರೂಪ್-ಎ(ಕಿರಿಯ ಶ್ರೇಣಿ), ಗ್ರೂಪ್-ಬಿ, ಗ್ರೂಪ್-ಸಿ ಮತ್ತು ಗ್ರೂಪ್-ಡಿ ಹುದ್ದೆಗಳಿಗೆ ನೀಡುವ ಮುಂಭಡ್ತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬ್ಯಾಕ್‍ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಹೆಚ್ಚುವರಿ ಬಿಂದುಗಳನ್ನು ಗುರುತಿಸಲು ಮತ್ತು ಗ್ರೂಪ್ ಡಿ ಮತ್ತು ಗ್ರೂಪ್ ಸಿ ಹುದ್ದೆಗಳಿಗೆ ನೀಡುವ ಮುಂಭಡ್ತಿಯಲ್ಲಿ ಎದ್ದು ಕಾಣುವ ಅಂಗವೈಕಲ್ಯವುಳ್ಳ ಸರಕಾರಿ ನೌಕರರಿಗೆ ಈಗಾಗಲೆ ಒದಗಿಸಿರುವ ಮೀಸಲಾತಿಯನ್ನೊಳಗೊಂಡ ಒಂದೇ ಕ್ರೋಢೀಕೃತ ರೋಸ್ಟರನ್ನು ಜಾರಿಗೊಳಿಸಲು ತಯಾರಿಸಿರುವ ಸರಕಾರಿ ಆದೇಶವನ್ನು ಅದರ ಅನುಬಂಧಗಳ ಸಮೇತ ಹೊರಡಿಸಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ ಎಂದು ಅವರು ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 2731 ಆರೋಗ್ಯ ಸಂಸ್ಥೆಗಳಲ್ಲಿ ಜೈವಿಕ ವೈದ್ಯಕೀಯ ಸಲಕರಣೆಗಳ ಮೇಲ್ವಿಚಾರಣೆ ಮತ್ತು ನಿರ್ವಹಣೆಯನ್ನು ವಾರ್ಷಿಕ ವೆಚ್ಚ 32.74 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ 3 ವರ್ಷಗಳ ಅವಧಿಗೆ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ನಿರ್ವಹಣೆ ಮಾಡಲು ಅನುಮೋದನೆ ನೀಡಲಾಗಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.

ಹುಬ್ಬಳ್ಳಿಯಲ್ಲಿರುವ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ ಆವರಣದಲ್ಲಿ ಸ್ನಾತಕ ವಿದ್ಯಾರ್ಥಿಗಳ ವಸತಿ ನಿಲಯ ಕಟ್ಟಡ ಕಾಮಗಾರಿಗೆ 16.18 ಕೋಟಿ ರೂ.ಗಳ ಮತ್ತು ಸ್ನಾತಕ ವಿದ್ಯಾರ್ಥಿನಿಯರ ವಸತಿ ನಿಲಯ ಕಟ್ಟಡ ಕಾಮಗಾರಿಗೆ 11.51 ಕೋಟಿ ರೂ.ಗಳ ಅಂದಾಜು ವೆಚ್ಚಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದರು.

ಪಾಶ್ರ್ವವಾಯು ಮತ್ತು ತಲೆಗೆ ತೀವ್ರ ಪೆಟ್ಟಾದ ರೋಗಿಗಳ ಆರೈಕೆಗಾಗಿ ಕರ್ನಾಟಕದಲ್ಲಿ ಹಬ್ ಮತ್ತು ಸ್ಪೋಕ್ ಮಾದರಿಯನ್ನು ಎರಡು ಹಂತಗಳಲ್ಲಿ 51.44 ಕೋಟಿ ರೂ.ಗಳಲ್ಲಿ ಅನುಷ್ಠಾನಗೊಳಿಸಲು, ಮೊದಲನೆ ಹಂತದಲ್ಲಿ ಬೆಂಗಳೂರಿನ ನಿಮ್ಹಾನ್ಸ್ ಅನ್ನು ಹಬ್ ಮತ್ತು ಹುಬ್ಬಳ್ಳಿಯಲ್ಲಿರುವ ಕಿಮ್ಸ್ ಅನ್ನು ಸ್ಪೋಕ್ ಆಗಿ ಕಾರ್ಯನಿರ್ವಹಿಸಲು ಒಟ್ಟು 11.26 ಕೋಟಿ ರೂ.ಗಳ ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.

ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಬರುವ ವೈದ್ಯಕೀಯ ಸಂಸ್ಥೆಗಳಿಗೆ ಕೋವಿಡ್ ಸಂದರ್ಭದಲ್ಲಿ ಮುಂಬೈನ ಪ್ರೋಡೆಂಟ್ ಮ್ಯಾನೇಜ್‍ಮೆಂಟ್ ಸಲ್ಯೂಷನ್ಸ್ ಮತ್ತು ಬೆಂಗಳೂರಿನ ಲಜ್ ಎಕ್ಸ್‍ಪೋರ್ಟ್ ಲಿಮಿಟೆಡ್ ನವರು ಪಿಪಿಇ ಕಿಟ್‍ಗಳನ್ನು ಸರಬರಾಜು ಮಾಡಿರುವ ಬಗ್ಗೆ ಬಿಲ್ ಪಾವತಿ ಸಂಬಂಧ ಹೈಕೋರ್ಟ್ ಸೆ.15ರಂದು ನೀಡಿರುವ ತೀರ್ಪಿನಂತೆ 38.26 ಕೋಟಿ ರೂ.ಗಳ ಮೊತ್ತವನ್ನು ಹೈಕೋರ್ಟ್‍ನಲ್ಲಿ ಠೇವಣಿ ಇಡುವ ಬಗ್ಗೆ ಕಾನೂನು ಇಲಾಖೆ ಅಭಿಪ್ರಾಯ ಪಡೆಯಲು ನಿರ್ಧರಿಸಲಾಯಿತು ಎಂದು ಅವರು ಹೇಳಿದರು.

ಹುಬ್ಬಳ್ಳಿಯ ಶ್ರೀ ಶಿರಡಿ ಸಾಯಿ ಸದ್ಭಕ್ತ ಮಂಡಳಿಗೆ ಸಾಯಿ ಮಂದಿರಕ್ಕಾಗಿ ಲೀಸ್ ಆಧಾರದ ಮೇಲೆ ನೀಡಲಾಗಿದ್ದ ಹುಬ್ಬಳ್ಳಿ ವಿಭಾಗದ ಹಳೆ ಕೋರ್ಟ್ ಹತ್ತಿರ ಇರುವ ಹುಬ್ಬಳ್ಳಿ ಶಹರದ ಸಿಟಿಎಸ್ ನಂ.498ರಲ್ಲಿನ ಲೋಕೋಪಯೋಗಿ ಇಲಾಖೆಯ 100/106 ಅಡಿ ಜಾಗವನ್ನು ಪ್ರಸಕ್ತ ಸಾಲಿನ ಫೆ.5ರಿಂದ ಪೂರ್ವಾನ್ವಯವಾಗುವಂತೆ ವಾರ್ಷಿಕ 20 ಸಾವಿರ ರೂ.ಗಳನ್ನು ನಿಗದಿಪಡಿಸಿ ಮುಂದಿನ 30 ವರ್ಷಗಳ ಅವಧಿಗೆ ಲೀಸ್ ಅವಧಿಯನ್ನು ವಿಸ್ತರಿಸಲು ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.

2023-24ರ ಶೈಕ್ಷಣಿಕ ವರ್ಷದಲ್ಲಿ 17 ಜಿಲ್ಲೆಗಳ 93 ಮಹತ್ವಾಕಾಂಕ್ಷೆಯ ತಾಲೂಕುಗಳಲ್ಲಿನ 24,347 ಶಾಲೆಗಳಿಗೆ 20 ಕೋಟಿ ರೂ.ವೆಚ್ಚದಲ್ಲಿ ಪುಸ್ತಕ ಮತ್ತು ನಿಯತಕಾಲಿಕೆಗಳನ್ನು ಖರೀದಿಸಲು ಅನುಮೋದನೆ ನೀಡಲಾಗಿದೆ. 2024ನೆ ಸಾಲಿನ ರಜಾ ಪಟ್ಟಿಯನ್ನು ಮತ್ತು ಪರಿಮಿತ ರಜಾ ದಿನಗಳನ್ನು ಸಚಿವ ಸಂಪುಟ ಅನುಮೋದಿಸಿದೆ ಎಂದು ಅವರು ಹೇಳಿದರು.

ಕಸ್ತೂರ್ಬಾ ಗಾಂಧಿ ಬಾಲಿಕ ಹಾಸ್ಟೆಲ್‍ಗಳಲ್ಲಿ ಡಾರ್ಮಿಟರಿ ನಿರ್ಮಾಣ, ವಸತಿ ಶಾಲೆಗಳ ದುರಸ್ಥಿ ಮತ್ತು ಸ್ಮಾರ್ಟ್ ಕ್ಲಾಸ್ ರೂಂ. ಅಭಿವೃದ್ಧಿ ಹಾಗೂ ವಸತಿ ಶಾಲೆ ಮತ್ತು ಹಾಸ್ಟೆಲ್‍ಗಳಿಗೆ ಬಂಕರ್ ಕಾಟ್ ಗಳ ಖರೀದಿ ಒಟ್ಟು 50 ಕೋಟಿ ರೂ.ಗಳ ಮೊತ್ತದ ಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.

ಬಾಗಲಕೋಟೆ ಜಿಲ್ಲೆಯ ಬಾದಾಮಿ ಮತ್ತು ಕೆರೂರು ಪಟ್ಟಣಗಳು ಹಾಗೂ ಮಾರ್ಗ ಮಧ್ಯದ 18 ಗ್ರಾಮಗಳಿಗೆ ಆಲಮಟ್ಟಿ ಜಲಾಶಯದ ಹಿನ್ನೀರು ಮೂಲದಿಂದ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಯು 250.36 ಕೋಟಿ ರೂ.ಗಳ  ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News