ಡಿ.23ಕ್ಕೆ ಅಮಿತ್ ಶಾ ನೇತೃತ್ವದಲ್ಲಿ ರಾಜ್ಯಕ್ಕೆ ಬರ ಪರಿಹಾರ ಸಂಬಂಧ ಸಭೆ : ಸಚಿವ ಕೃಷ್ಣ ಬೈರೇಗೌಡ

Update: 2023-12-20 15:54 GMT

ಹೊಸದಿಲ್ಲಿ: ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆಗೊಳಿಸುವ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಡಿ.23 ರಂದು ಉನ್ನತ ಮಟ್ಟದ ಸಭೆ ನಡೆಯಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಬುಧವಾರ ಹೊಸದಿಲ್ಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕೇಂದ್ರ ಕೃಷಿ ಸಚಿವ ಅಜುರ್ನ್ ಮುಂಡಾ ಅವರನ್ನು ಭೇಟಿಯಾದ ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ಅವರು, ರಾಜ್ಯ ಈ ವರ್ಷ ಭೀಕರ ಬರಕ್ಕೆ ತುತ್ತಾಗಿದೆ. ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರಿಯಾದ ಸಮಯದಲ್ಲಿ ಅವರಿಗೆ ಪರಿಹಾರ ಹಣ ನೀಡಬೇಕಿದೆ. ಹೀಗಾಗಿ ಕೇಂದ್ರ ಸರಕಾರ ಶೀಘ್ರವಾಗಿ ಬರ ಪರಿಹಾರ ಮನವಿಯ ಬಗ್ಗೆ ಸಭೆ ನಡೆಸಿ ತೀರ್ಮಾನ ತೆಗೆದುಕೊಂಡು, ಹಣ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆಗೆ ಕೇಂದ್ರ ಸಚಿವ ಅಮಿತ್ ಶಾರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ ಎಂದರು.

ರಾಜ್ಯದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಅಮಿತ್ ಶಾ ಡಿ.23 ರಂದು ಉನ್ನತ ಮಟ್ಟದ ಸಭೆ ನಡೆಸಿ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಮಾಡುವ ಸಂಬಂಧ ತೀರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯದಲ್ಲಿರುವ ಸಣ್ಣ ರೈತರ ಸಂಖ್ಯೆಯ ನಿಖರ ಮಾಹಿತಿಯನ್ನು ಅಮಿತ್ ಶಾ ಅವರಿಗೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಬಿಡುಗಡೆಯಾಗಲಿರುವ ಬರ ಪರಿಹಾರ ಹಣದ ಮೊತ್ತ ಸಣ್ಣ ರೈತರ ಸಂಖ್ಯೆಗೆ ಅನುಗುಣವಾಗಿರುತ್ತದೆ. ಆದರೆ, ರಾಜ್ಯದ ಸಣ್ಣ ರೈತರ ಸಂಖ್ಯೆಯ ಬಗ್ಗೆ ಕೇಂದ್ರ ಸರಕಾರದ ಬಳಿ ವಾಸ್ತವ ಅಂಕಿಅಂಶಗಳಿಲ್ಲ. ಕೇಂದ್ರ ಸರಕಾರದ ಅಂಕಿಅಂಶಗಳ ಪ್ರಕಾರ ರಾಜ್ಯದಲ್ಲಿರುವ ಸಣ್ಣ ರೈತರ ಸಂಖ್ಯೆ ಕೇವಲ ಶೇ.44 ರಷ್ಟು ಮಾತ್ರ. ಬರ ಪರಿಹಾರ ಬಿಡುಗಡೆ ಸಂದರ್ಭದಲ್ಲಿ ಈ ಅಂಕಿಅಂಶವನ್ನು ಪರಿಗಣಿಸಿದರೆ ರಾಜ್ಯಕ್ಕೆ ನಷ್ಟವಾಗುತ್ತದೆ ಎಂದು ಅವರು ಹೇಳಿದರು.

ರಾಜ್ಯದ ಸಣ್ಣ ರೈತರ ವಾಸ್ತವ ಸಂಖ್ಯೆ ಶೇ.70 ರಿಂದ ಶೇ.75. ಈ ಬಗ್ಗೆ ರೈತರ ಆಧಾರ್ ಲಿಂಕ್ ಜೊತೆಗಿನ ನಿಖರ ಅಂಕಿಅಂಶವನ್ನು ಅಮಿತ್ ಶಾ ಅವರಿಗೆ ನೀಡಲಾಗಿದೆ. ಬರ ಪರಿಹಾರ ಬಿಡುಗಡೆ ಮಾಡುವ ಸಂದರ್ಭದಲ್ಲಿ ಈ ಅಂಕಿಅಂಶವನ್ನು ಪರಿಗಣಿಸುವಂತೆ ಮನವಿ ಮಾಡಿರುವುದಾಗಿ ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.

ನ್ಯಾಫೆಡ್ ಮೂಲಕ ಕೊಬ್ಬರಿ ಖರೀದಿಗೆ ಒತ್ತಾಯ: ಕೇಂದ್ರ ಕೃಷಿ ಸಚಿವ ಅರ್ಜುನ್ ಮುಂಡಾ ಅವರನ್ನು ಭೇಟಿ ಮಾಡಿದ ಸಚಿವ ಕೃಷ್ಣ ಬೈರೇಗೌಡ ಹಾಗೂ ಶಾಸಕ ಕೆ.ಎಂ. ಶಿವಲಿಂಗೇಗೌಡ, ಕೊಬ್ಬರಿ ಬೆಳೆಯನ್ನು ಕೇಂದ್ರ ಸರಕಾರವೇ ‘ನ್ಯಾಫೆಡ್’ ಮುಖಾಂತರ ಖರೀದಿ ಮಾಡಬೇಕು ಎಂದು ಮನವಿ ಸಲ್ಲಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News